ಬೆಂಗಳೂರು: ಮಾವಿನಕಾಯಿ ಕೀಳಲು ಮರ ಏರಿದ ಬಾಲಕ, ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಜೀವನ್ ಬಿಮಾನಗರ ಠಾಣಣೆ ವ್ಯಾಪ್ತಿಯ ಲೋಕೋಪಯೋಗಿ ವಸತಿ ಗೃಹ ಆವರಣದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಸುಧಾಮನಗರ ಕೊಳೆಗೇರಿ ನಿವಾಸಿ ಅಯ್ಯಪ್ಪ ಮತ್ತು ಮರಳಮ್ಮ ದಂಪತಿಯ ಕಿರಿಯ ಪುತ್ರ ಎ.ಭರತ್(13) ಮೃತ ಬಾಲಕ. ಆಂಧ್ರಪ್ರದೇಶ ಮೂಲದ ಅಯ್ಯಪ್ಪ ದಂಪತಿ ನಿರ್ಮಾಣ ಹಂತದ ಕಟ್ಟಡ ಕಾರ್ಮಿಕರಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ.
ಭರತ್ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ. ಲೋಕೋಪಯೋಗಿ ವಸತಿ ಗೃಹ ಆವರಣದಲ್ಲಿ ಮಾವಿನ ಮರವಿದ್ದು, ಮರಕ್ಕೆ ತಾಗುವಂತೆ ವಿದ್ಯುತ್ ಹೈ ಟೆನ್ಷನ್ ತಂತಿ ಹಾದು ಹೋಗಿದೆ. ಭಾನುವಾರ ಸ್ನೇಹಿತನ ಜತೆ ಹೋಗಿದ್ದ ಭರತ್,
ಮರದಲ್ಲಿದ್ದ ಮಾವಿನ ಕಾಯಿ ಕೀಳಲು ಮರ ಏರಿ, ಮರದ ಹಸಿ ಕಟ್ಟಿಗೆ ಹಿಡಿದು ಮಾವಿನಕಾಯಿ ಉದುರಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಹಸಿ ಮರದ ತುಂಡು ಹೈ ಟೆನ್ಷನ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿ ಭರತ್ ಮರದ ಮೇಲೆಯೇ ಮೃತಪಟ್ಟಿದ್ದಾನೆ.
ಇದನ್ನು ಕಂಡ ಸ್ನೇಹಿತ ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯರು, ಮರದ ಕೊಂಬೆ ಮೇಲೆ ಸಿಲುಕಿದ್ದ ಭರತ್ ಶವ ಕೆಳಗಿಳಿಸಿ, ಆಸ್ಪತ್ರೆಗೆ ಕೊಂಡಿಯ್ದರು ಎಂದು ಪೊಲೀಸರು ಹೇಳಿದರು. ಜೀವನ್‌ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.