ಆನೇಕಲ್: ಮಾನಸಿಕ ಕಿರುಕುಳದ ಒತ್ತಡಕ್ಕೆ ಒಳಗಾಗಿ ಅತಿಯಾದ ಮದ್ಯ ಸೇವಿಸಿ ಸಮಾಜ ಕಲ್ಯಾಣ ಇಲಾಖೆ ವಾರ್ಡ್‌ನ್ ಒಬ್ಬರು ಮೃತಪಟ್ಟಿರುವ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ.
ಅನೇಕಲ್ ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಾರ್ಡ್‌ನ್ ದೇವೇಂದ್ರಪ್ಪ(40) ಮೃತ ಪಟ್ಟ ವ್ಯಕ್ತಿ.
ಮೆಚ್ಚಿನ ವಾರ್ಡ್‌ನ್: ಆನೇಕಲ್ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಒಳಪಟ್ಟಿರುವ ಆನೇಕಲ್ ವಿದ್ಯಾರ್ಥಿಗಳ ಹಾಸ್ಟೆಲ್ ವಾರ್ಡನ್ ಸೇರಿ ಹಲವು ಹಾಸ್ಟೆಲ್‌ಗಳಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ವಿದ್ಯಾರ್ಥಿಗಳ ಮೆಚ್ಚಿನ ವಾರ್ಡನ್ ಆಗಿದ್ದರು.
ಹೊಣೆಗಾರಿಕೆಗೆ ಹೆಸರು: ಕಳೆದ 15 ವರ್ಷಗಳಿಂದ ಆನೇಕಲ್‌ನಲ್ಲೇ ಕೆಲಸ ಮಾಡುತ್ತಿದ್ದ ದೇವೇಂದ್ರಪ್ಪ ಇಡೀ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳ ಬಗ್ಗೆ ಅಲ್ಲಿನ ಕುಂದು ಕೊರತೆಗಳ ಬಗ್ಗೆ ಸಮಸ್ಯೆಗಳ ಬಗ್ಗೆ ಅರಿವು ಇದ್ದರಿಂದ ಅಧಿಕಾರಿಗಳ ಜವಾಬ್ದಾರಿ ತಾನೇ ಹೊತ್ತು ಕೊಂಡು ಯಾವ ವಸತಿ ನಿಲಯಕ್ಕೆ ಏನೆಲ್ಲಾ ಅವಶ್ಯಕತೆಗಳಿವೆ ಎಂಬುದನ್ನು ಅರಿತು ಕೆಲಸ ಮಾಡುತ್ತಿದ್ದರಿಂದ ಅಧಿಕಾರಿಗಳ ಪಾಲಿಗೂ ದೇವೇಂದ್ರಪ್ಪ ಮೆಚ್ಚಿನ ವಾರ್ಡ್‌ನ್ ಆಗಿದ್ದರು ಎಂದು ಹೇಳಲಾಗುತ್ತಿದೆ.
ಪತ್ರಕರ್ತರ ಕಿರುಕುಳ: 15 ವರ್ಷಗಳಿಂದ ತಾಲೂಕಿನಲ್ಲೇ ಕೆಲಸ ಮಾಡುತ್ತಿದ್ದ ದೇವೇಂದ್ರಪ್ಪ ಇಡೀ ಇಲಾಖೆಯಲ್ಲಿ ಎಲ್ಲಾ ವಿಷಯಗಳಲ್ಲೂ ಅವರ ಹೆಸರೇ ಕೇಳಿ ಬರುತ್ತಿತ್ತು. ಇದರಿಂದ ಒಂದಷ್ಟು ಸ್ಥಳೀಯ ಪತ್ರಿಕೆಗಳು, ಯೂ ಟ್ಯೂಬ್ ವಾಹಿನಿಗಳ ಪತ್ರಕರ್ತರು ಅವರಿಗೆ ಬೆದರಿಕೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಇದರಿಂದ ಮಾನಸಿಕ ಖನ್ನತೆಗೆ ಒಳಗಾಗಿ ಅತಿಯಾಗಿ ಮದ್ಯ ಸೇವನೆ ಮಾಡಿ ಮೃತ ಪಟ್ಟಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ಕಾಲೇಜು ಹಾಸ್ಟೆಲ್‌ನ ಹಳೆ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದು ಕಿರುಕುಳ ನೀಡುತ್ತಿದ್ದ ಪತ್ರಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ಹೆಂಡತಿ, ಮಕ್ಕಳ ಅಗಲಿಕೆ: ಮೃತ ದೇವೇಂದ್ರಪ್ಪ ಹೆಂಡತಿ ಇಬ್ಬರು ಪುಟ್ಟ ಗಂಡು ಮಕ್ಕಳನ್ನು ಅಗಲಿದ್ದಾರೆ. ಪತ್ನಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ನೀಡಬೇಕೆಂದು ವಿದ್ಯಾರ್ಥಿಗಳ ಆಗ್ರಹವೂ ಆಗಿದೆ.