ಕುಮಟಾ: ಮೈದಾನದುದ್ದಕ್ಕೂ ಮದ್ಯದ ಬಾಟಲಿಗಳ ಕಾರುಬಾರು. ಕತ್ತಲಾಯಿತೆಂದರೆ ವ್ಯಸನಿಗರ ಅಡ್ಡಾವಾಗುತ್ತಿದ್ದರೂ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ. ಹಲವು ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಪಟ್ಟಣದ ಐತಿಹಾಸಿಕ ಮಣಕಿ ಮೈದಾನ ಈಗ ಮಂಕು ಕವಿದಂತಾಗಿದೆ.
ಪಟ್ಟಣದ ಮಹಾತ್ಮಗಾಂಧಿ ಮೈದಾನ (ಮಣಕಿ ಗ್ರೌಂಡ್) ಅಭಿವೃದ್ಧಿ ಕಾಣದೆ, ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಪಟ್ಟಣದ ಹೃದಯಭಾಗದಲ್ಲಿರುವ ಮಣಕಿ ಮೈದಾನ ಸುಮಾರು 11 ಎಕರೆಗಳಷ್ಟಿರುವ ಜಿಲ್ಲೆಯಲ್ಲಿಯೇ ವಿಶಾಲವಾದ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಈ ಮೈದಾನದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಸೇರಿದಂತೆ ಹಲವು ಗಣ್ಯರ ಕಾರ್ಯಕ್ರಮಗಳಿಗೆ ಈ ಮೈದಾನ ಸಾಕ್ಷಿಯಾಗಿದೆ.
ಕುಮಟಾ ಉತ್ಸವ, ಹಬ್ಬ, ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಅಲ್ಲದೇ ವಿವಿಧ ರಾಜಕೀಯ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರ ಮುಖಂಡರುಗಳಿಗೂ ಈ ಮೈದಾನದ ಪರಿಚಯವಿದೆ. ಇಂಥ ಐತಿಹಾಸಿಕ ಹಿನ್ನೆಲೆಯಿರುವ ಮೈದಾನವು ಮೂಲ ಸೌಕರ್ಯಗಳಿಲ್ಲದೆ ಬಣಗುಡುತ್ತಿದೆ.
ಅಲ್ಲದೆ ತಾಲೂಕು ಆಡಳಿತ ಈ ಮೈದಾನದಲ್ಲಿ ಎಲ್ಲ ರಾಷ್ಟ್ರೀಯ ದಿನಾಚಣೆ ಮತ್ತು ಹಬ್ಬಗಳನ್ನು ಆಚರಿಸುತ್ತದೆಯೇ ಹೊರತು ಅಭಿವೃದ್ಧಿ ಕಡೆಗೆ ಗಮನ ಹರಿಸಿಲ್ಲ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಈ ಮೈದಾನ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ರಾತ್ರಿಯಾಯಿತೆಂದರೆ ಮದ್ಯ ವ್ಯಸನಿಗರ ಅಡ್ಡಾವಾಗುತ್ತಿದೆ. ಎಲ್ಲಿ ನೋಡಿದರೂ ಮದ್ಯದ ಬಾಟಿಲಿಗಳು ಹಾಗೂ ಬಾಟಲಿಯ ಚೂರುಗಳು ಕಾಣ ಸಿಗುತ್ತದೆ. ಇದರಿಂದ ಪ್ರತಿನಿತ್ಯ ಆಡಲು ಬರುವವರಿಗೆ ಹಾಗೂ ವಾಯವಿಹಾರಕ್ಕೆಂದು ಬರುವ ಜನರಿಗೆ ತೊಂದರೆಯಾಗುತ್ತಿದೆ. ಇಂಥ ಸುಂದರ ಮತ್ತು ವಿಶಾಲ ಮೈದಾನ ಅಭಿವೃದ್ಧಿ ಹೊಂದದಿರುವುದಕ್ಕೆ ಅನೇಕ ಕ್ರೀಡಾ ಪ್ರೇಮಿಗಳು, ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಂಜೆ ಸಮಯದಲ್ಲಿ ವಾಯುವಿಹಾರಕ್ಕೆಂದು ಪ್ರತಿದಿನ ಬರುತ್ತಿದ್ದೆವು. ಆದರೆ ಈಗಿನ ಮೈದಾನದ ಸ್ಥಿತಿ ಗಮನಿಸಿದರೆ ಮಹಿಳೆಯರು ಹಾಗೂ ಮಕ್ಕಳು ಇತ್ತ ಬರದಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ.
• ಶ್ರೀಲತಾ ಭಟ್,ಸ್ಥಳೀಯರು
ಮೈದಾನದ ಸುತ್ತಲೂ ರಾತ್ರಿಯ ಸಂದರ್ಭದಲ್ಲಿ ಕನಿಷ್ಠ ಎರಡು ಬಾರಿ ಪಹರೆಯನ್ನ ನಡೆಸುತ್ತೇವೆ. ಇಂತಹ ದುಷ್ಟ ಕೃತ್ಯ ಎಸಗುವವರು ಕಂಡು ಬಂದರೆ ಕಾನೂನಾತ್ಮಕವಾಗಿ ಕಠಿಣಕ್ರಮ ಕೈಗೊಳ್ಳತ್ತೇವೆ.
• ಕುಮಟಾ ಪೊಲೀಸ್ ಇಲಾಖೆ
•ಕೆ. ದಿನೇಶ ಗಾಂವ್ಕರ