Advertisement

ಪ್ಲಾಸ್ಟಿಕ್ ತ್ಯಾಜ್ಯವೆಂಬ ಮಾರಕಾಸುರ

01:22 AM Jun 01, 2019 | Lakshmi GovindaRaj |

ಬೆಂಗಳೂರು: ಪೆಸಿಫಿಕ್‌ ಮಹಾಸಾಗರದಲ್ಲಿ ದಿನದಿಂದ ದಿನಕ್ಕೆ ಯತೇತ್ಛವಾಗಿ ಪ್ಲಾಸ್ಟಿಕ್‌ ಬಂದು ಸೇರುತ್ತಿದೆ. ಅದು ಎಷ್ಟರಮಟ್ಟಿಗೆ ವ್ಯಾಪಿಸುತ್ತಿದೆ ಎಂದರೆ, ಬಾಹ್ಯಾಕಾಶದಿಂದ ಕೂಡ ಈ ಪ್ಲಾಸ್ಟಿಕ್‌ ತೇಪೆ ಎದ್ದುಕಾಣುತ್ತಿದೆ ಎಂದು ಇತ್ತೀಚೆಗೆ ಕ್ಲೀನ್‌ ಅಪ್‌ ಓಸಿಯನ್‌ ಎಂಬ ಸಂಸ್ಥೆಯೊಂದು ವರದಿ ಮಾಡಿದೆ. ಅಷ್ಟೇ ಯಾಕೆ, 2050ರ ವೇಳೆಗೆ ಸಮುದ್ರದಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಇರಲಿದೆ ಎಂದು ಎಲೆನ್‌ ಮ್ಯಾಕ್‌ಆರ್ಥರ್‌ ಫೌಂಡೇಷನ್‌ ಅಂದಾಜಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್‌ ಸಮಸ್ಯೆಗೆ ಒಂದು ಉದಾಹರಣೆ ಅಷ್ಟೇ.

Advertisement

ಸಮಸ್ಯೆಯ ತೀವ್ರತೆ ಮನಗಂಡು ಕರ್ನಾಟಕ ಸರ್ಕಾರ, ಎರಡು ವರ್ಷಗಳ ಹಿಂದೆಯೇ ಪ್ಲಾಸ್ಟಿಕ್‌ ನಿಷೇಧ ಮಾಡಿದೆ. ಆದರೆ, ಅದನ್ನು ಬಳಸುವ ನಮಗೆ ಅರಿವಾಗಿದೆಯೇ? ಉತ್ತರ- ಇಲ್ಲ. ಬಿಬಿಎಂಪಿ ನೀಡಿದ ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ ಪ್ರತಿ ದಿನ 4,500 ಸಾವಿರ ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಒಣತ್ಯಾಜ್ಯದ ಪ್ರಮಾಣ ಶೇ.40ರಷ್ಟಾಗಿದೆ. ಇದು ಬಹುತೇಕ ಪ್ಲಾಸ್ಟಿಕ್‌ ತ್ಯಾಜ್ಯವೇ ಆಗಿರುತ್ತದೆ. ಎರಡು ವರ್ಷಗಳ ಹಿಂದೆಯೂ ಹೆಚ್ಚು-ಕಡಿಮೆ ಇದರ ಪ್ರಮಾಣ ಅಷ್ಟೇ ಇತ್ತು. ಇದಕ್ಕೆ ಕಡಿವಾಣ ಹಾಕುವಲ್ಲಿ ಸ್ವತಃ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಕೂಡ ಅಸಹಾಯಕರಾಗಿದ್ದಾರೆ.

ರಾಜ್ಯದಲ್ಲಿ 2016ರಿಂದ ಪ್ಲಾಸ್ಟಿಕ್‌ ನಿಷೇಧ ಜಾರಿಯಲ್ಲಿದೆ. 2010ರಲ್ಲಿ ನಗರದಲ್ಲಿ 40 ಮೈಕ್ರಾನ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಲಾಗಿತ್ತು. ಇದು 2016ರವೇಳೆಗೆ 50 ಮೈಕ್ರಾನ್‌ಗಿಂತ (ತೆಳುವಾದ) ಕಡಿಮೆ ಬಳಸಬೇಕು ಎನ್ನುವ ಆದೇಶವಾಗಿ ಬದಲಾಯಿತು. ಆದೇಶಗಳು ಬದಲಾದವಾರೂ ಸಮಸ್ಯೆಗಳ ಸ್ವರೂಪದಲ್ಲಿ ಯಾವುದೇ ಬದಲಾವಣೆಗಳು ಆಗಲಿಲ್ಲ.

