Advertisement
ಸ್ವತಂತ್ರ ಭಾರತದ ಶಕ್ತಿ ಸಂವಿಧಾನ. ಪ್ರಜಾಪ್ರಭುತ್ವ ಅತೀ ಗೌರವದಿಂದ ನೋಡುವುದು ನ್ಯಾಯಾಂಗ.ಅಂಥ ನ್ಯಾಯಾಂಗದ ಘನತೆಗೆ ಧಕ್ಕೆ ತಂದ, ಸಂವಿಧಾನಕ್ಕೆ ಅಗೌರವ ತೋರಿದ ಭಾರತದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್. ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ 1975 ಜೂನ್ 25ರಂದು ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿತು. ಅಂಥ ಘೋಷಣೆಯ ಹಿಂದೆ ಇದ್ದದ್ದು ಅವರ ಅಧಿಕಾರ ದಾಹ ಮತ್ತು ಸ್ವಾರ್ಥ. ಅಧಿಕಾರದ ಹಪಾಹಪಿಗಾಗಿ ದೇಶವನ್ನೇ ಬಲಿಕೊಟ್ಟರು, ವ್ಯವಸ್ಥೆಯನ್ನೇ ಬಲಹೀನಗೊಳಿಸಿದ ಕೆಟ್ಟ ಕೀರ್ತಿ ಅಂದಿನ ಪ್ರಧಾನಿಗೆೆ ಸಲ್ಲಬೇಕು.
ಪ್ರತಿ ಸುದ್ದಿಯ ಪ್ರತಿ ಸಾಲನ್ನೂ ಇಂದಿರಾ ಅವರ ಕಾಲಾಳುಗಳು ಓದಿ ಪ್ರಕಟನೆಗೆ ಅನುಮತಿ ಕೊಡಬೇಕಿತ್ತು. ದೇಶಪ್ರೇಮಿ ನಾಯಕರನ್ನು ರಾತೋರಾತ್ರಿ ಬಂಧಿಸಲಾ ಯಿತು. ಮೀಸಾ ಕಾಯ್ದೆ ಪೊಲೀಸರಿಗೆ ಅಂದಾದುಂಧಿ ನಡೆಸಲು ಅಧಿಕಾರ ಕೊಟ್ಟಿತು. ಎಲ್ಲಿ ಯಾರನ್ನು ಬೇಕಾದರೂ ಹೇಳದೇ ಕೇಳದೆ ಠಾಣೆಗೆ ಕೊಂಡೊಯ್ದು ವಾರಗಟ್ಟಲೆ ವಿಚಾರಣೆ ನಡೆಸುವ ಅಧಿಕಾರವನ್ನು ಇಂದಿರಾ ನೀಡಿದರು. ಇಡೀ ದೇಶದ ಪೊಲೀಸ್ ಪಡೆಯನ್ನು ಖಾಸಗಿ ಪಡೆ ಯನ್ನಾಗಿ ಬಳಸಿಕೊಂಡರು. ಪ್ರಮುಖ ನಾಯಕರನ್ನು ಜೈಲಿಗೆ ತಳ್ಳಲಾಯಿತು. ಸುಮಾರು ಒಂದೂವರೆ ಲಕ್ಷ ಜನರನ್ನು ಯಾವುದೇ ಸಾಂವಿಧಾನಿಕ ವಿಚಾರಣೆ ಇಲ್ಲದೆ ಬಂಧಿಸಿದ್ದು ಅಧಿಕೃತ ಲೆಕ್ಕ. ಆದರೆ ಊರೂರು, ಹಳ್ಳಿ ಹಳ್ಳಿಗಳಿಗೆ ನುಗ್ಗಿದ ಪೊಲೀಸರು ಪಡೆ ದೌರ್ಜನ್ಯದಿಂದ ನಡೆದುಕೊಂಡಿತು. ಮಾನವ ಹಕ್ಕು ಎಂಬ ಪದವೇ ಅರ್ಥ ಕಳೆದುಕೊಂಡ ಕಾಲ ಅದು.
Related Articles
Advertisement
ಇಂದಿರಾ ಅವರ ಪುತ್ರ ಸಂಜಯ್ ಗಾಂಧಿ ಆಗ ಮಾಡಿದ್ದ ಅವಾಂತರಗಳಿಗೆ ಮಿತಿಯೇ ಇರಲಿಲ್ಲ. ಸಂಜಯ್ ಗಾಂಧಿ ಅವರಿಗೆ ಯಾವುದೇ ಸರಕಾರಿ ಜವಾಬ್ದಾರಿ ಇರಲಿಲ್ಲ. ಆದರೆ ಸಂಜಯ್ ಯಾವಾಗ ಬೇಕಾದರೂ ಪೊಲೀಸ್ ಪಡೆ ಹಿಡಿದುಕೊಂಡು ಎಲ್ಲಿಗೆ ಬೇಕಾದರೂ ಹೋಗಿ ದಾಳಿ ನಡೆಸುತ್ತಿದ್ದರು. ಕಂಡ ಕಂಡವರನ್ನು ಹಿಡಿದು ಒತ್ತಾಯ ಪೂರ್ವಕವಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದರು ಎಂದು ಅಂದಿನ ವರದಿಗಳೇ ಹೇಳುತ್ತವೆ.ಅಂತೂ 21 ತಿಂಗಳಿಗಿಂತ ಹೆಚ್ಚು ಕಾಲ ತುರ್ತು ಪರಿಸ್ಥಿತಿ ಮುಂದಕ್ಕೆ ಕೊಂಡೊಯ್ಯಲು ಇಂದಿರಾಗೆ ಸಾಧ್ಯವಾಗಲಿಲ್ಲ. ಅಲ್ಲದೆ ಸತ್ಯದ ಬದಲು ಇಂದಿರಾ ಬಯಸಿದ್ದನ್ನೇ ಹೇಳಿ ಭೇಷ್ ಅನಿಸಿಕೊಳ್ಳಲು ಸರದಿಯಲ್ಲಿ ನಿಂತ “ಜೀ ಹುಜೂರ್’ ಅಧಿಕಾರಿ ವರ್ಗದ ಲೆಕ್ಕಾಚಾರ ತಪ್ಪಾಗಿತ್ತು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೇವಕಾಂತ ಬರುವಾ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ “ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ’ ಎಂದು ಹೇಳುವ ಮೂಲಕ ಓಲೈಕೆ ರಾಜಕಾರಣದ ಪರಾಕಾಷ್ಠೆ ಪ್ರದರ್ಶಿಸಿದರು. ಜನರೆಲ್ಲ ತುರ್ತುಪರಿಸ್ಥಿತಿ ಮೆಚ್ಚಿದ್ದಾರೆ, ಚುನಾವಣೆ ನಡೆದರೆ ನೀವೇ ಗೆಲ್ಲುತ್ತೀರಿ ಎಂಬುದನ್ನು ಕೇಳಿ ಉಬ್ಬಿದ ಇಂದಿರಾಗಾಂಧಿ ಚುನಾವಣೆಗೆ ಮುಂದಾದರು. ತುರ್ತು ಪರಿಸ್ಥಿತಿ ದೇಶದ ಸಂವಿಧಾನ, ಕಾನೂನು ವ್ಯವಸ್ಥೆಯನ್ನೇ ಒಮ್ಮೆ ಅಲುಗಾಡಿಸುವುದರ ಮೂಲಕ ರಾಜಕೀಯವಾಗಿ ಹೊಸ ಬೆಳವಣಿಗೆಗೆ ಕಾರಣವಾಯಿತು. ಜಯಪ್ರಕಾಶ್ ನಾರಾಯಣ್ ಅವರ ಮುಂದಾಳತ್ವದಲ್ಲಿ ಬಿಹಾರದಿಂದ ಆರಂಭವಾದ ಜೆಪಿ ಚಳವಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದಂತೆ ಹಲವು ಸಂಘಟನೆಗಳ ಬೆಂಬಲ ಸಿಕ್ಕಿ ಅದು ರಾಷ್ಟ್ರಮಟ್ಟದಲ್ಲಿ ವ್ಯಾಪಿಸಿತು. ವಿದ್ಯಾರ್ಥಿ ಹೋರಾಟಗಾರರು ತುರ್ತು
ಪರಿಸ್ಥಿತಿ ವಿರುದ್ಧ ದೊಡ್ಡ ಸಂಖ್ಯೆಯಲ್ಲಿ ತಿರುಗಿಬಿದ್ದರು. ಇನ್ನೊಂದೆಡೆ ಜಾರ್ಜ್ ಫೆರ್ನಾಂಡಿಸ್‌ರಂಥ ಮಹಾನ್ ನಾಯಕರು ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದರು. ಒಟ್ಟಾರೆಯಾಗಿ ನಡೆದ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಎದುರು ಪ್ರಬಲ ಶಕ್ತಿಯಾಗಿ ಜನತಾ ಪರಿವಾರ ಮೂಡಿ ಬಂತು. ದುರದೃಷ್ಟ ಅಂದರೆ ಕುಟುಂಬ ರಾಜ ಕಾರಣವನ್ನು ವಿರೋಧಿಸಿ, ಏಕ ಚಕ್ರಾಧಿಪತ್ಯದ ವಿರುದ್ಧ ನಿಂತಿದ್ದ ಜನತಾ ಪರಿವಾರ ಕಾಲಕ್ರಮೇಣ ವಿವಿಧ ತುಂಡು ಗಳಾದವು. ಆ ಪೈಕಿ ಹೆಚ್ಚಿನೆಲ್ಲ ಪಕ್ಷಗಳೂ ಇಂದು ಕುಟುಂಬದ ಪಕ್ಷಗಳಾಗಿರುವುದು ಪ್ರಜಾಪ್ರಭುತ್ವದ ದುರಂತ. ಆಂತರಿಕ ಪ್ರಜಾಪ್ರಭುತ್ವ, ತಳಮಟ್ಟದಿಂದ ಬೆಳೆದು ಬಂದ ನಾಯಕರು, ಜನ ಸಂಪರ್ಕದ ಅನುಭವಿ ಕಾರ್ಯ ಕರ್ತರು ಇರುವ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಮಾತ್ರ ನಿಂತಿದೆ. 21 ತಿಂಗಳ ಕಾಲದ ತುರ್ತುಪರಿಸ್ಥಿತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ. ಅಧಿಕಾರದ ಮದ, ಹಣದ ಬಲದ ಎದುರು ಅಂತಿಮವಾಗಿ ಗೆಲ್ಲುವುದು ಜನಾಭಿಪ್ರಾ ಯವೇ ಎಂಬುದನ್ನು ಅದು ಸಾಬೀತು ಪಡಿಸಿತು. ಪ್ರಬಲ ನಾಯಕತ್ವ ಕುರುಡು ಅಭಿಮಾನವಾಗಿ ಪರಿವರ್ತನೆ ಆದಾಗ ಏನೆಲ್ಲ ಅವಾಂತರಗಳು ನಡೆಯುತ್ತವೆ ಎಂಬುದಕ್ಕೆ ಇಂದಿರಾ ಗಾಂಧಿ ಐತಿಹಾಸಿಕ ಸಾಕ್ಷಿ, ಕಾಂಗ್ರೆಸ್ ಪಕ್ಷ ಜೀವಂತ ಉದಾ ಹರಣೆ. ದೇಶಾಭಿಮಾನಿ ನಾಯಕತ್ವ, ದೇಶಕ್ಕಾಗಿ ಸ್ವಾರ್ಥ ಬಿಟ್ಟು ನಿರ್ಧಾರ ಕೈಗೊಳ್ಳಲು ಸಮರ್ಥವಾಗಿದ್ದಾಗ ದೇಶ ಹೇಗೆ ಪ್ರಗತಿಯತ್ತ ಸಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಬಿಜೆಪಿ ನಿಂತಿದೆ. ಎರಡೂ ವೈರುಧ್ಯಗಳನ್ನು ಒಂದೇ ಕಾಲ ಘಟ್ಟದಲ್ಲಿ ನೋಡುವ ಅದೃಷ್ಟ ಈ ತಲೆಮಾರಿನದ್ದು. -ಸಿ.ಟಿ.ರವಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