Advertisement

ಕಾರ್ಖಾನೆಗಳ ಆರಂಭಕ್ಕೆ ಜು.5ವರೆಗೆ ಗಡುವು

10:54 AM Jun 29, 2019 | Team Udayavani |

ಮಂಡ್ಯ: ಮೈಷುಗರ್‌ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಗಳ ಆರಂಭಕ್ಕೆ ಜು.5ರವರೆಗೆ ರಾಜ್ಯಸರ್ಕಾರಕ್ಕೆ ಗಡುವು ನೀಡಲಾಗಿದೆ. ನಿಗದಿತ ಅವಧಿಯೊಳಗೆ ಕಾರ್ಖಾನೆಗಳ ಆರಂಭಕ್ಕೆ ಕ್ರಮ ವಹಿಸದಿದ್ದರೆ ಆಮರಣಾಂತ ಉಪವಾಸ ಕೈಗೊಳ್ಳಲಾಗುವುದು. ಅದಕ್ಕೂ ಸರ್ಕಾರ ಮಣಿಯದಿದ್ದರೆ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗುವುದು ಎಂದು ಸ್ವಾಭಿಮಾನಿ ಹೋರಾಟ ವೇದಿಕೆ ಅಧ್ಯಕ್ಷ ಡಾ.ಹೆಚ್.ಎನ್‌.ರವೀಂದ್ರ ತಿಳಿಸಿದರು.

Advertisement

ಜಿಲ್ಲೆಯ ಸುಮಾರು 70 ಎಕರೆ ಪ್ರದೇಶದಲ್ಲಿರುವ ಕಬ್ಬು ನೀರಿಲ್ಲದೆ ಒಣಗುತ್ತಿದೆ. ರೈತರು ಬೆಳೆ ನಷ್ಟದ ಆತಂಕದಲ್ಲಿದ್ದಾರೆ. ಬೆಳೆ ರಕ್ಷಣೆಗಾಗಿ ನೀರು ಹರಿಸುವಂತೆ ರೈತರು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಕಿವಿಗೊಡದೆ ಮೌನ ವಹಿಸಿದೆ. ಜಿಲ್ಲೆಯಲ್ಲಿ ಮತ್ತೆ ಸರಣಿ ಆತ್ಮಹತ್ಯೆಗಳು ಶುರುವಾಗಿದ್ದು, ಸರ್ಕಾರದ ಬೇಜವಾಬ್ದಾರಿತನವೇ ಇದಕ್ಕೆಲ್ಲಾ ಮುಖ್ಯ ಕಾರಣ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ಪಿಎಂ ಬಳಿಗೆ ನಿಯೋಗ: ನೀರು ಹರಿಸುವುದಕ್ಕೆ ತಾಂತ್ರಿಕ ತೊಂದರೆಗಳಿದ್ದರೆ ಅದನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು ಅವರನ್ನು ಸಮಾಧಾನಪಡಿಸಬಹುದಿತ್ತು. ರಾಜ್ಯಸರ್ಕಾರ ನೀರಿನ ಸ್ಥಿತಿ-ಗತಿಯ ನಿಖರ ಅಂಕಿ-ಅಂಶಗಳನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದಿಟ್ಟು ರೈತರ ಬದುಕಿನ ರಕ್ಷಣೆಗಾಗಿ ಬೆಳೆಗಳಿಗೆ ನೀರು ಹರಿಸುವಂತೆ ಮನವಿ ಮಾಡಬಹುದಿತ್ತು. ಕೊನೆ ಪಕ್ಷ ರಾಜ್ಯದ ಎಲ್ಲ ಸಂಸದರ ಸಭೆ ಕರೆದು ಮಳೆ ಕೊರತೆಯಿಂದ ನೀರಿಗೆ ಅಭಾವ ಸೃಷ್ಟಿಯಾಗಿರುವುದರ ಬಗ್ಗೆ ಚರ್ಚಿಸಿ ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯುವ ಕನಿಷ್ಠ ಪ್ರಯತ್ನವನ್ನು ನಡೆಸದೆ ಕೇಂದ್ರದ ಮೇಲೆ ಜವಾಬ್ದಾರಿ ಹಾಕಿ ಮೌನ ವಹಿಸಿರುವುದು ಸರಿಯಲ್ಲ ಎಂದು ಹೇಳಿದರು.

ಅಮರಣಾಂತ ಉಪವಾಸ: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಭಾವನೆಗಳನ್ನು ಅರಿತವರಾಗಿದ್ದು, ಒಂದು ವೇಳೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ನಮಗೆ ಬದುಕಲು ಅರ್ಹತೆ ಇಲ್ಲ ಎಂದು ತಿಳಿದು ಜು.6ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದು. ಇಂತಹ ಕಷ್ಟಗಳನ್ನು ಅನುಭವಿಸುತ್ತಾ ಪ್ರತಿನಿತ್ಯ ನರಳುತ್ತಾ ಬದುಕುವುದಕ್ಕಿಂತ ದಯಾಮರಣ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು. ರೈತರು ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷ ರೂ. ಪರಿಹಾರ ನೀಡುವ ಬದಲು ಆ ಹಣದಿಂದಲೇ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ಮೈಷುಗರ್‌ ಪುನಶ್ಚೇತನಗೊಳಿಸಿ: ಬಿಜೆಪಿ ಮುಖಂಡ ಕೆ.ಎಸ್‌.ನಂಜುಂಡೇಗೌಡ ಮಾತನಾಡಿ, ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಬಗ್ಗೆ ಜಿಲ್ಲಾ ಸಚಿವ ಪುಟ್ಟರಾಜು ಮಾತನಾಡುತ್ತಿದ್ದಾರೆ. ಖಾಸಗೀಕರಣ ಪ್ರಕ್ರಿಯೆ ನಡೆಯಲು ಎಷ್ಟು ದಿನ ಬೇಕು. ಕಾರ್ಖಾನೆ ಯಾವಾಗ ಆರಂಭಿಸುತ್ತೀರಿ. ಸಿಎಂ ಕುಮಾರಸ್ವಾಮಿ ಮಂಡ್ಯ ಸಮೀಪದ ಸಾತನೂರಿನಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಿಸುವ ಘೋಷಣೆ ಮಾಡಿದ್ದರು. ಆದರೆ, ಸಕ್ಕರೆ ಸಚಿವ ತಿಮ್ಮಾಪುರ್‌ ಹೊಸ ಸಕ್ಕರೆ ಕಾರ್ಖಾನೆ ಪ್ರಸ್ತಾವನೆಯೇ ನಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ. ಈ ಗೊಂದಲ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next