ಮಂಡಳಿಯೂ ಅಸಹಾಯಕ: 2016ರ ನಂತರ ಪ್ಲಾಸ್ಟಿಕ್‌ ಉತ್ಪಾದನಾ ಕೇಂದ್ರಗಳ ಮೇಲೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರಂತರವಾಗಿ ದಾಳಿ ನಡೆಸುತ್ತಿದೆ. ಈವರೆಗೆ ರಾಜ್ಯದ ಪ್ರಮುಖ ನಗರಗಳಲ್ಲಿನ 96 ಪ್ಲಾಸ್ಟಿಕ್‌ ಉತ್ಪಾದನಾ ಕೇಂದ್ರಗಳಿಗೆ ನೋಟಿಸ್‌ ನೀಡಲಾಗಿದೆ. ಇವುಗಳಲ್ಲಿ 46ಕ್ಕೂ ಹೆಚ್ಚು ಕಂಪನಿಗಳನ್ನು ಶಾಶ್ವತವಾಗಿ ಮುಚ್ಚಲು ಆದೇಶಿಸಲಾಗಿದೆ. ಇದರಲ್ಲಿ ಬೆಂಗಳೂರಿನ 37 ಕಂಪನಿಗಳಿವೆ. ಆದರೆ, ಪ್ಲಾಸ್ಟಿಕ್‌ ಸಮಸ್ಯೆಯನ್ನು ಬುಡಸಮೇತ ಕಿತ್ತುಹಾಕುವಲ್ಲಿ ಮಂಡಳಿ ಯಶಸ್ವಿಯಾಗಿಲ್ಲ. ಪ್ಲಾಸ್ಟಿಕ್‌ ನಿಷೇಧಿಸಲು ಸಂಸ್ಥೆಗೆ ಇರುವ ಅಡೆತಡೆಗಳ ಬಗ್ಗೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್‌ ನೀಡುವ ಅಧಿಕಾರ ಮಾತ್ರ ಇದೆ. ರಾಜ್ಯದಲ್ಲಿನ ಕಾರ್ಖಾನೆಗಳನ್ನು ಮುಚ್ಚಿದರೂ ಹೊರರಾಜ್ಯದಿಂದ ರಾಜ್ಯಕ್ಕೆ ಪ್ಲಾಸ್ಟಿಕ್‌ ಬರುತ್ತಿದೆ. ಇದನ್ನು ನಿಯಂತ್ರಿಸುವುದು ಕಷ್ಟ. ಎಲ್ಲ ರಾಜ್ಯಗಳಲ್ಲೂ ನಿಷೇಧ ಹೇರದ ಹೊರತು ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.

Advertisement

ತಕ್ಕಮಟ್ಟಿಗೆ ತಗ್ಗಿದೆ; ಹಸಿರುದಳ: “ಪ್ಲಾಸ್ಟಿಕ್‌ ಬಳಕೆ ಕಡಿಮೆಯೇ ಆಗಿಲ್ಲ, ಗೋಪುರದ ರೀತಿಯಲ್ಲಿದೆ ಎಂದು ಹೇಳುವುದು ಸುಲಭ. ವೈಜ್ಞಾನಿಕವಾಗಿ ನೋಡಿದರೆ ಕೈಚೀಲದ ಪ್ಲಾಸ್ಟಿಕ್‌ ಬಳಕೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದೆ. ಆದರೆ, ಸಂಪೂರ್ಣ ಯಶಸ್ಸು ಸಾಧಿಸಲು ಈ ಪ್ರಮಾಣ ಸಾಕಾಗುವುದಿಲ್ಲ’ ಎನ್ನುತ್ತಾರೆ ಹಸಿರುದಳದ ಸಹಸಂಸ್ಥಾಪಕಿ ನಳಿನಿ ಶೇಖರ್‌.

ಈ ಹಿಂದೆ ಒಂದೂವರೆಯಿಂದ ಎರಡು ಸಾವಿರ ಕೆ.ಜಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಬರುತ್ತಿದ್ದ ಪ್ಲಾಸ್ಟಿಕ್‌ ಪ್ರಮಾಣ ಈಗ 150ರಿಂದ 200 ಕೆ.ಜಿ.ಗೆ ಇಳಿದಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಜನರಿಗೆ ಪ್ಲಾಸ್ಟಿಕ್‌ನ ಪರ್ಯಾಯ ಉತ್ಪನ್ನದ ಬಗ್ಗೆ ಜಾಗೃತಿ ಮೂಡಿಸಬೇಕು. ನೂತನ ತಂತ್ರಜ್ಞಾನ ತಿಳಿದುಕೊಂಡಿರುವ ನಮ್ಮ ಜನ ತ್ಯಾಜ್ಯ ವಿಂಗಡಣೆ ಮಾಡದಷ್ಟು ದಡ್ಡರಲ್ಲ. ಇದಕ್ಕೆ ಬಿಬಿಎಂಪಿಯೂ ಕಟ್ಟುನಿಟ್ಟಿನ ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.

