Advertisement

ಶೌಚ ಗುಂಡಿಗಿಳಿದ ಕಾರ್ಮಿಕ ಸಾವು

12:37 AM Jan 26, 2020 | Lakshmi GovindaRaj |

ಬೆಂಗಳೂರು: ಶೌಚಗುಂಡಿ ಸ್ವಚ್ಛ ಮಾಡುತ್ತಿದ್ದ ವೇಳೆ ಉಸಿರುಗಟ್ಟಿ ಯುವಕನೊಬ್ಬ ಮೃತಪಟ್ಟಿದ್ದು, ಮತ್ತೂಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಶ್ರೀ ಶ್ವೇತಾಂಬರ್‌ ಸ್ಥಾನಕ್‌ ವಾಸಿ ಬಾವೀಸ್‌ ಸಂಪ್ರದಾಯ್‌ ಜೈನ್‌ ಸಂಘದ ಆವರಣದಲ್ಲಿ ಶನಿವಾರ ನಡೆದಿದೆ. ಬಳ್ಳಾರಿಯ ಸಿರುಗಪ್ಪ ತಾಲೂಕಿನ ಸಿದ್ದಣ್ಣ (18) ಮೃತರು. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಮುನಿಯಪ್ಪ (55) ಗಂಭೀರ ಗಾಯ ಗೊಂಡಿದ್ದು, ಬೌರಿಂಗ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.

Advertisement

ಎಚ್‌ಬಿಆರ್‌ ಲೇಔಟ್‌ನ ಸಾಯಿಬಾಬಾ ಮಂದಿರದ ಸಮೀಪದಲ್ಲಿ ವಾಸವಾಗಿರುವ ಸಹೋದರಿ ಮನೆಯಲ್ಲಿ ಸಿದ್ದಣ್ಣ ನೆಲೆಸಿದ್ದು, ಶನಿವಾರ ಮುಂಜಾನೆ ಆರು ಗಂಟೆ ಸುಮಾರಿಗೆ ಮೇಸ್ತ್ರಿ ಮುನಿಯಪ್ಪ ಸಿದ್ದಣ್ಣನನ್ನು ಕರೆದುಕೊಂಡು ಹೋಗಿದ್ದರು. ಸಿಮೆಂಟ್‌ ರಿಂಗ್‌ ಅಳವಡಿಸಿದ 25 ಅಡಿಗೂ ಹೆಚ್ಚು ಆಳದ ಗುಂಡಿಗೆ ಹಗ್ಗದ ಸಹಾಯದಿಂದ ಇಬ್ಬರೂ ಇಳಿದು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದಾರೆ.

ಅಷ್ಟರಲ್ಲಿ ಸ್ಥಳದಲ್ಲಿದ್ದ ಕೆಲವರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ನೆರವಿನಿಂದ ಪೊಲೀಸರು ಇಬ್ಬರನ್ನೂ ಮೇಲಕ್ಕೆತ್ತಿ ಬೌರಿಂಗ್‌ ಆಸ್ಪತ್ರೆಯ ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಟರಲ್ಲೇ ಸಿದ್ದಣ್ಣ ಮೃತಪಟ್ಟಿದ್ದಾರೆ. ಮುನಿಯಪ್ಪ ಅವರನ್ನು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ದುರ್ಘ‌ಟನೆ ಸಂಬಂಧ ಸಂಘದ ವ್ಯವಸ್ಥಾಪಕರು, ಟ್ರಸ್ಟಿ ಮತ್ತು ಇತರರ ವಿರುದ್ಧ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

550 ರೂ. ಆಸೆಗೆ ಪ್ರಾಣ ಕಳೆದುಕೊಂಡ: ಬಳ್ಳಾರಿಯಿಂದ ಕೆಲಸ ಅರಸಿ ನಗರಕ್ಕೆ ಬಂದಿದ್ದ ಸಿದ್ದಣ್ಣ ಕೇವಲ 550 ರೂ. ಕೂಲಿ ಆಸೆಗಾಗಿ 25ಅಡಿಗೂ ಹೆಚ್ಚು ಆಳದ ಶೌಚಗುಂಡಿಗೆ ಇಳಿದು ಮೃತಪಟ್ಟಿದ್ದಾನೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ಮತ್ತು ಸುತ್ತಮುತ್ತಲಿನ 400ಕ್ಕೂ ಹೆಚ್ಚು ಕಾರ್ಮಿಕರು ಎಚ್‌ಬಿಆರ್‌ ಲೇಔಟ್‌ ಆಸು-ಪಾಸಿನಲ್ಲಿ ವಾಸವಾಗಿದ್ದಾರೆ. ಸಿದ್ದಣ್ಣ ಕೂಡ ತನ್ನ ಸಹೋದರಿ ಮತ್ತು ಭಾವನ ಜತೆ ವಾಸವಾಗಿದ್ದ.

