Advertisement

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

11:53 PM Mar 27, 2024 | Team Udayavani |

ಕುಂದಾಪುರ: ಮಕ್ಕಳು ಶಾಲೆಯ ಗಂಟೆ ಬಾರಿಸಿದೊಡನೆ, ಸೂರ್ಯ ಬಾನ ನೆತ್ತಿಯಿಂದ ಕೆಳಗಿಳಿಯುತ್ತಿದ್ದಂತೆ, ರಜಾ ದಿನಗಳಲ್ಲಿ ಆಟದ ಅಂಗಣಕ್ಕೆ ಓಡುತ್ತಿದ್ದ ದಿನಗಳಿದ್ದವು. ಆಟೋಟಕ್ಕಾಗಿಯೇ ದಿನದಲ್ಲಿ ನಿರ್ದಿಷ್ಟ ಅವಧಿ ನಿಗದಿ ಆಗುತ್ತಿತ್ತು. ಈಗ ಅವೆಲ್ಲವೂ ಮಾಯವಾಗುತ್ತಾ ಬಂದಿದೆ. ಓದು ಮಾತ್ರ ಮುಖ್ಯವಾಗಿದೆ.

Advertisement

ಹವ್ಯಾಸದಲ್ಲೂ ಕ್ರೀಡೆಗಿಂತ ಇತರ ಹವ್ಯಾಸಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅದರಿಂದ ಮಕ್ಕಳ ಪಠ್ಯೇತರ, ದೈಹಿಕ, ಮಾನಸಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಅದಕ್ಕಾಗಿಯೇ ಮಕ್ಕಳಿಗೆ ಆಡಲು ಬೆಂಬಲ ಸಿಗಬೇಕು ಎಂದು ಅವಿಭಜಿತ ಕುಂದಾಪುರ ತಾಲೂಕಿನ ಇಬ್ಬರು ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿಯೆತ್ತಿದ್ದಾರೆ.

ಅಂತಾರಾಷ್ಟ್ರೀಯ ಮಕ್ಕಳ ಮತ್ತು ಯುವಜನರ ಸಲಹಾ ಸಮಿತಿಯನ್ನು ಪ್ರತಿನಿ ಧಿಸಿದ ಕುಂದಾಪುರದ ಮಕ್ಕಳ ಸಂಘದ ಸದಸ್ಯರು “ಆಟ ನಮ್ಮ ಹಕ್ಕು -ಆಟಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿ ಮಾಡಿ’ ಎಂಬ ಹಕ್ಕೊತ್ತಾಯ ಮಂಡಿಸಿದ್ದಾರೆ. ಬೈಂದೂರಿನ ನಾಡ ಮತ್ತು ಕುಂದಾಪುರದ ಹಾಲಾಡಿ ಮಕ್ಕಳ ಸಂಘದ ಸದಸ್ಯರಾದ ಶ್ರೀರûಾ ಮತ್ತು ಅಂಜಲಿ ಆಟಕ್ಕಾಗಿ ಒಂದು ದಿನವನ್ನು ನಿಗದಿಪಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಕ್ಕಳ ಮತ್ತು ಯುವ ಸಲಹಾ ಗುಂಪಿನ ಸದಸ್ಯರಾಗಿ ಆಯ್ಕೆಯಾಗಿ, ಶಿಫಾರಸುಗಳನ್ನು ಮಂಡಿಸಿದ್ದಾರೆ.

ಬಾಂಗ್ಲಾದೇಶ, ಫ್ರಾನ್ಸ್‌, ಸ್ಪೇನ್‌, ಜರ್ಮನಿ, ಉಗಾಂಡಾ, ತಾಂಜೇನಿಯಾ, ಭಾರತ ಮೊದಲಾದ ದೇಶಗಳ ಒಟ್ಟು 10 ಮಕ್ಕಳಿದ್ದರು. ಭಾರತದ ಇಬ್ಬರು ಮಕ್ಕಳು ಮಾತ್ರ ಭಾಗವಹಿಸಿದ್ದು ಇಬ್ಬರೂ ಉಡುಪಿ ಜಿಲ್ಲೆಯವರು ಎನ್ನುವುದು ವಿಶೇಷ.

