ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ಪೊಲೀಸರ ವಶದಲ್ಲಿದ್ದ ಮೊಬೈಲ್ ಕಳವು ಆರೋಪಿಯೊಬ್ಬ ಶನಿವಾರ ತಡರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಈ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರದ ತೊಂಡೆಬಾವಿ ಗ್ರಾಮದ ರಮೇಶ್(35) ಮೃತಪಟ್ಟವರು.
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ದೂರುದಾರ ಪ್ರವೀಣ್ ನಾಗವಾರ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಕೂಗಿಕೊಂಡು ಬಂದ ರಮೇಶ್ ತುರ್ತು ಸಮಸ್ಯೆಯಿದ್ದು, ಕರೆ ಮಾಡಬೇಕಿದೆ. ನಿಮ್ಮ ಮೊಬೈಲ್ ಕೊಡುವಂತೆ ಮನವಿ ಮಾಡಿದ್ದಾನೆ. ಗಾಬರಿಗೊಂಡು ಬಂದು ರಮೇಶ್‌ಗೆ ಸಮಸ್ಯೆ ಇರಬಹುದೆಂದು ಭಾವಿಸಿದ ಪ್ರವೀಣ್ ಮೊಬೈಲ್ ನೀಡಿದ್ದಾರೆ. ಕರೆ ಮಾಡಿ ಕೆಲ ನಿಮಿಷ ಮಾತನಾಡಿದ ರಮೇಶ್ ಕ್ಷಣಾರ್ಧದಲ್ಲಿ ಮೊಬೈಲ್ ಜತೆ ಪರಾರಿಯಾಗಲು ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಪ್ರವೀಣ್ ಕೂಗಿಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಬೆನ್ನಟ್ಟಿ ರಮೇಶ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಮೊಬೈಲ್ ವಾಪಸ್ ಪಡೆದಿದ್ದಾರೆ. ಆದರೂ ಸುಮ್ಮನಾಗದ ಕೆಲ ಸಾರ್ವಜನಿಕರು ರಮೇಶ್ ಮೇಲೆ ಇನ್ನಷ್ಟು ಹಲ್ಲೆ ಮಾಡಿದ್ದಾರೆ. ತೀವ್ರ ಹಲ್ಲೆಯಿಂದ ತಪ್ಪಿಸಿಕೊಂಡ ಆರೋಪಿ ಹತ್ತಿರದಲ್ಲಿದ್ದ ಜಾಹಿರಾತು ಫಲಕದ ಕಂಬ ಏರಿದ್ದಾನೆ.
ಬಳಿಕ ರಕ್ಷಣೆ ನೀಡುವಂತೆ ಕೂಗಿಕೊಂಡಿದ್ದ. ಅಷ್ಟರಲ್ಲಿ ಸಾರ್ವಜನಿಕರೊಬ್ಬರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸಂಪಿಗೆಹಳ್ಳಿ ಸಬ್‌ಇನ್‌ಸ್ಪೆಕ್ಟರ್ ಶಿವಕುಮಾರ್ ಮತ್ತು ಕಾನ್‌ಸ್ಟೆಬಲ್ ಸೋಮಶೇಖರ್ ಹಾಗೂ ಹೊಯ್ಸಳ ಸಿಬ್ಬಂದಿ ಕಂಬ ಏರಿದ್ದ ರಮೇಶ್‌ನನ್ನು, ರಕ್ಷಣೆ ನೀಡುವುದಾಗಿ ಭರವಸೆ ನೀಡಿ ಕೆಳಗೆ ಇಳಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಠಾಣೆಯಲ್ಲಿದ್ದ ರಮೇಶ್ ಇದಕ್ಕಿದ್ದಂತೆ ಅಸ್ವಸ್ಥಗೊಂಡು ಬಿದ್ದಿದ್ದ. ಕೂಡಲೇ ಪೊಲೀಸರು ಯಲಹಂಕದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ನೀಡಿದ ವೈದ್ಯರು ರಮೇಶ್ ಮದ್ಯ ಸೇವಿಸಿದ್ದಾರೆ ಎಂದು ದೃಢಪಡಿಸಿದ್ದರು. ನಂತರ ಆರೋಪಿಯನ್ನು ಮತ್ತೆ ಠಾಣೆಗೆ ಕರೆದೊಯ್ಯಲಾಗಿತ್ತು.
2 ಗಂಟೆ ಸುಮಾರಿಗೆ ರಮೇಶ್ ಮತ್ತೆ ಅಸ್ವಸ್ಥನಾಗಿದ್ದು, ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಮೇಶ್ ಪರಿಸ್ಥಿತಿ ಗಂಭೀರವಾಗಿದ್ದರಿಂದ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಈ ಸಲಹೆ ಮೇರೆಗೆ ಪೊಲೀಸರು, ಮತ್ತೂಂದು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ನೀಡಲು ಮುಂದಾದ ವೈದ್ಯರು ರಮೇಶ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದರು.