ಚಿತ್ರದುರ್ಗ: ನಗರದ ಮಡಿವಾಳ ಮಾಚಿದೇವ ಗುರುಪೀಠದಲ್ಲಿ ಭಾನುವಾರ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಗಿನೆಲೆ ಗುರು ಪೀಠದ ಶ್ರೀ ನಿರಂಜನಾಂದಪುರಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಗೌಪ್ಯ ಸಭೆ ನಡೆದಿದೆ.
ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಗಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಜಾಗದ ವಿಷಯವಾಗಿ ಇತ್ತೀಚೆಗೆ ಯಾದವ ಗುರುಪೀಠದ ಸ್ವಾಮೀಜಿಗಳು ಹಾಗೂ ಭಕ್ತರ ಮಧ್ಯೆ ಉಂಟಾದ ಸಂಘರ್ಷದ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಅಹಿಂದ ವರ್ಗದಲ್ಲಿ ಯಾವುದೇ ಕಾರಣಕ್ಕೂ ಸಂಘರ್ಷ ಮಾಡಿಕೊಳ್ಳುವುದು ಬೇಡ. ಆಕಸ್ಮಿಕವಾಗಿ ನಡೆಯುವ ಸಂಘರ್ಷಗಳಿಗೆ ಹಿಂದ ಒಕ್ಕೂಟದ ಸ್ವಾಮೀಜಿಗಳು ಮಧ್ಯಪ್ರವೇಶ ಮಾಡಬೇಕು. ವಿವಾದಗಳನ್ನು ಮಾಧ್ಯಮಗಳ ಎದುರು ಬಹಿರಂಗಪಡಿಸೋದು, ಕೋರ್ಟ್‌ಗೆ ಹೋಗುವುದು ಸಮಂಜಸವಲ್ಲ. ಅತಿ ಮುಖ್ಯವಾಗಿ ಹಿಂದ ಒಕ್ಕೂಟದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎನ್ನಲಾಗಿದೆ.
ಗೌಪ್ಯ ಸಭೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ವಾಲ್ಮೀಕಿ
ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಶ್ರೀ ವೇಮನ ಸ್ವಾಮೀಜಿ,ಶ್ರೀ ಮಾಚಿದೇವ ಸ್ವಾಮೀಜಿ, ಶ್ರೀ ಯಾದವ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ ಸೇರಿ 18 ಸಮುದಾಯಗಳ ಮಠಾಧೀಶರು ಭಾಗವಹಿಸಿದ್ದರು.