10 ಜನರಲ್ಲಿ ಇಬ್ಬರು
ದಿ ಕನ್ಸರ್ನ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆ ಮಕ್ಕಳ ಸಂಘದ ಸದಸ್ಯರಾದ ಇವರಿಬ್ಬರು, ಅಭಿಯಾನದ ಪೂರ್ವದಲ್ಲಿ ವಿವಿಧ ದೇಶಗಳ ಸುಮಾರು 10,000ಕ್ಕೂ ಹೆಚ್ಚು ಮಕ್ಕಳ ಜತೆ ಸಮಾಲೋಚನೆ ನಡೆಸಿ, ಅಭಿಪ್ರಾಯ, ಶಿಫಾರಸು ಸಂಗ್ರಹಿಸಿದ್ದರು. ಈ ಎಲ್ಲ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ನಾವುಂದ ಸರಕಾರಿ ಪ್ರೌಢಶಾಲೆಯ 8ನೇ ತರಗತಿಯ ಶ್ರೀರûಾ ಮತ್ತು ಹಾಲಾಡಿ ಸರಕಾರಿ ಶಾಲೆಯ 7ನೇ ತರಗತಿಯ ಅಂಜಲಿ 10 ಜನ ಸದಸ್ಯರನ್ನೊಳಗೊಂಡ ಅಂತಾರಾಷ್ಟ್ರೀಯ ಮಕ್ಕಳು ಮತ್ತು ಯುವ ಸಲಹಾ ಗುಂಪಿನ ಸದಸ್ಯರಾಗಿ ಆಯ್ಕೆಯಾಗಿದ್ದರು. ವಿಶ್ವಸಂಸ್ಥೆಗೆ ಆಟವನ್ನು ಅಂತಾರಾಷ್ಟ್ರೀಯ ದಿನವಾಗಿ ನಿಗದಿಪಡಿಸಲು ತಮ್ಮ ಶಿಫಾರಸುಗಳ ಹಕ್ಕೊತ್ತಾಯವನ್ನು ನೀಡಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.
ಸಮಾಲೋಚನೆ
ಉಡುಪಿ ಜಿಲ್ಲೆಯಲ್ಲಿರುವ ದುಡಿಯುವ ಮಕ್ಕಳ ಸಂಘವಾದ ಭೀಮಾ ಸಂಘಗಳನ್ನು ಇವರು ಪ್ರತಿನಿಧಿ ಸಿದ್ದು ಸಲಹೆ ಸಂಗ್ರಹ ಸಂದರ್ಭ ಎಲ್ಲ ಮಕ್ಕಳು ಆಟದ ಬಗ್ಗೆ ನೀಡಿರುವ ಗಹನವಾದ ಸಲಹೆ, ಅಭಿಪ್ರಾಯ, ಶಿಪಾರಸುಗಳನ್ನು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು, ಆಟದ ಹಕ್ಕಿನ ಕುರಿತಾದ ತಜ್ಞರು ಮತ್ತು ಮಕ್ಕಳ ಹಕ್ಕುಗಳ ವಿಷಯ ತಜ್ಞರು ಪ್ರಶಂಸಿಸಿದ್ದಾರೆ.
ಧನಾತ್ಮಕ
ಮಕ್ಕಳು ನೀಡಿದ ಪ್ರಸ್ತಾವನೆಯಲ್ಲಿ ಮಕ್ಕಳ ಆಟವು, ಅದರ ವಿವಿಧ ರೂಪಗಳಲ್ಲಿ, ತಮ್ಮ ಜೀವನ, ಆರೋಗ್ಯ ಮತ್ತು ಯೋಗಕ್ಷೇಮ, ಸಂಬಂಧಗಳ ಮೇಲೆ ಹೇಗೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಸಮರ್ಥವಾಗಿ ವಿವರಿಸಿದ್ದಾರೆ ಎಂದು ದಿ ಕನ್ಸರ್ನ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆಯ ಸಂಯೋಜಕಿ ಕೃಪಾ ಭಟ್‌ ತಿಳಿಸಿದ್ದಾರೆ.

Advertisement

ಆಯ್ಕೆ ಹೇಗೆ?
ಐಡಿಒಪಿ (ಇಂಟರ್‌ನ್ಯಾಶನಲ್‌ ಡೇ ಆನ್‌ ಪ್ಲೇ) ಕುರಿತು ವಿಶ್ವಸಂಸ್ಥೆಗೆ ಮನವಿ ಮಾಡಲು ಅಂತಾರಾಷ್ಟ್ರೀಯ ಸಮಿತಿ ರಚನೆಯಾಗಿ ಸಂಘಟನೆಗಳ ಮೂಲಕ ವಿವಿಧ ದೇಶಗಳಿಂದ ಸಲಹೆ ಆಹ್ವಾನಿಸಲಾಗಿತ್ತು. ಇದಕ್ಕೆ ಬೆಂಗಳೂರು ಕೇಂದ್ರಿತ, ಹಟ್ಟಿಯಂಗಡಿಯ ಕನ್ಯಾನದಲ್ಲಿ ಸಂಪನ್ಮೂಲ ಕೇಂದ್ರವಿರುವ ದಿ ಕನ್ಸರ್ನ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆ ಆಯ್ಕೆಯಾಗಿತ್ತು. ಮಕ್ಕಳನ್ನು ಶಾಲಾವಾರು ಆಹ್ವಾನಿಸದೆ, ಪಂಚಾಯತ್‌ ಮಟ್ಟದಲ್ಲಿ ಇರುವ ಮಕ್ಕಳ ಸಂಘಗಳಿಂದ ಆಯ್ಕೆ ಮಾಡಲಾಗಿತ್ತು. ಕುಂದಾಪುರ, ಬೈಂದೂರಿನ 450 ಮಕ್ಕಳ ಜತೆ ಸಂವಾದ ನಡೆಸಿ ಆಯ್ದುಕೊಳ್ಳಲಾಗಿತ್ತು. ವಿಜಯಪುರದಿಂದ 2, ಉಡುಪಿ ಜಿಲ್ಲೆಯಿಂದ 6 ಮಕ್ಕಳು ಆಯ್ಕೆಯಾಗಿ, ಸಲಹೆಗೆ 4 ಮಕ್ಕಳು ಆಯ್ಕೆಯಾಗಿ ಪರಿಣಾಮಕಾರಿಯಾಗಿ ಸಲಹೆ ಮಂಡಿಸಲು ಕೊನೆಯ ಹಂತದಲ್ಲಿ ಉಡುಪಿ ಜಿಲ್ಲೆಯ ಶ್ರೀರಕ್ಷಾ ಮತ್ತು ಅಂಜಲಿ ಇಬ್ಬರು ಆಯ್ಕೆಯಾಗಿದ್ದರು.

ಮಕ್ಕಳ ಅಭಿವೃದ್ಧಿ, ಆರೋಗ್ಯ, ಕಲಿಕೆ ಮತ್ತು ಯೋಗಕ್ಷೇಮದಲ್ಲಿ ಆಟದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳುವ ಮೂಲಕ ಆಟವನ್ನು ಮಕ್ಕಳ ಹಕ್ಕು ಎಂದು ಪರಿಚಯಿಸಲಾಗಿದೆ. ಆಟಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಪೋಷಕರು, ಶಿಕ್ಷಕರು, ಸರಕಾರಗಳು ಮತ್ತು ಸಂಸ್ಥೆಗಳು ಮಾಡಬೇಕಾದ ಪರಿಹಾರ ಕ್ರಮಗಳನ್ನು ತಿಳಿಸಲಾಗಿದೆ.

– ಶ್ರೀರಕ್ಷಾ ನಾಡ

ಅನೇಕ ಮಕ್ಕಳಿಗೆ, ಆಟವು ಹಕ್ಕಿಗಿಂತ ಹೆಚ್ಚಾಗಿ ದುಬಾರಿಯಾಗಿ ಉಳಿದಿದೆ. ಈ ಹಕ್ಕೊತ್ತಾಯಗಳು ವಿಶ್ವದಾದ್ಯಂತ ಮಕ್ಕಳು ಮತ್ತು ಯುವಜನರಿಗೆ ಆಗುವ ಆಟದ ಪ್ರಯೋಜನ ಮತ್ತು ಮಹತ್ವವನ್ನು ಎತ್ತಿ ತೋರಿಸುತ್ತದೆ.

-ಅಂಜಲಿ ಹಾಲಾಡಿ

 – ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next