Advertisement

ಟೆಂಪೋ ಡ್ರೈವರ್‌ ಮಗಳು ರಾಜ್ಯಕ್ಕೆ ಪ್ರಥಮ

06:25 PM May 01, 2019 | Lakshmi GovindaRaj |

ಕುಮಟಾ: ಕಾಗಾಲ-ಹುಬ್ಬಣಗೇರಿ ನಿವಾಸಿ ನಾಗಾಂಜಲಿ ಪರಮೇಶ್ವರ ನಾಯ್ಕ, ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

Advertisement

ಕುಮಟಾ ಕೊಂಕಣ ಎಜ್ಯುಕೇಶನ್‌ನ ಸಿವಿಎಸ್‌ಕೆ ಪ್ರೌಢಶಾಲೆಯಲ್ಲಿ ಓದುತ್ತಿರುವ ನಾಗಾಂಜಲಿ, 625ಕ್ಕೆ 625 ಅಂಕ ಪಡೆದು ಹುಬ್ಬೇರುವಂತೆ ಮಾಡಿದ್ದಾಳೆ.

ಶಾಲೆಯಲ್ಲಿ ಆಡಳಿತ ಮಂಡಳಿಯಿಂದ ಹಿಡಿದು ಮುಖ್ಯಾಧ್ಯಾಪಕರು, ಶಿಕ್ಷಕರು ಉತ್ತಮ ಪ್ರೋತ್ಸಾಹ ನೀಡಿದ್ದು, ಶಿಕ್ಷಕರು ಕಾಲಕಾಲಕ್ಕೆ ಇವರನ್ನು ಸಂಪರ್ಕಿಸಿ, ಪರೀಕ್ಷೆ ಸಿದ್ಧತೆ ಕುರಿತು ಮಾರ್ಗದರ್ಶನ ನೀಡಿರುವುದು ಉನ್ನತಿಗೆ ಕಾರಣವಾಗಿದೆ.

ಗಡಿ ಭದ್ರತಾ ಪಡೆಯಲ್ಲಿ ಹವಾಲ್ದಾರ್‌ ಆಗಿ 2006ರಲ್ಲಿ ನಿವೃತ್ತರಾಗಿರುವ ಪರಮೇಶ್ವರ ನಾಯ್ಕ ಮಹೇಂದ್ರಾ ಟೆಂಪೋವನ್ನು ಖರೀದಿಸಿ ಅದರಿಂದಲೇ ಜೀವನ ನಡೆಸುತ್ತಿದ್ದಾರೆ.

ಅವಳ ಆಸಕ್ತಿ ಹಾಗೂ ಸತತ ಪರಿಶ್ರಮವೇ ಸಾಧನೆಗೆ ಕಾರಣ. ಅವಳಿಗೆ ಅವಶ್ಯಕತೆಯಿರುವ ಸಾಮಗ್ರಿಗಳನ್ನು ತಂದೆಯಾಗಿ ನಾನು ಒದಗಿಸಿದ್ದೇನೆ. ಓದುವ ವಿಚಾರದಲ್ಲಿ ಅವಳ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಅವಳ ಸಾಧನೆಯ ಹಿಂದಿರುವ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌, ಶಿಕ್ಷಕರು ಮತ್ತು ಶ್ರೀರಾಮ ಫೈನಾನ್ಸ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ಪರಮೇಶ್ವರ ನಾಯ್ಕ, ತಂದೆ.

Advertisement

ಕಲಿಕೆಯಲ್ಲಿ ಮೊದಲಿನಿಂದಲೂ ಶೇ.95ರ ಮೆಲ್ಪಟ್ಟು ಅಂಕ ಗಳಿಸುತ್ತಿದ್ದಳು. ರಾತ್ರಿ 12ರವರೆಗೆ ಅಭ್ಯಾಸ ಮಾಡಿ, ಬೆಳಗ್ಗೆ 6ಕ್ಕೆ ಏಳುತ್ತಿದ್ದಳು. ತನ್ನ ಅಭ್ಯಾಸದ ಅವಧಿಯನ್ನು ಹೊರತುಪಡಿಸಿ ನನ್ನೊಂದಿಗೆ ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಹಾಗೂ ಇತರ ಮನೆ ಕೆಲಸಗಳಿಗೆ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದಳು. ಶ್ರದ್ಧೆ ಹಾಗೂ ಆಸಕ್ತಿಯಿಂದ ತನ್ನ ಕೆಲಸವನ್ನು ಮಾಡುತ್ತಾ ಸಾಧನೆ ಮಾಡಿರುವುದು ನಮಗೆ ಖುಷಿ ತಂದಿದೆ.
-ಚೇತನಾ ನಾಯ್ಕ, ತಾಯಿ.

