Advertisement

ವಿದ್ಯುತ್‌ ಕಂಬದಿಂದ ಬಿದ್ದು ಕಾರ್ಮಿಕ ಸಾವು

12:34 PM Nov 13, 2018 | Team Udayavani |

ಎಚ್‌.ಡಿ.ಕೋಟೆ: ಪಟ್ಟಣದ ಸೆಸ್ಕ್ ಉಪ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್‌ ಕಂಬ ಬದಲಿಸುವ ವೇಳೆ ಕಂಬದ ಮೇಲಿಂದ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ತಾಲೂಕಿನ ಆಲನಹಳ್ಳಿ ಸಮೀಪದ ಕೊತ್ತೇಗಾಲ ಗ್ರಾಮದ ಮಂಜು(24) ಕೆಳಗೆ ಬಿದ್ದು  ಮೃತಪಟ್ಟವರು. ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್‌ ಪ್ರಸರಣಾ ವಿದ್ಯುತ್‌ ನಿಗಮ ನಿಯಮಿತ ವ್ಯಾಪ್ತಿಯಲ್ಲಿ ಹಳೆಯದಾದ ವಿದ್ಯುತ್‌ ಕಂಬಗಳನ್ನು ಬದಲಿಸಿ ಕಂಬಕ್ಕೆ ಆರಿಜೆಂಟಲ್‌ (ಆ್ಯಂಗ್ಲರ್‌) ಅಳವಡಿಸುವ ವೇಳೆ ಈ ದುರ್ಘ‌ಟನೆ ಸಂಭವಿಸಿದೆ. 

ಸೋಮವಾರ ಬೆಳಿಗ್ಗೆ ಎಚ್‌.ಡಿ.ಕೋಟೆ ಸೆಸ್ಕ್ ವ್ಯಾಪ್ತಿಯಲ್ಲಿ ಹಳೆ ಕಂಬಗಳ ಬದಲಾವಣೆ ಹಾಗೂ ವಿದ್ಯುತ್‌ ಸಂಪರ್ಕ ಕಾಮಗಾರಿಯಲ್ಲಿ ಕೆಲಸ ಮಾಡಲು ಕೊತ್ತೇಗಾಲ ಗ್ರಾಮದಿಂದ ಆರೇಳು ಮಂದಿ ಕೂಲಿ ಕಾರ್ಮಿಕರು ಬಂದಿದ್ದರು. ಪಟ್ಟಣದ ತೋಟಗಾರಿಕೆ ಇಲಾಖೆ ಎದುರು ಮಂಜು ವಿದ್ಯುತ್‌ ಕಂಬದ ಮೇಲೆ ಕುಳಿತು ಹಳೆಯ ಆ್ಯಂಗ್ಲರ್‌ ತೆಗೆದು ಹೊಸ ಆ್ಯಂಗ್ಲರ್‌ ಅಳವಡಿಸುವ ವೇಳೆ ಆಯಾತಪ್ಪಿ ಕೆಳಗೆ ಬಿದ್ದಿದ್ದಾರೆ.

ಈ ವೇಳೆ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದರೂ  ಮಂಜು ಮೃತಪಟ್ಟಿದ್ದಾರೆಂದು ವೈದ್ಯರು ಖಚಿತ ಪಡಿಸಿದರು. ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ. 

ಅಧಿಕಾರಿ, ಗುತ್ತಿಗೆದಾರನ ನಿರ್ಲಕ್ಷಕ್ಕೆ ಇಬ್ಬರು ಬಲಿ: ಎಚ್‌.ಡಿ.ಕೋಟೆ ಸೆಸ್ಕ್ ಉಪ ವಿಭಾಗದ ವ್ಯಾಪ್ತಿಯಲ್ಲಿ ತುಂಬಾ ಹಳೆಯದಾದ ವಿದ್ಯುತ್‌ ಕಂಬ, ತಂತಿ, ಆರಿಜೆಂಟಲ್‌ಗ‌ಳ ಬದಲಾವಣೆ ಸೇರಿದಂತೆ ವಿದ್ಯುತ್‌ ಕಾಮಗಾರಿಯ 2 ಕೋಟಿ ರೂ. ವೆಚ್ಚದ ಟೆಂಡರನ್ನು ಆಂದ್ರ ಮೂಲದ ಸಂಘಮಿತ್ರ ಎಲೆಕ್ಟ್ರಿಕಲ್‌ನ ವೆಂಕಟರೆಡ್ಡಿ ಪಡೆದಿದ್ದಾರೆ. ಆದರೆ, ಕಾಮಗಾರಿಯನ್ನು ಸ್ವತಃ ಅವರು ನಿರ್ವಹಿಸದೆ ತುಂಡು ಗುತ್ತಿಗೆ ಮೂಲಕ ಮೈಸೂರು ಮೂಲದ ನಂಜುಂಡಸ್ವಾಮಿಗೆ ನೀಡಿದ್ದಾರೆ. 

