ದಾವಣಗೆರೆ: ಜಗತ್ತಿನ ಅತೀ ದೊಡ್ಡ ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಸಂವಿಧಾನ ಉಳಿಸಿ… ಎಂಬ ವಿಚಾರದ ಚರ್ಚೆ ನಡೆಸುವಂತಾಗುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ| ಸಿ.ಕೆ. ಮಹೇಶ್ ಆತಂಕ ವ್ಯಕ್ತಪಡಿಸಿದರು.
ಭಾನುವಾರ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ) ಏರ್ಪಡಿಸಿದ್ದ ಸಂವಿಧಾನ ಉಳಿಸಿ-ಮನುವಾದ ಧಿಕ್ಕರಿಸಿ… ಅಭಿಯಾನದಲ್ಲಿ ಮಾತನಾಡಿದ ಅವರು, ಜಗತ್ತಿನ
ಯಾವುದೇ ದೇಶದಲ್ಲಿ ಸಂವಿಧಾನ ಕುರಿತಾದ ಚರ್ಚೆ ನಡೆಯುವುದೇ ಇಲ್ಲ. ಇನ್ನು ಸಂವಿಧಾನ ಉಳಿಸಿ ಎಂಬ ಮಾತೇ ದೂರ. ಆದರೆ, ನಮ್ಮಲ್ಲಿ ಅಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.
ಅಮೆರಿಕಾ, ಸಂವಿಧಾನದ ಮಾತೃಭೂಮಿ ಗ್ರೇಟ್ ಬ್ರಿಟನ್‌ನಂತಹ ದೇಶಗಳಲ್ಲಿ ಸಂವಿಧಾನ ವಿಚಾರವಾಗಿ ಚರ್ಚೆ ನಡೆಯುವುದಿಲ್ಲ. ಆದರೆ, ದೊಡ್ಡ ಪ್ರಜಾಪ್ರಭುತ್ವವಿರುವ ಭಾರತದಲ್ಲಿ ಸಂವಿಧಾನ ಉಳಿಸಿ ಎನ್ನುವ ವಿಚಾರವಾಗಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರದ ಏಳು ದಶಕಗಳಲ್ಲಿ ಇಂತಹ ದೊಡ್ಡಮಟ್ಟದ ಚರ್ಚೆ ನಡೆದಿಲ್ಲ. ದೇಶದ 130 ಕೋಟಿ ಜನರಿಗೆ ಅಪಾಯವಿದೆ. ಜ್ವಾಲಾಮುಖೀಯ ಮೇಲೆ ಮಲಗಿದ್ದೇವೆ.
ಅದರಲ್ಲಿ 15 ಕೋಟಿ ಜನರನ್ನು ಬಿಟ್ಟರೆ ಉಳಿದ 100 ಕೋಟಿ ಜನರ ಬದುಕು ಸಂವಿಧಾನದ ಮೇಲೆ ನಿಂತಿದೆ ಎಂಬುದನ್ನು ಕೆಲ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು. ಕಳೆದ 5ವರ್ಷಗಳಿಂದ ಸಂವಿಧಾನಕ್ಕೆ ಅಪಾಯ ಬಂದಿದೆ. ಸಂವಿಧಾನವನ್ನು ಏನಾದರೂ ಕಳೆದುಕೊಂಡರೆ ಮೊಟ್ಟ ಮೊದಲು ಬೀದಿಗೆ ಬರುವಂತಹವರು ಮಹಿಳೆಯರು ಎಂಬುದನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳು ಅರಿಯಬೇಕು ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ಸಂವಿಧಾನ ಉಳಿಸಲಿಕ್ಕೆ ದಲಿತರು, ಶೋಷಿತರು ಜಾಗೃತರಾಗಬೇಕು. ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ ದೇಶ ವಿರೋಧಿ ಗಳು ಅಂತ ಮಾತನಾಡುತ್ತಾರೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ದಲಿತರು ಸಂಘಟಿತರಾಗಿ ಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು. ಜಾತ್ಯತೀತ ಶಕ್ತಿಗಳಿಗೆ ಬೆಂಬಲಿಸಬೇಕು ಎಂದು ಹೇಳಿದರು.
ಜಿಲ್ಲಾ ಸಂಚಾಲಕ ಬಿ. ದುಗ್ಗಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಸಿ.ಟಿ. ಸದಾನಂದ, ಟಿ. ರವಿಕುಮಾರ್, ಡಿ. ಅಂಜಿನಪ್ಪ, ಬುಸ್ಸೇನಹಳ್ಳಿ ನಾಗರಾಜ್, ಬಿ.ಕೆ. ಬಸವರಾಜ್, ಗೌರಿಪುರದ ಕುಬೇರಪ್ಪ ಇದ್ದರು.