Advertisement

ಟೆಂಡರ್‌ ಕೊಡಿಸುವುದಾಗಿ ವಂಚಿಸಿದ ಮೂವರ ಬಂಧನ

06:39 AM Mar 17, 2019 | |

ಬೆಂಗಳೂರು: ವಿಧಾನಸೌಧದಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಲು ಟೆಂಡರ್‌ ಕೊಡಿಸುವುದಾಗಿ ಸ್ಟುಡಿಯೋ ಮಾಲೀಕರೊಬ್ಬರಿಗೆ 8.12 ಲಕ್ಷ ರೂ. ವಂಚಿಸಿದ ಒಂದೇ ಕುಟುಂಬದ ನಾಲ್ವರ ಪೈಕಿ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ 2ನೇ ಹಂತದ ನಿವಾಸಿಗಳಾದ ರಾಜೇಶ್‌ (56), ಆತನ ಪತ್ನಿ ಸತ್ಯಭಾಮಾ (46) ಮತ್ತು ದಂಪತಿ ಪುತ್ರ ಆರ್‌.ಅನುರಾಗ್‌ (27) ಬಂಧಿತರು.

Advertisement

ತಲೆಮರೆಸಿಕೊಂಡಿರುವ ದಂಪತಿಯ ಪುತ್ರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿ ರಾಜೇಶ್‌ ತಾನು ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮುಖ್ಯ ಎಂಜಿನಿಯರ್‌ ಆಗಿದ್ದು, ಕೆಲ ಉದ್ಯಮಿಗಳಿಗೆ ವಿಧಾನಸೌಧದಲ್ಲಿ ವಿವಿಧ ಕಾಮಗಾರಿಗಳ ಟೆಂಟರ್‌ ಕೊಡಿಸುತ್ತೇನೆ. ಉದ್ಯೋಕಾಂಕ್ಷಿಗಳಿಗೆ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ ನಂಬಿಸುತ್ತಿದ್ದ. ನಂತರ ತನ್ನ ಬಾಡಿಗೆ ಮನೆಗೆ ಕರೆಸಿಕೊಂಡು, ಇದು ನಮ್ಮ ಸ್ವಂತ ಮನೆ ಎಂದು ಹೇಳಿ, ಲಕ್ಷಾಂತರ ರೂ. ಪಡೆಯುತ್ತಿದ್ದ.

ಕೊನೆಗೆ ಹಣ ನೀಡದೇ, ಟೆಂಡರ್‌ ಕೂಡ ಕೊಡಿಸದೇ ವಂಚಿಸುತ್ತಿದ್ದ. ಆತನ ಪುತ್ರ ಅನುರಾಗ್‌ ತಾನೊಬ್ಬ ಸಿನಿಮಾ ನಟ. ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ. ಆರೋಪಿಗಳಿಂದ ವಂಚನೆಗೊಳಗಾದ 12ಕ್ಕೂ ಅಧಿಕ ಮಂದಿ ಈಗಾಗಲೇ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಅನಾರೋಗ್ಯಕ್ಕೆ ಹಣ ವ್ಯಯ: ಕೆಲ ವರ್ಷಗಳಿಂದ ತನಗೆ ಕಿಡ್ನಿ ಸಮಸ್ಯೆಯಿದೆ. ಹಲವರ ಬಳಿ ಸಾಲ ಕೇಳಿದ್ದೆ. ಯಾರೂ ಕೊಡಲಿಲ್ಲ. ಆದರೆ, ನಾಲ್ಕೈದು ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯ ಬಳಿ, “ನಾನು ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆ ಮುಖ್ಯಸ್ಥ ವಿಧಾನಸೌಧದಲ್ಲಿ ವಿವಿಧ ಕಾಮಗಾರಿಗಳ ಟೆಂಡರ್‌ ಕೊಡಿಸುತ್ತೇನೆ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದೆ.

ಆತ ಯಾವುದೇ ದಾಖಲೆ ಇಲ್ಲದೆ ಲಕ್ಷಾಂತರ ರೂ. ಹಣ ಕೊಟ್ಟಿದ್ದ. ನಂತರ ಇದನ್ನೇ ವೃತ್ತಿಯನ್ನಾಗಿಸಿಕೊಂಡು, ಪತ್ನಿ ಮತ್ತು ಮಕ್ಕಳನ್ನು ವಂಚನೆ ಕೃತ್ಯಗಳಿಗೆ ಬಳಕೆ ಮಾಡಿಕೊಂಡು ಹತ್ತಾರು ಮಂದಿಗೆ ವಂಚನೆ ಮಾಡಿದ್ದೇನೆ. ಬಂದ ಹಣದಲ್ಲಿ ಮಾಸಿಕ 60 ಸಾವಿರ ರೂ. ಚಿಕಿತ್ಸೆಗೆ ಖರ್ಚು ಮಾಡುತ್ತಿದ್ದೆ. 30 ಸಾವಿರ ರೂ. ಮನೆ ಬಾಡಿಗೆ ಹಾಗೂ ಇತರೆ ಕೆಲಸಕ್ಕೆ ಉಪಯೋಗಿಸಿಕೊಂಡಿದ್ದೇನೆ.

Advertisement

ಇದೀಗ ಸಾರ್ವಜನಿಕರಿಂದ ಪಡೆದ ಹಣವೆಲ್ಲ ಖರ್ಚಾಗಿದೆ. ಮೂರು ವರ್ಷಗಳ ಹಿಂದೆ ಬನಶಂಕರಿಯಲ್ಲಿ ಪುತ್ರ ಅನುರಾಗ್‌ ಹೆಸರಿನಲ್ಲಿ “ಅರ್ಥ್ ಸ್ಕೈ ಸ್ಟುಡಿಯೋ’ ಹಾಗೂ “ಗಣಪ ರಿಕ್ರಿಯೆಷನ್‌ ಪ್ರೈವೇಟ್‌ ಲಿ’ ಎಂಬ ಎರಡು ಕಚೇರಿಗಳನ್ನು ತೆರೆದಿದ್ದೇನೆ,’ ಎಂದು ರಾಜೇಶ್‌ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಂಚನೆ ಹಣದಲ್ಲಿ ಸಿನಿಮಾ: ವಂಚನೆ ಹಣದ ಪೈಕಿ ಸ್ವಲ್ಪ ಮೊತ್ತವನ್ನು ಆರೋಪಿಗಳು “6-ದಿ ಕೂಟ’ ಹೆಸರಿನ ಚಲನಚಿತ್ರ ನಿರ್ಮಿಸಲು ಬಳಸಿದ್ದಾರೆ. ಆರೋಪಿ ಅನುರಾಗ್‌ ಈ ಚಿತ್ರದಲ್ಲಿ ನಾಯಕನಾಗಿದ್ದು, ಆತನ ತಂದೆ ರಾಜೇಶ್‌ ನಿರ್ಮಾಪಕ.  ಈ ಹಿಂದೆ ಆರೋಪಿಗಳು ರಾಜರಾಜೇಶ್ವರಿ ನಗರದಲ್ಲಿ ವಾಸಿಸುತ್ತಿದ್ದರು. ಈ ವೇಳೆ ಆರೋಪಿ ಅನುರಾಗ್‌, ಗಾರ್ಮೆಂಟ್ಸ್‌ ನಡೆಸುತ್ತಿದ್ದ ತನ್ನ ಸ್ನೇಹಿತನ ತಂದೆಗೆ ಸರ್ಕಾರಿ ಶಾಲಾ ಮಕ್ಕಳ ಬ್ಯಾಗ್‌ ತಯಾರಿಸಲು ಟೆಂಡರ್‌ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದ.

ಆರೋಪಿಗಳು ಉದ್ಯಮಿಗಳು ಹಾಗೂ ಶ್ರೀಮಂತರು ಮಾತ್ರವಲ್ಲದೆ, ಕೆಲ ವರ್ಷಗಳ ಹಿಂದೆ ಎಸಿಪಿ ದರ್ಜೆಯ ಪೊಲೀಸ್‌ ಅಧಿಕಾರಿಯೊಬ್ಬರ ಸಂಬಂಧಿಗೂ ವಂಚನೆ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳನ್ನು ಪತ್ತೆ ಹಚ್ಚಿದ ಬನಶಂಕರಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಚ್‌.ಪಿ.ಪುಟ್ಟಸ್ವಾಮಿ ಮತ್ತು ತಂಡಕ್ಕೆ 10 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಸಾರ್ವಜನಿಕರು ದೂರು ನೀಡಿ: ಆರೋಪಿಗಳು 12 ಮಂದಿಗೆ ಮಾತ್ರವಲ್ಲದೆ, ಇತರರಿಗೂ ವಂಚನೆ ಮಾಡಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಂಚನೆಗೊಳಗಾಗಿರುವ ಸಾರ್ವಜನಿಕರು ನೇರವಾಗಿ ಬನಶಂಕರಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ದೂರು ನೀಡಬಹುದು. ಅಥವಾ ಠಾಣೆ ಇನ್ಸ್‌ಪೆಕ್ಟರ್‌ಗೆ ಮೊ: 94808 01527 ಕರೆ ಮಾಡಿ ಸಂಪರ್ಕಿಸಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next