Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, 14 ತಿಂಗಳು ಸರ್ಕಾರ ಮಾಡಿದೆವು. ಇದೀಗ ಸರ್ಕಾರ ಪತನಗೊಂಡಿದೆ. ಮೈತ್ರಿ ಮುಂದುವರಿಕೆ ವಿಚಾರದಲ್ಲಿ ಈಗಲೂ ಕಾಂಗ್ರೆಸ್ ನಾಯಕರ ತೀರ್ಮಾನ ಎದುರು ನೋಡುತ್ತಿದ್ದೇನೆ. ಬಿಜೆಪಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅಧಿಕೃತ ಪ್ರತಿಪಕ್ಷ ನಾಯಕರಾಗಿರುತ್ತಾರೆ, ಕುಮಾರಸ್ವಾಮಿ ಜೆಡಿಎಸ್ ನಾಯಕರಾಗಿ ಸದನದಲ್ಲಿ ಕೆಲಸ ಮಾಡ್ತಾರೆ ಎಂದು ಹೇಳಿದರು. ವಿಧಾನಸಭೆಯಲ್ಲಿ ಸೋಮವಾರ ಹಣಕಾಸು ಮಸೂದೆಗೆ ನಾವು ಅಡ್ಡಿಮಾಡುವುದಿಲ್ಲ, ಒಪ್ಪಿಗೆ ನೀಡ್ತೇವೆ ಎಂದರು.
ಮತ್ತೆ ಕಣ್ಣೀರು ಹಾಕಿದ ಗೌಡರು
ಮೈತ್ರಿ ಸರ್ಕಾರದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನಮಾನ ಕೊಡಲು ಆಗಿಲ್ಲ ಎಂದು ಹೇಳಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಣ್ಣೀರು ಹಾಕಿದರು. ಭಾನುವಾರ ಜೆ.ಪಿ. ಭವನದಲ್ಲಿ ಮಹಾಲಕ್ಷ್ಮೀಲೇಔಟ್ ಹಾಗೂ ಯಶವಂತರಪುರ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿ, ‘ ಪಕ್ಷ ಉಳಿಸಲು ಯಾವುದೇ ಅಧಿಕಾರ, ಆಮಿಷಕ್ಕೆ ಒಳಗಾಗದೇ ಕಾರ್ಯಕರ್ತರು ನನ್ನ ಜೊತೆ ಸಹಕರಿಸಿದ್ದಾರೆ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎಂದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಯಾರನ್ನೂ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ. ನನಗಾಗಿ ಹೋರಾಡಿದ ಕಾರ್ಯಕರ್ತರಿಗೆ ನಾನು ಯಾವುದೇ ಸ್ಥಾನಮಾನ ನೀಡಿರಲಿಲ್ಲ . ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೂರನೇ ಒಂದು ಭಾಗ ಎಂಬ ಒಪ್ಪಂದದ ಮೇಲೆ ಕೆಲವು ಸದಸ್ಯರನ್ನು ನೇಮಕ ಮಾಡಿದ್ದೇವೆ. ಹೆಚ್ಚಿನ ಕಾರ್ಯಕರ್ತರು, ಮುಖಂಡರಿಗೆ ಅವಕಾಶ ಮಾಡಿಕೊಡಲು ಆಗಲಿಲ್ಲ, ಕ್ಷಮೆ ಕೇಳ್ತೇನೆ ಎಂದು ದೇವೇಗೌಡರು ಕಣ್ಣೀರು ಹಾಕಿದರು. ಕುಮಾರಸ್ವಾಮಿ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತುಂಬಾ ಕಷ್ಟದಲ್ಲಿ ಸರ್ಕಾರ ನಡೆಸಿದರು. ಆ ನೋವು ಏನು ಅಂತ ನನಗೆ ಗೊತ್ತು ಎಂದು ದೇವೇಗೌಡರು ಭಾವುಕರಾದರು.
‘ಕೈ’ ವಿರುದ್ಧ ಕುಪೇಂದ್ರ ರೆಡ್ಡಿ ಕೋಪ
‘ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಅವರು ಸರಿಯಾಗಿ ಇದ್ದಿದ್ದರೆ ಸರ್ಕಾರ ಬೀಳುತ್ತಿರಲಿಲ್ಲ’ ಎಂದು ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಚುನಾವಣೆ ವೇಳೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದರು. ಇದರಿಂದ ನಮಗೆ ಬರಬೇಕಿದ್ದ ಮುಸ್ಲಿಂ ಮತಗಳು ದೂರ ಆದವು. ಅವರು ಈ ಮಾತು ಹೇಳಿಲ್ಲ ಅಂದಿದ್ದರೆ ಇವತ್ತು ಯಶವಂತಪುರದಲ್ಲಿ ಜವರಾಯಿಗೌಡ ಸೋಲುತ್ತಿರಲಿಲ್ಲ ಎಂದು ಹೇಳಿದರು. ಇದೇ ವೇಳೆ, ಎಸ್.ಟಿ.ಸೋಮಶೇಖರ್ ಬಂದಾಗ ಅವರ ಬಳಿ ಚುನಾವಣೆ ಲೆಕ್ಕ ಕೇಳಬೇಕು ಎಂದು ರೆಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದರು.