ಬಳ್ಳಾರಿ: ಮನೆಗೊಂದು ಪ್ರತ್ಯೇಕ ಶೌಚಾಲಯ ನಿರ್ಮಿಸುವಲ್ಲಿ ಜಿಲ್ಲೆಯ ಕೇಂದ್ರಸ್ಥಾನ ಬಳ್ಳಾರಿ ತಾಲೂಕೇ ಹಿಂದೆ ಬಿದ್ದಿರುವುದು ಶೋಚನೀಯ ಸಂಗತಿ ಎಂದು ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರಗುಡಿ ವಿಷಾದ ವ್ಯಕ್ತಪಡಿಸಿದರು.
ನಗರದ ಬಿಡಿಎಎ ಸಭಾಂಗಣದಲ್ಲಿ ತಾಪಂ ವತಿಯಿಂದ ಸೋಮವಾರ ಏರ್ಪಡಿಸಿದ್ದ ಬಯಲು ಶೌಚಾಲಯ ಮುಕ್ತ ತಾಲೂಕಿಸುವ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಹಿಂದುಳಿದ ಹೈಕ ಭಾಗದಲ್ಲಿ ಗುರುತಿಸಿಕೊಂಡಿರುವ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಹೊಸಪೇಟೆ ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳು ಅತ್ಯಂತ ಹಿಂದುಳಿದಿವೆ. ಆದರೆ, ಶೌಚಾಲಯ ನಿರ್ಮಾಣದಲ್ಲಿ ಹಿಂದುಳಿದ ಎಲ್ಲ ತಾಲೂಕುಗಳು ಮುಂದಾಗಿದ್ದರೆ, ಬಳ್ಳಾರಿ ತಾಲೂಕು ಮಾತ್ರ ಅತ್ಯಂತ ಹಿಂದೆ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಜಿಲ್ಲೆಯಲ್ಲಿ 1.40 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ. ಇನ್ನು ಕೇವಲ 14755 ಸಾವಿರ ಮಾತ್ರ ಬಾಕಿ ಉಳಿದಿವೆ. ಈ ಪೈಕಿ ಹೊಸಪೇಟೆ ಶೇ.100ರಷ್ಟು ಗುರಿ ಸಾಧಿ ಸಿದ್ದರೆ, ಹಡಗಲಿ 894, ಹ.ಬೊ.ಹಳ್ಳಿ 3960, ಕೂಡ್ಲಿಗಿ 2855, ಸಂಡೂರು 1826, ಸಿರುಗುಪ್ಪ 280, ಬಳ್ಳಾರಿ 4940 ಸೇರಿದಂತೆ ಒಟ್ಟು 14755 ಸಾವಿರ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿಸಲು ಕೇವಲ 14000 ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಆ.15 ರೊಳಗಾಗಿ ಬಾಕಿ ಶೌಚಾಲಯಗಳನ್ನು ನಿರ್ಮಿಸಿ, ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತಗೊಳಿಸುವಲ್ಲಿ ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿಗಳು ಎಲ್ಲರೂ ಪಣ ತೊಡಬೇಕೆಂದು ತಾಕೀತು ಮಾಡಿದರು.
ರಾಜ್ಯದ 30 ಜಿಲ್ಲೆಗಳಲ್ಲಿ 20 ಜಿಲ್ಲೆಗಳು ಬಯಲು ಶೌಚಾಲಯ ಮುಕ್ತ ಜಿಲ್ಲೆಗಳಾಗಿವೆ. ಪಕ್ಕದ ಕೊಪ್ಪಳ ಜಿಲ್ಲೆಯು ಬಯಲು ಶೌಚಾಲಯದಿಂದ ಮುಕ್ತಗೊಂಡಿರುವ ಜಿಲ್ಲೆಯಾಗಿದೆ. ಆದರೆ, ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ಹಿಂದೆ ಬಿದ್ದಿದ್ದು, ಈ 10 ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆ ಮುಂದಿದೆ. ಜಿಲ್ಲೆಯಲ್ಲಿ ಶೇ.94.5ರಷ್ಟು ಗುರಿ ಸಾಧಿಸಲಾಗಿದ್ದು, ಇನ್ನು ಕೇವಲ ಶೇ.5.5ರಷ್ಟು ಗುರಿ ಸಾಧಿಸಿದರೆ, ಬಳ್ಳಾರಿಯೂ ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿ ಹೊರ ಹೊಮ್ಮಲಿದೆ ಎಂದರು.
ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಈಗಾಗಲೇ ಹಲವು ಬಾರಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಕೆಲವರು ಶೌಚಾಲಯ ನಿರ್ಮಿಸಿಕೊಳ್ಳಲು ಆಸಕ್ತಿ ತೋರಿದರೆ, ಇನ್ನು ಕೆಲವರು ನಿರಾಸಕ್ತಿ ತೋರಿದ್ದಾರೆ.
ಆದರೂ, ಶೌಚಾಲಯ ನಿರ್ಮಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿಯೊಬ್ಬರೂ ಶ್ರಮಿಸಿ ಮುಂದಿನ ಆ.15 ರೊಳಗಾಗಿ ಇನ್ನುಳಿದ 14755 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಳ್ಳಾರಿ ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿಸಬೇಕು. ಎಸ್‌ಸಿ-ಎಸ್‌ಟಿಗೆ 15000 ರೂ., ಸಾಮಾನ್ಯ ವರ್ಗಕ್ಕೆ 12000 ರೂ. ಅನುದಾನ ನೀಡಲಾಗುತ್ತದೆ. ಇದನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಪಂ ಅಧ್ಯಕ್ಷೆ ರಮೀಜಾ ಬೀ, ಉಪಾಧ್ಯಕ್ಷ ಮಲ್ಲಿಕಾರ್ಜುನ, ತಾಪಂ ಇಒ ಜಾನಕಿರಾಮ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರಿದ್ದರು. ಬಳಿಕ ಬಯಲು ಶೌಚಾಲಯ ಮುಕ್ತ ತಾಲೂಕಾಗಿಸುವ ಕುರಿತು ತರಬೇತಿ ಶಿಬಿರ ನಡೆಯಿತು