Advertisement

ಈ ತುಂಡು ಗುತ್ತಿಗೆದಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ಕಂಬಗಳ ಕಾಮಗಾರಿ ಅನುಭವವಿಲ್ಲದ ಕೂಲಿ ಕಾರ್ಮಿಕರಿಗೆ ಹೆಚ್ಚು  ಕೂಲಿ ನೀಡುವ ಆಮಿಷ ತೋರಿ ಕೆಲಸ ಮಾಡಿಸುತ್ತಿದ್ದಾರೆ. ಕಂಬ ಏರುವ ವೇಳೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೆ ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದಾರೆ. ಹಾಗೆಯೇ ಮೃತ ಮಂಜು ಕೂಡ ಕೂಲಿ ಆಸೆಗೆ ಕೆಲಸಕ್ಕೆ ಬಂದು ವಿದ್ಯುತ್‌ ಕಂಬ ಏರಿ ಕೆಲಸ ಮಾಡುತ್ತಿದ್ದರು. 

ಅದೇ ರೀತಿ ಆರೇಳು ತಿಂಗಳ ಹಿಂದೆಯೂ ಇದೇ ಗುತ್ತಿಗೆದಾರನ ಬಳಿ ವಿದ್ಯುತ್‌ ಕಂಬ ಬದಲಿಸಲು ಬಂದಿದ್ದ ಮೈಸೂರು ಮೂಲದ ವ್ಯಕ್ತಿ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿದ್ದರು. ಕಾಮಗಾರಿ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ತಲೆಗೆ ಹೆಲ್ಮೆಟ್‌ ಹಾಗೂ ಅನುಸರಿಸಬೇಕಾದ ಯಾವ ಮುಂಜಾಗ್ರತ ಕ್ರಮಗಳನ್ನು ಅಳವಡಿಸಿಕೊಳ್ಳದೆ ಗುತ್ತಿಗೆದಾರ ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದಾರೆ.

ಕಾಮಗಾರಿಯನ್ನು ಪರಿಶೀಲನೆ ಮಾಡಬೇಕಾದ ಜವಾಬ್ದಾರಿ ಹೊತ್ತಿರುವ ಇಲ್ಲಿನ ಸೆಸ್ಕ್ ಅಧಿಕಾರಿಗಳು ಅತ್ತ ಗಮನಹರಿಸುತ್ತಿಲ್ಲ. ಇವೆಲ್ಲಾ ನಿರ್ಲಕ್ಷದ ಪರಿಣಾಮವೇ ಕೂಲಿ ಕಾರ್ಮಿಕರ ಸಾವಿಗೆ ಕಾರಣ ಎಂದು ಮೃತ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು.

ಅಮಾಯಕ ಕೂಲಿ ಕಾರ್ಮಿಕರ ಸಾವಿಗೆ ಕಾರಣರಾದ ಅಧಿಕಾರಿಗಳು ಮತ್ತು ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕಾಲಿಕ ಸಾವಿಗೆ ತುತ್ತಾಗಿರುವ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಬೇಕು. ಇನ್ನು ಮುಂದೆ ಯಾವುದೇ ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯುತ್‌ ಕೆಲಸಗಳಲ್ಲಿ ಅನುಭವ ಇರುವ ಕೂಲಿ ಕಾರ್ಮಿಕರಿಂದಲೇ ಕೆಲಸ ನಿರ್ವಹಿಸಬೇಕು ಸಾರ್ವಜನಿಕರು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next