ಕೆಲವು ದಿನಗಳಿಂದ ಮುನಿಯಪ್ಪ ನೀಡಿದ್ದ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದೇವೆ. ಸಿದ್ದಣ್ಣ ಕೂಡಾ ನಮ್ಮ ಜತೆ ಕೆಲಸಕ್ಕೆ ಬರುತ್ತಿದ್ದ. ಮೇಸ್ತ್ರಿ ನಮ್ಮ ಕೂಲಿ ಹಣ 30 ಸಾವಿರ ಕೊಡಲು ಬಾಕಿ ಇತ್ತು. ಶನಿವಾರ ಕೆಲಸ ಮಾಡಿದ ಬಳಿಕ ಅಷ್ಟೂ ಹಣವನ್ನು ಕೊಡುವುದಾಗಿ ಮುನಿಯಪ್ಪ ಹೇಳಿದ್ದರು. ಅವರ ಮಾತು ನಂಬಿ ಸಿದ್ದಣ್ಣ ಹೋಗಿದ್ದ ಎಂದು ಸಿದ್ದಣ್ಣನ ಸಹೋದರಿ ಗಂಗಮ್ಮ ಕಣ್ಣೀರು ಹಾಕಿದರು.

Advertisement

ಮುನ್ನೆಚ್ಚರಿಕಾ ಕ್ರಮ ಇಲ್ಲ: ಸೆಪ್ಟಿಕ್‌ ಟ್ಯಾಂಕ್‌, ಒಳಚರಂಡಿ, ತೆರೆದಗುಂಡಿಗಳನ್ನು ಕೈಯಿಂದ ಸ್ವಚ್ಛ ಮಾಡುವ ಅಮಾನವೀಯ ಪದ್ಧತಿಯನ್ನು ನಿಷೇಧಿಸಲಾಗಿದೆ. ಇಂಥ ಕೆಲಸವನ್ನು ಯಂತ್ರದ ಮೂಲಕ ಮಾಡುವಂತೆ ಸೂಚಿಸಲಾಗಿದೆ. ಶೌಚಗುಂಡಿಯನ್ನು ಕೈಯಿಂದ ಸ್ವಚ್ಛ ಮಾಡದಂತೆ ಸರ್ಕಾರ ಜಾಗೃತಿ ಮೂಡಿಸಲಾಗತ್ತಿದೆ. ಆದರೂ, ಈ ಕೆಲಸವನ್ನು ಕಾರ್ಮಿಕರಿಂದ ಮಾಡಿಸುವ ಮೂಲಕ ಕಾಯ್ದೆಯಲ್ಲಿರುವ ನಿಯಮಗಳನ್ನು ಉಲ್ಲಂ ಸ ಲಾಗಿದೆ.

ಅಲ್ಲದೆ, ಸ್ವಚ್ಛ ಕಾರ್ಯದ ವೇಳೆ ಕಾರ್ಮಿಕರು ಕೈಗವಸು ಇಲ್ಲದೆ, ಮುಖಕ್ಕೆ ಮಾಸ್ಕ್ ಕೂಡ ಹಾಕಿಕೊಳ್ಳದೆ ಸಿದ್ದಣ್ಣ ಮತ್ತು ಮುನಿಯಪ್ಪ ಶೌಚಗುಂಡಿಗೆ ಇಳಿದಿದ್ದರು ಎಂದು ಪ್ರತ್ಯಕ್ಷದರ್ಶಿ ಗಳು ಮಾಹಿತಿ ನೀಡಿದ್ದಾರೆ. ಗುಂಡಿಯ ಒಳಗೆ ಉಸಿರುಗಟ್ಟಿದ ಪರಿಣಾಮ ಮೇಲೆ ಬರಲು ಸಾಧ್ಯವಾಗದೆ ಪರದಾಡುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಿದ್ದಣ್ಣ ನನ್ನ ಕೊನೆಯ ತಮ್ಮ. ಹತ್ತು ವರ್ಷಗಳಿಂದ ನಮ್ಮೊಟ್ಟಿಗೆ ಇದ್ದು, ನಾಲ್ಕೈದು ವರ್ಷಗಳಿಂದ ಕಟ್ಟಡ ಕಾಮಗಾರಿ ಮಾಡಿಕೊಂಡಿದ್ದ. ಶನಿವಾರ ಬೆಳಗ್ಗೆ ಮೇಸ್ತ್ರಿ ಮುನಿಯಪ್ಪ ಕೆಲಸವಿದೆ ಎಂದು ಕರೆದುಕೊಂಡು ಹೋಗಿದ್ದರು. ಶೌಚಗುಂಡಿ ಸ್ವಚ್ಛ ಮಾಡುವ ಕೆಲಸ ಎಂದು ಹೇಳಿರಲಿಲ್ಲ. ಆ ಕೆಲಸವೆಂದು ಗೊತ್ತಿದ್ದರೆ ಕಳುಹಿಸುತ್ತಿರಲಿಲ್ಲ.
-ಗಂಗಮ್ಮ, ಸಿದ್ದಣ್ಣನ ಸಹೋದರಿ

Advertisement

Udayavani is now on Telegram. Click here to join our channel and stay updated with the latest news.

Next