Advertisement

2500 ಮರಗಳ ಮಾರಣ ಹೋಮ

09:19 PM Jun 12, 2019 | Team Udayavani |

ಆನೇಕಲ್‌: 9 ವರ್ಷಗಳ ಹಿಂದೆ ಇಲ್ಲೊಂದು ಕೆರೆ ಇತ್ತು. ನೀರು ಸಂಗ್ರಹವಾಗದೆ ಬೀಡು ಬಿಟ್ಟಿತ್ತು. ಜನಪ್ರತಿನಿಧಿ ಹಾಗೂ ಅರಣ್ಯ ಅಧಿಕಾರಿಯೊಬ್ಬರ ಇಚ್ಛಾಶಕ್ತಿಯಿಂದಾಗಿ ಕೆರೆಯ 49 ಎಕರೆ ಜಾಗ ಚಿಕ್ಕ ಕಾಡಾಗಿ ಬೆಳೆದಿತ್ತು. ಆದರೆ ಆ ಕಾಡು ಈಗ ಆಟದ ಮೈದಾನವಾಗಿ ಪರಿವರ್ತನೆಯಾಗಿದೆ. ಈ ಕಾಡು ನಾಶವಾಗಿದ್ದು ವಿಶ್ವ ಪರಿಸರ ದಿನಾಚರಣೆ ತಿಂಗಳಲ್ಲಿ ಎಂಬುದು ದುರಂತದ ಸಂಗತಿಯಾಗಿದೆ.

Advertisement

ಕೆರೆ ಕಾಡಾಗಿದ್ದು ಹೇಗೆ?: ತಾಲೂಕಿನ ಬ್ಯಾಗಡದೇನ ಹಳ್ಳಿಯಲ್ಲಿನ ಕೆರೆ ಹತ್ತಾರು ವರ್ಷಗಳಿಂದ ನೀರು ಸಂಗ್ರಹವಾಗದೇ ಬರಿದಾಗಿತ್ತು. 9 ವರ್ಷಗಳ ಹಿಂದೆ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಂಕರ, ಒತ್ತುವರಿ ಭೂತಕ್ಕೆ ಕೆರೆಯನ್ನು ಬಲಿಕೊಡಬಾರದೆಂಬ ಉದ್ದೇಶದಿಂದ ವಿಶೇಷ ಆಸಕ್ತಿ ವಹಿಸಿದ್ದರು. ಬಳಿಕ ಅರಣ್ಯ ಇಲಾಖೆ ಸಹಾಯದಿಂದ ಕೆರೆಯಲ್ಲಿ ಗಿಡ ನೆಟ್ಟು, ಅವುಗಳನ್ನು ಪೋಷಿಸಿದ್ದರು.

ಗಿಡ ನೆಡುವ ಆಂದೋಲನ: ಪಂಚಾಯಿತಿಯಲ್ಲಿ ಗುಂಡಿ ಅಗೆಯುವುದಕ್ಕೆ ಇದ್ದ ಅಲ್ಪ ಪ್ರಮಾಣದ ಹಣದಲ್ಲಿ ಸುಮಾರು 6,400 ಗುಂಡಿಗಳನ್ನು ಅಗೆದು ಒಂದೇ ವಾರದಲ್ಲಿ ಸಾಮಾಜಿಕ ಅರಣ್ಯ ವಲಯದಿಂದ ನೆರಳೆ, ಬಿದಿರು, ಮತ್ತಿ ಸಸಿಗಳನ್ನು ನೆಡಿಸಿದ್ದರು. ಗಿಡಗಳಿಗೆ ಹಾನಿಯಾಗದಿರಲಿ ಎಂಬ ಕಾರಣಕ್ಕೆ ಕೆರೆ ಸುತ್ತಲು ಬೇಲಿ ಸಹ ಹಾಕಿಸಲಾಗಿತ್ತು. ಆಗಿನ ವಲಯ ಅರಣ್ಯಾಧಿಕಾರಿ ಬೈಲಪ್ಪ ಅವರ ಶ್ರಮ, ಸಹಕಾರವನ್ನು ಜನರು ಈಗಲೂ ಸ್ಮರಿಸುತ್ತಾರೆ.

ಗಿಡಗಳಿಗಾಗಿ ಟ್ರಾಕ್ಟರ್‌ ಖರೀದಿ: ಕೆರೆಯಲ್ಲಿ ನೆಟ್ಟ ಗಿಡಗಳು ಒಣಗಿಹೋಗಬಾರದೆಂಬ ಉದ್ದೇಶದಿಂದ ಅಧ್ಯಕ್ಷ ಶಂಕರ್‌, ಸ್ವಂತ ಹಣದಿಂದಲೇ ಟ್ರ್ಯಾಕ್ಟರ್‌ ಖರೀದಿಸಿ ಗಿಡಗಳಿಗೆ ಅವಶ್ಯವಿರುವ ನೀರು ಉಣಿಸುವ ಮೂಲಕ ಪೋಷಣೆ ಮಾಡಿದರು. ಪಕ್ಕದ ಅಗ್ರಹಾರದ ಕೆರೆಯಲ್ಲೂ ನೆಟ್ಟಿದ್ದ ಸಾವಿರಾರು ಮರಗಳಿಗೂ ಅವರೇ ನೀರುಣಿಸುವ ಹೊಣೆ ಹೊತ್ತರು. ಸತತ ಎರಡು ವರ್ಷಗಳ ಕಾಲ ಗಿಡಗಳಿಗೆ ನೀರು ಹಾಕಿ ಕಾಳಜಿಯಿಂದ ನೋಡಿಕೊಳ್ಳಲಾಗಿತ್ತು.

ಪಕ್ಷಿಗಳ ಆಶ್ರಯ ತಾಣ ಮೈದಾನ: ಸುಮಾರು 6400 ಸಸಿಗಳಲ್ಲಿ ಶೇ.90ರಷ್ಟು ಮರಗಳು ಬೆಳೆದು ನಿಂತಿದ್ದವು. ಹೊಂಗೆ, ನೇರಳೆ, ಬಿದಿರು, ಮತ್ತಿ ಹೀಗೆ ಹಲವು ಜಾತಿ ಮರಗಳ ಸಮ್ಮಿಲನದ ಕಾಡಾಗಿ ಬೆಳೆದಿದ್ದ ಬ್ಯಾಗಡದೇನಹಳ್ಳಿ ಕೆರೆ ರಾತ್ರೋ ರಾತ್ರಿ ಆಟದ ಮೈದಾನವಾಗಿ ಬಿಟ್ಟಿದೆ. 9 ವರ್ಷಗಳಿಂದ ಹಿಂದೆ ನೆಟ್ಟಿದ್ದ ಮರಗಳನ್ನು ಬುಡ ಸಮೇತ ಇಲ್ಲವಾಗಿಸಿದ್ದಾರೆ. ಅಲ್ಲಿ ಮರಗಳು ಇತ್ತು, ಇದ್ದ ನೆರೆಳೆ ಮರಗಳಲ್ಲಿ ಹಣ್ಣು ಇತ್ತು ಎಂಬುದಕ್ಕೆ ಇನ್ನೂ ಉಳಿದಿರುವ ಮರಗಳೇ ಸಾಕ್ಷಿಯಾಗಿ ನಿಂತಿದೆ. ಇಲ್ಲಿ ಅದೆಷ್ಟು ಪಕ್ಷಿಗಳು ತಮ್ಮ ಆಶ್ರಯ ತಾಣ ನಿರ್ಮಿಸಿಕೊಂಡಿದ್ದವೋ, ಈಗ ತಮ್ಮ ಗೂಡು ಕಳೆದುಕೊಂಡು ಅನಾಥರಾಗಿವೆ.

Advertisement

ಇಟ್ಟಿಗೆ ಕಾರ್ಖಾನೆ ಮಾಫಿಯಾ: ಕೆರೆಯಲ್ಲಿದ್ದ ಮರಗಳನ್ನು ಕಡಿದದ್ದು, ಯಾರು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಅಲ್ಲದೆ ಇಷ್ಟು ದೊಡ್ಡ ಪ್ರಮಾಣದ ಮರಗಳ ಮಾರಣ ಹೋಮ ನಡೆಸಿದ್ದರ ಹಿಂದೆ ದೊಡ್ಡ ರಾಜಕಾರಣಿಗಳ ಪ್ರಭಾವವಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕಳೆದ ಎರಡು ತಿಂಗಳಿನಿಂದ ರಾತ್ರೋ ರಾತ್ರಿ ಈ ಕೃತ್ಯ ಎಸಗಿದ್ದಾರೆ. ಕೆರೆಯಲ್ಲಿ ಮಣ್ಣು ತೆಗೆಯುವ ನೆಪದಲ್ಲಿ ಸುಮಾರು 3000 ಸಾವಿರ ಮರಗಳನ್ನು ಕಾಣದಂತೆ ಮಾಡಿದ್ದಾರೆ.

