ಕಾಣಿಯೂರು: ಕಾಣಿಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿ ಗೌತಮ್ (15) ಶವ ಕಾಲೇಜಿನ ಪಕ್ಕದ ಇಂಗು ಗುಂಡಿಯಲ್ಲಿ ಗುರವಾರ ರಾತ್ರಿ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿದ್ದು, ವಿದ್ಯಾರ್ಥಿ ಸ್ನಾನಕ್ಕೆ ಇಳಿದು ಮುಳುಗಿ ಮೃತಪಟ್ಟಿರುವುದು ದೃಢಪಟ್ಟಿದೆ.
ಚಾರ್ವಾಕ ಗ್ರಾಮದ ಬೊಮ್ಮೊಳಿಕೆ ನಿವಾಸಿ ಲಕ್ಷ್ಮಣ ಗೌಡರ ಪುತ್ರ ಗೌತಮ್ ಹಾಗೂ ಆತನ ಇಬ್ಬರು ಸ್ನೇಹಿತರು ಸ್ನಾನಕ್ಕೆ ಇಳಿದಾಗ ಇಬ್ಬರು ನೀರಲ್ಲಿ ಮುಳುಗಿದ್ದಾರೆ. ಈ ವೇಳೆ ಈಜು ಬರುತ್ತಿದ್ದ ಬಾಲಕನೋರ್ವ ಒಬ್ಬ ಹುಡುಗನನ್ನು ರಕ್ಷಣೆ ಮಾಡಿದ್ದು, ಗೌತಮ್‌ನ ಪ್ರಾಣವುಳಿಸಲು ಸಾಧ್ಯವಾಗಿಲ್ಲ ಎನ್ನುವ ವಿಚಾರ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.
ಶಾಲೆಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನ ಸಮಾರಂಭದ ಮಧ್ಯೆ ಈ ವಿದ್ಯಾರ್ಥಿಗಳು ನೀರು ತುಂಬಿದ್ದ ಇಂಗು ಗುಂಡಿಯಲ್ಲಿ ಈಜಾಡಲು ಹೋಗಿದ್ದರು. ಈ ವೇಳೆ ಮುಳುಗಿದ ಗೌತಮ್‌ನ ರಕ್ಷಣೆ ಸಾಧ್ಯವಾಗದೆ ವಾಪಸಾದ ಇಬ್ಬರು ವಿದ್ಯಾರ್ಥಿಗಳು ಮೌನ ವಹಿಸಿದ್ದರು ಎನ್ನುವುದು ಗೊತ್ತಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸುಳ್ಯ ಸಿಪಿಐ ಸತೀಶ್ ಕುಮಾರ್, ಬೆಳ್ಳಾರೆ ಠಾಣೆ ಎಸ್‌ಐ ಈರಯ್ಯ ಹಾಗೂ ಬಿಇಒ ವಿಷ್ಣು ಪ್ರಸಾದ್ ಪರಿಶೀಲನೆ ನಡೆಸಿ, ಇಂಗು ಗುಂಡಿಯ ಬಳಿ ತೆರಳುವ ದಾರಿಯನ್ನು ತತ್‌ಕ್ಷಣ ಮುಚ್ಚಬೇಕು. ಕಾಲೇಜಿನ ಆವರಣಕ್ಕೆ ತಡೆಗೋಡೆ ನಿರ್ಮಿಸಬೇಕು. ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್, ತಾ.ಪಂ. ಉಪಾಧ್ಯಕ್ಷೆ ಲಲಿತಾ ಈಶ್ವರ್, ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಮಾಧವಿ ಕೋಡಂದೂರು ಉಪಸ್ಥಿತರಿದ್ದರು. ಗುರುವಾರ ರಾತ್ರಿ ಪತ್ತೆಯಾದ ಗೌತಮ್‌ನ ಪಾರ್ಥಿವ ಶರೀರವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿ, ಕಾಣಿಯೂರು ಸರಕಾರಿ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬೊಮ್ಮೊಳಿಕೆ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಹೇಳಿಕೊಳ್ಳುವ ಆದಾಯವಿಲ್ಲ
ಗೌತಮ್ ಕುಟುಂಬ ಬಡತನದಲ್ಲಿದೆ. ಹೇಳಿಕೊಳ್ಳುವ ಆದಾಯವಿಲ್ಲ. ಲಕ್ಷ್ಮಣ ಗೌಡರಿಗೆ ಇಬ್ಬರು ಮಕ್ಕಳು. ದೀಕ್ಷಿತ್ ಹಾಗೂ ಗೌತಮ್. ಲಕ್ಷ್ಮಣ ಗೌಡರಿಗೆ ಎರಡು ವರ್ಷಗಳ ಹಿಂದೆ ಬೆನ್ನುಹುರಿಯ ಶಸ್ತ್ರಚಿಕಿತ್ಸೆ ನಡೆದಿದ್ದು, ಲಕ್ಷಾಂತರ ರೂ. ಸಾಲದಲ್ಲಿದ್ದಾರೆ. ದುಡಿಯುವಷ್ಟು ಚೈತನ್ಯವಿಲ್ಲ. ಇವರ ಚಿಕಿತ್ಸೆಗೆ ಗ್ರಾ.ಪಂ. ಸದಸ್ಯ ಗಣೇಶ್ ಉದನಡ್ಕ ಧನ ಸಹಾಯ ಮಾಡಿದ್ದರು. ಪತ್ನಿ ಹೈನುಗಾರಿಕೆ ಹಾಗೂ ಬೀಡಿ ಕಟ್ಟುತ್ತ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ದೀಕ್ಷಿತ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಈ ಇಬ್ಬರೂ ಅಡಿಕೆ ಸುಲಿಯುವ ವೃತ್ತಿ ಮಾಡುತ್ತ ತಮ್ಮ ವಿದ್ಯಾಭ್ಯಾಸದ ಖರ್ಚಿಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಯಾರ ತಂಟೆಗೂ ಹೋಗದೆ ಎಲ್ಲರ ಮೆಚ್ಚುಗೆ ಗಳಿಸಿದ್ದ.
ಗೌತಮ್‌ನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.