ಕೆ.ಆರ್.ಪುರ: ರಾಷ್ಟ್ರೀಯ ಹೆದ್ದಾರಿ 75ರ ಮೇಲ್ಸೇತುವೆ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಡ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಆರ್‌ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ ಬಳಿ ಘಟನೆ ನಡೆದಿದೆ. ನಿತಿನ್(24) ಮೃತ. ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಗಂಭೀರನಹಳ್ಳಿ ನಿವಾಸಿ ನಿತಿನ್ ಹಾಗೂ ಹೊಸಕೋಟೆ ತಾಲ್ಲೂಕಿನ ಈಸ್ತೂರು ಹೊಸಹಳ್ಳಿ ವಾಸಿ ಮಂಜುನಾಥ್ ಜಿಯೋ ಸಂಸ್ಥೆಯ ಉದ್ಯೋಗಿಗಳಾಗಿದ್ದು, ಶನಿವಾರ ತಡ ರಾತ್ರಿ 12.30ಕ್ಕೆ ಕೆಲಸ ಮುಗಿಸಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮನೆಗೆ ತೆರಳುತ್ತಿದ್ದರು. ಮಂಜುನಾಥ್ ವಾಹನ ಚಲಾಯಿಸುತ್ತಿದ್ದರೆ, ಹಿಂಬಾಗದಲ್ಲಿ ನಿತಿನ್ ಕುಳಿತಿದ್ದರು.
ಈ ವೇಳೆ ಮೇಡಹಳ್ಳಿ ಮೇಲ್ಸೇತುವೆ ಬಳಿ ಕಾರೊಂದು ಟೈರ್ ಸ್ಫೋಟದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ನಿತಿನ್ ಮತ್ತು ಮಂಜುನಾಥ್ ಇದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿತಿನ್ 30 ಅಡಿ ಎತ್ತರದ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ತೀವ್ರ ರಕ್ತ ಸ್ರಾವಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಭೀರ ಗಾಯಗಳಾಗಿದ್ದ ದ್ವಿಚಕ್ರ ವಾಹನ ಚಾಲಕ ಮಂಜುನಾಥ್‌ನನ್ನು ಬಿದರಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಬೇಟಿ ನೀಡಿರುವ ಕೆಆರ್‌ಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ನಿತಿನ್ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ಸವಾರ ಪರಾರಿಯಾಗಿದ್ದು, ಚಾಲಕನನ್ನು ಬಂಧಿಸಲು ಪೊಲೀಸರು ಶೋಧ ಆರಂಭಿಸಿದ್ದಾರೆ.