ಇವು ನಿಷೇಧ: ಕ್ಯಾರಿಬ್ಯಾಗ್‌, ಲೋಟ, ತಟ್ಟೆ, ಸ್ಟ್ರಾ, ಚಮಚ, ಊಟದ ಟೇಬಲ್‌ಗ‌ಳ ಮೇಲೆ ಹಾಸುವ ಮತ್ತು ಹಣ್ಣು ಹಂಪಲುಗಳ ಮೇಲೆ ಸುತ್ತುವ ತೆಳುವಾದ ಪ್ಲಾಸ್ಟಿಕ್‌ ಹಾಳೆಗಳು, ಬಾವುಟಗಳು, ಬಂಟಿಂಗ್ಸ್‌, ಥರ್ಮಾಕೋಲ್‌ ಮತ್ತು ತಟ್ಟೆ ಲೋಟಗಳನ್ನು ನಿಷೇಧಿಸಲಾಗಿದೆ.

ಇವುಗಳಿಗೆ ವಿನಾಯ್ತಿ: ಹಾಲಿನ ಪ್ಯಾಕೇಟ್‌, ತೋಟಗಾರಿಕೆ ಮತ್ತು ಸಸಿಗಳಿಗೆ ಬಳಸಲಾಗುವ ಪ್ಲಾಸ್ಟಿಕ್‌ ಪ್ಯಾಕೇಜಿಂಗ್‌ನ ಅವಿಭಾಜ್ಯ ಅಂಗವಾಗಿರುವ ಕಡೆಗಳಲ್ಲಿ, ರಫ್ತು ಆಧಾರಿತ ಘಟಕಗಳಲ್ಲಿ ಬಳಸುವ ಪ್ಲಾಸ್ಟಿಕ್‌ಗೆ ವಿನಾಯ್ತಿ ನೀಡಲಾಗಿದೆ.

ದಂಡ ಪ್ರಮಾಣ
ಉತ್ಪಾದನೆ- ಮೊದಲಬಾರಿಗೆ 2 ಲಕ್ಷ ರೂ. ಹಾಗೂ 2ನೇ ಬಾರಿಗೆ 5 ಲಕ್ಷ ರೂ.
ಸಂಗ್ರಹ- ಮೊದಲ ಬಾರಿಗೆ 1 ಲಕ್ಷ ರೂ. ಹಾಗೂ 2ನೇ ಬಾರಿಗೆ 2 ಲಕ್ಷ ರೂ.
ಮಾರಾಟ- ಮೊದಲ ಬಾರಿಗೆ 50 ಸಾವಿರ ರೂ. ಹಾಗೂ 2ನೇ ಬಾರಿ 1 ಲಕ್ಷ ರೂ.
ವಾಣಿಜ್ಯ ಬಳಕೆ- ಮೊದಲ ಸಲ 25,000 ರೂ. ಮತ್ತು 2ನೇ ಸಲ 50 ಸಾವಿರ ರೂ.
ಸಾಮಾನ್ಯ ವ್ಯಕ್ತಿ- ಮೊದಲ ಸಲ 500 ಹಾಗೂ 2ನೇ ಸಲ 1 ಸಾವಿರ ರೂ.

ಸಣ್ಣ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್‌ ಬಳಕೆ ನಿಷೇಧ ಸವಾಲಿನ ಕೆಲಸವಾಗಿದೆ. ಸಾರ್ವಜನಿಕರೇ ಕ್ಯಾರಿ ಬ್ಯಾಗ್‌ ಕೇಳುವುದರಿಂದ ಬೀದಿ ವ್ಯಾಪಾರಿಗಳು ಅನಿರ್ವಾಯವಾಗಿ ಬಳಸುತ್ತಿದ್ದಾರೆ. ಜನರೇ ಪ್ಲಾಸ್ಟಿಕ್‌ ಬೇಡ ಎನ್ನುವವರೆಗೆ ಸಮಸ್ಯೆ ಬಗೆಹರಿಯದು.
-ಸರ್ಫರಾಜ್‌ ಖಾನ್‌, ಜಂಟಿ ಆಯುಕ್ತ (ಘನತ್ಯಾಜ್ಯ)

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next