ಶಿಕ್ಷೆಗೆ ಆಗ್ರಹ: ಕೆರೆಯಲ್ಲಿದ್ದ ಮರಗಳನ್ನು ನೆಲಸಮಗೊಳಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ಆಗ್ರಹ ಪಡಿಸಿದೆ. ಜೂ.5ರಂದು ವಿಶ್ವ ಪರಿಸರ ದಿನಾಚರಣೆ ದೇಶ ಸೇರಿದಂತೆ ಜಗತ್ತು ಪರಿಸರ ಕಾಳಜಿ ತೋರುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಗಿಡ ನೆಡುವ ಆಂದೋಲ ನಡೆಯುತ್ತಿದೆ. ಆದರೆ ಸುಮಾರು 3,000ಕ್ಕೂ ಹೆಚ್ಚು ಮರಗಳು ಕಡಿದು ಬುಡ ಸಮೇತ ಮುಚ್ಚಿಡುವ ಕೃತ್ಯ ನಡೆದಿದ್ದು, ನಾಚಿಕೆಗೇಡಿನ ಸಂಗತಿ.

ಇಂತಹ ತಪ್ಪು ಮಾಡಿರುವ ವ್ಯಕ್ತಿ ವಿರುದ್ಧ ಕೂಡಲೆ ಕಾನೂನು ಕ್ರಮ ಜರುಗಿಸ ಬೇಕು ಎಂದು ಸಮಿತಿ ವ್ಯವಸ್ಥಾಪಕ ನಿರ್ದೇಶಕಿ ನಳಿನಿ ಬಿ. ಗೌಡ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ಸಾವಿರಾರು ಗಿಡ ನಾಶ ಮಾಡಿರುವವರ ವಿರುದ್ಧ ಕೇವಲ ಎಫ್ಐ ಆರ್‌ ಹಾಕಿದರೆ ಸಾಲದು, ನ್ಯಾಯಾಂಗ ಬಂಧನಕ್ಕೆ ಕಳುಹಿಸ ಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಾಮಾಜಿಕ ಜಾಲದಲ್ಲಿ ಆಕ್ರೋಶ: ಪರಿಸರ ಸಂರಕ್ಷಕಿ ಮಧುಶ್ರೀ ಸುದ್ದಿ ತಿಳಿದು ಕೆರೆ ಅಂಗಳಕ್ಕೆ ಭೇಟಿ ನೀಡಿ, ವಾಸ್ತವವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಲೈವ್‌ ಮಾಡಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜತೆಗೆ ಪರಿಸರ ಕಾಳಜಿ ತೋರಿದ್ದು, ತಪ್ಪಿತಸ್ಥರ ವಿರುದ್ಧ ಹೋರಾಟಕ್ಕೂ ಮುಂದಾಗಿದ್ದಾರೆ. ಈಗಾಗಲೆ ಸಾಮಾಜಿಕ ಜಾಲ ತಾಣದಲ್ಲಿ ಸಾವಿರಕ್ಕೂ ಹೆಚ್ಚು ಜನ ಹೋರಾಟವನ್ನು ಬೆಂಬಲಿಸಿದ್ದಾರೆ.

ಜೆಸಿಬಿ ಯಂತ್ರ ವಶ: ಸ್ಥಳೀಯ ಸುನ್ನಪ್ಪ ಎಂಬುವರು ಕೆರೆಯಲ್ಲಿನ ಮರಗಳ ನಾಪತ್ತೆ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುತ್ತಿದ್ದಂತೆ ಆನೇಕಲ್‌ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ರಂಗಸ್ವಾಮಿ ಸ್ಥಳಕ್ಕೆ ಧಾವಿಸಿ, ಅಲ್ಲಿದ್ದ ಜೆಸಿಬಿ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಯಂತ್ರ ಹಾಗೂ ಕಾರ್ಖಾನೆ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಲು ಮೀನಾಮೇಶ ಏಣಿಸುತ್ತಿದ್ದಾರೆ. ಇದಕ್ಕೆ ರಾಜಕೀಯ ಒತ್ತಡಗಳು ಕಾರಣ ಎಂಬ ಮಾತುಗಳು ಕೇಳುತ್ತಿವೆ. ಈ ಸುದ್ದಿ ತಿಳಿದ ಮಾಜಿ ಅಧ್ಯಕ್ಷ ಶಂಕರ್‌ ಅವರು ಖುದ್ದು ಅರಣ್ಯ ಕಚೇರಿಗೆ ಭೇಟಿ ನೀಡಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

* ಮಂಜುನಾಥ ಎನ್‌ ಬನ್ನೇರುಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next