Advertisement

ಸಮುದ್ರಪಾಲಾಗಿದ್ದ ಯುವಕನ ಮೃತದೇಹ ಪತ್ತೆ

12:08 AM Jul 20, 2023 | Team Udayavani |

ಕುಂದಾಪುರ: ತ್ರಾಸಿ ಬೀಚ್‌ನಲ್ಲಿ ಮಂಗಳವಾರ ಸಮುದ್ರಕ್ಕೆ ಬೆನ್ನು ಹಾಕಿ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಸಮುದ್ರದ ಅಲೆ ಅಪ್ಪಳಿಸಿ, ಕಾಲು ಜಾರಿ ಸಮುದ್ರಕ್ಕೆ ಬಿದ್ದು, ನಾಪತ್ತೆಯಾಗಿದ್ದ ಗದಗ ಮೂಲದ ಫೀರ್‌ ಸಾಬ್‌ ನದಾಪ್‌ (21) ಅವರ ಮೃತದೇಹ ಗುಜ್ಜಾಡಿ ಗ್ರಾಮದ ಕಂಚಗೋಡು ಸಮೀಪದ ಸನ್ಯಾಸಿಬಲೆ ಎಂಬಲ್ಲಿ ಬುಧವಾರ ಪತ್ತೆಯಾಗಿದೆ.

Advertisement

ಫೀರ್‌ ಸಾಬ್‌ ಅವರ ಪತ್ತೆಗಾಗಿ ಮಂಗಳವಾರ ಮಧ್ಯಾಹ್ನದಿಂದ ರಾತ್ರಿಯವರೆಗೂ ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಆ್ಯಂಬುಲೆನ್ಸ್‌ ಕಾರ್ಯಕರ್ತರು, ಸ್ಥಳೀಯರು ಹುಡುಕಾಟ ನಡೆಸಿದರೂ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬುಧವಾರ ಬೆಳಗ್ಗೆ ಘಟನೆ ನಡೆದ ಸ್ಥಳದಿಂದ ಸುಮಾರು 2-3 ಕಿ.ಮೀ. ದೂರದ ಸನ್ಯಾಸಿಬಲೆ ಎಂಬಲ್ಲಿನ ದಡದಲ್ಲಿ ಮೃತದೇಹ ಸಿಕ್ಕಿದೆ. ಗಂಗೊಳ್ಳಿ ಎಸ್‌ಐ ಹರೀಶ್‌ ಹಾಗೂ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದರು.

ಫೀರ್‌ ಸಾಬ್‌ 2 ತಿಂಗಳ ಹಿಂದೆ ಗಾರೆ ಕೆಲಸಕ್ಕಾಗಿ ಉಡುಪಿಗೆ ಬಂದಿದ್ದು, ಕಾಪುವಿನ ಮುದರಂಗಡಿಯಲ್ಲಿ ನೆಲೆಸಿದ್ದರು. ಮಂಗಳವಾರ ಸಿರಾಜ್‌ ಅವರ ಲಾರಿಯಲ್ಲಿ ಸಿದ್ದಪ್ಪ ಜತೆ ಊರಿಗೆ ತೆರಳಿದ್ದರು. ದಾರಿ ಮಧ್ಯೆ ತ್ರಾಸಿ- ಮರವಂತೆ ಬೀಚ್‌ನಲ್ಲಿ ನಿಲ್ಲಿಸಿ, ಅಲ್ಲಿನ ಕಡಲನ್ನು ವೀಕ್ಷಣೆ ಮಾಡಿ, ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಈ ಅವಘಡ ಸಂಭವಿಸಿದೆ.
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಎಸ್‌ಐ ವಿನಯ ಎಂ ಕೊರ್ಲಹಳ್ಳಿ ಅವರು ಯುವಕನ ಮೃತದೇಹವನ್ನು ಅವರ ಹುಟ್ಟೂರು ಗದಗಕ್ಕೆ ಕೊಂಡೊಯ್ಯಲು ನೆರವಾದರು.

ನಿರ್ಲಕ್ಷ್ಯ ವಹಿಸಬೇಡಿ
ತ್ರಾಸಿ- ಮರವಂತೆಯಲ್ಲಿ ಕಡಲ ತೀರದ ಸಂರಕ್ಷಣೆಗಾಗಿ ಅಳವಡಿಸಲಾದ ಕಲ್ಲು ಬಂಡೆ (ತಡೆಗೋಡೆ) ಮಳೆಯಿಂದಾಗಿ ಪಾಚಿಗಟ್ಟಿ ಜಾರುತ್ತಿದೆ. ಈ ಕಲ್ಲು ಬಂಡೆಗೆ ಇಳಿಯುವುದು, ಅಲೆಗಳು ಅಪ್ಪಳಿಸುವ ತೀರದವರೆಗೂ ಹೋಗಿ, ಸೆಲ್ಫಿ ತೆಗೆಸಿಕೊಳ್ಳುವುದು ಸಹ ಅಪಾಯಕಾರಿಯಾಗಿದೆ. ಇದಲ್ಲದೆ ಇಲ್ಲಿನ ಕಡಲ ಕಿನಾರೆ ಹೆಚ್ಚು ಆಳವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೀಚ್‌ಗೆ ಇಳಿದು ನೀರಲ್ಲಿ ಆಟವಾಡುವುದನ್ನು ನಿಷೇಧಿಸಿದ್ದರೂ, ಪ್ರವಾಸಿಗರು ನಿರ್ಲಕ್ಷé ವಹಿಸುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next