ನನಗೆ 625 ಅಂಕ ಬರುತ್ತದೆ ಎಂದು ನಂಬಿಕೆಯಿತ್ತು. ಆದರೆ, ಮನಸ್ಸಿನಲ್ಲಿ ಆತಂಕವೂ ಇತ್ತು. ಆದರೆ, ಈಗ ನಾನು ಅಂದುಕೊಂಡ ಫಲಿತಾಂಶ ಬಂದಿದೆ. ಇದಕ್ಕೆ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದದವರ ಸಹಕಾರವೇ ಮುಖ್ಯ ಕಾರಣ. 5 ಪ್ರಿಪರೇಟರಿ ಪರೀಕ್ಷೆ ಮಾಡಿದ್ದು, ಅವುಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಶಾಲೆಯಲ್ಲಿ ಸರಿಯಾದ ಮಾಹಿತಿ ನೀಡುತ್ತಿದ್ದರು. ಇದರಿಂದ ನನಗೆ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗಿದೆ. ಜತೆಗೆ, ನನ್ನ ತಂದೆ-ತಾಯಿ ಕೂಡ ನನ್ನ ಓದಿಗೆ ಸಂಪೂರ್ಣ ಸಹಕಾರ ನೀಡಿರುವುದು ತುಂಬಾ ನೆರವಾಗಿದೆ. ಮುಂದೆ ವೈದ್ಯಳಾಗುವ ಆಸೆಯಿದೆ.
-ನಾಗಾಂಜಲಿ ಪರಮೇಶ್ವರ ನಾಯ್ಕ

ನಾಗಾಂಜಲಿ ಅವರ ಶೈಕ್ಷಣಿಕ ಸಾಧನೆ ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದ ಹತ್ತು ವರ್ಷದಿಂದ ಈ ರೀತಿಯ ಸಾಧನೆ ನಮ್ಮ ತಾಲೂಕಿನಲ್ಲಿ ನಡೆದಿರಲಿಲ್ಲ. ಇವಳ ಸಾಧನೆಯಿಂದ ತಂದೆ-ತಾಯಿ, ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆ ಹಾಗೂ ತಾಲೂಕಿನ ಗೌರವ ಹೆಚ್ಚಿದೆ. ಕುಮಟಾ ಶೈಕ್ಷಣಿಕವಾಗಿ ಮುಂದಿದೆ ಎಂದು ಸಾಬೀತುಪಡಿಸಿದ ಇವಳ ಮುಂದಿನ ಭವಿಷ್ಯ ಉತ್ತಮವಾಗಲಿ.
-ದಿನಕರ ಶೆಟ್ಟಿ, ಕುಮಟಾ-ಹೊನ್ನಾವರ ಶಾಸಕ.

ನಾಗಾಂಜಲಿ ರ್‍ಯಾಂಕ್‌ ಬರುತ್ತಾಳೆಂಬ ವಿಶ್ವಾಸ ನಮಗಿತ್ತು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಹಳ ಕೂಲಂಕುಷವಾಗಿ ಅಧ್ಯಯನ ಮಾಡುತ್ತಿದ್ದಳು. ಅಧ್ಯಯನ ಹೊರತುಪಡಿಸಿ ಬೇರೆ, ಬೇರೆ ಕ್ಷೇತ್ರಗಳಲ್ಲೂ ಅವಳು ಸಾಧನೆ ಮಾಡಿದ್ದಾಳೆ. ಅವಳ ಆಸಕ್ತಿಯೇ ಅವಳ ಸಾಧನೆಗೆ ಕಾರಣ. ತುಂಬಾ ಮುಗ್ಧೆ ಹಾಗೂ ವಿಧೇಯ ವಿದ್ಯಾರ್ಥಿನಿಯಾದ ಇವಳ ಭವಿಷ್ಯ ಉಜ್ವಲವಾಗಲಿ.
-ಸುಮಾ ಪ್ರಭು, ಸಿವಿಎಸ್‌ಕೆ ಪ್ರೌಢಶಾಲೆ ಮುಖ್ಯ ಶಿಕ್ಷಕಿ.

Advertisement

Udayavani is now on Telegram. Click here to join our channel and stay updated with the latest news.

Next