ರಾಯಚೂರು: ಮಳೆರಾಯ ದಿನೇದಿನೇ ದೂರವಾಗುತ್ತಿದ್ದಂತೆ ಬರದ ಕರಾಳ ಮುಖ ಅನಾವರಣಗೊಳ್ಳುತ್ತಿದ್ದು, ಭೂಮಿಯನ್ನು ನಂಬಿದ ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ನೆಲ ಪೈಗುಂಟೆ ಮಾಡಲು ಹಣವಿಲ್ಲದ ಸ್ಥಿತಿಯಲ್ಲಿ ಒಂದೇ ಕುಟುಂಬಸ್ಥರು ಎತ್ತುಗಳಂತೆ ಹೊಲ ಸಮತಟ್ಟು ಮಾಡುತ್ತಿರುವ ಮನಕಲುಕುವ ದೃಶ್ಯ ಜಿಲ್ಲೆಯಲ್ಲಿ ಜರುಗಿದೆ.
ತಾಲೂಕಿನ ವಿಜಯನಗರ ಕ್ಯಾಂಪ್‌ನಲ್ಲಿ ಕೃಷಿ ಸಚಿವರು ಬರ ವೀಕ್ಷಣೆಗೆ ಬರುವ ಕೆಲವೆ ಘಳಿಗೆ ಮುನ್ನ ಇಂಥದ್ದೊಂದು ದೃಶ್ಯ ಕಂಡು ಬಂತು. ಇರುವ ಎರಡೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಕುಟುಂಬವೊಂದು ಎತ್ತುಗಳ ಬಾಡಿಗೆಗೆ ಹಣವಿಲ್ಲದೇ ತಾವೇ ಎತ್ತುಗಳಾಗಿ ಹೊಲ ಪೈಗುಂಟೆ ಮಾಡಿದರು. ಮಾಲೀಕ ನರಸಿಂಹಲು, ಆತನ ಅಣ್ಣನ ಮಗ ಮಹೇಶನೇ ಎರಡೆತ್ತುಗಳಾಗಿ ಸಿಮೆಂಟ್ ಶೀಟ್‌ನಲ್ಲಿ ಭಾರದ ಕಲ್ಲುಗಳನ್ನಿಟ್ಟು ಹೊಲ ಪೈಗುಂಟೆ ಮಾಡುತ್ತಿದ್ದರು. ಜೂನ್‌ನಲ್ಲಿ ಭತ್ತ ಮಾಡಿದ್ದ ಈ ರೈತರು 20 ಸಾವಿರ ಖರ್ಚು ಮಾಡಿದ್ದರು. ಆದರೆ, ಮಳೆ ಇಲ್ಲದೇ ಮೊಳಕೆ ಬರಲಿಲ್ಲ. ನಂತರ 2500 ಖರ್ಚು ಮಾಡಿ ಭೂಮಿ ಪೈಗುಂಟೆ ಮಾಡಿದರು.
ಆಗಲೂ ಪ್ರಯೋಜನವಾಗಿಲ್ಲ. ಟ್ರ್ಯಾಕ್ಟರ್‌ಗೆ ಗಂಟೆಗೆ 600 ರೂ. ಹಾಗೂ ಬಾಡಿಗೆ ಎತ್ತುಗಳಿಗೆ ದಿನಕ್ಕೆ 800 ರೂ. ನೀಡಬೇಕಿದೆ. ಅಷ್ಟು ಹಣ ನೀಡಲಾಗದೆ ತಾವೇ ದುಡಿಯುತ್ತಿದ್ದಾರೆ. ಯಾಕೆ ಇಂಥ ಸ್ಥಿತಿ ಎಂದು ಪ್ರಶ್ನಿಸಿದರೆ, ನಮ್ಮದು ದೊಡ್ಡ ಕುಟುಂಬ. ಇರುವುದು ಎರಡೂವರೆ ಎಕರೆ ಜಮೀನು. ಎತ್ತುಗಳ ಕೂಲಿ, ಟ್ರ್ಯಾಕ್ಟರ್ ಬಾಡಿಗೆ ಕಟ್ಟುವಷ್ಟು ಶಕ್ತರಾಗಿಲ್ಲ. ಈಗಾಗಲೇ ಮೊದಲನೆ ಬಾರಿ ಭತ್ತ ಬಿತ್ತನೆ ಮಾಡಿ ಮೊಳಕೆ ಬಾರದ ಕಾರಣ ಎರಡನೇ ಬಾರಿಗೆ ಪೈಗುಂಟೆ ಮಾಡುತ್ತಿದ್ದೇವೆ. ಇಲ್ಲಿಗಾಗಲೇ ಅಂದಾಜು 40 ಸಾವಿರ ಖರ್ಚು ಮಾಡಿದ್ದೇವೆ. ಆದರೂ ಬೆಳೆ ಬರುತ್ತಿಲ್ಲ. ಹೀಗಾಗಿ ಹೊಲ ಸಮತಟ್ಟು ಮಾಡುವ ಮೂಲಕ ಬೆಳೆ ಉಳಿಸಿಕೊಳ್ಳುವ ಯತ್ನದಲ್ಲಿದ್ದೇವೆ ಎಂದು ವಿವರಿಸುತ್ತಾರೆ ರೈತ ನರಸಿಂಹಲು.
ಈ ಜಮೀನು ಕೂಡ ಅಜ್ಜಿ ಹೆಸರಿಲ್ಲಿದ್ದು, ಅವರ ಆಧಾರ್ ಕಾರ್ಡ್ ಇಲ್ಲ. ಇದರಿಂದ ಫಸಲ್‌ಬಿಮಾ ಯೋಜನೆಗೂ ನಾವು ಅನ್ವಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಕಳೆದ ವರ್ಷ ಒಂದು ಲಕ್ಷ ರೂ. ಖರ್ಚು ಮಾಡಿ ಕಡಲೆ ಬಿತ್ತಿದರೆ ಸೂಕ್ತ ದರ ಸಿಗದೆ ಮಾಡಿದ್ದ ಖರ್ಚು ಕೂಡ ಸಿಗಲಿಲ್ಲ.
ಮನೆಯಲ್ಲಿ ಸಾಕಷ್ಟು ಜನರಿದ್ದು, ಮಹಿಳೆಯರಾದಿಯಾಗಿ ದುಡಿಯಲು ಗುಳೆ ಹೋಗಿದ್ದಾರೆ. ಇರುವಷ್ಟು ಭೂಮಿ ಉಳುಮೆ ಮಾಡುವ ಎಂದರೆ ವರುಣ ಅವಕೃಪೆ ಬಾಧಿಸುತ್ತಿದೆ. ನಮ್ಮಂಥ ಕಷ್ಟ ಶತ್ರುಗಳಿಗೂ ಬಾರದಿರಲಿ ಎನ್ನುತ್ತಾರೆ ರೈತ ಶಂಕ್ರಪ್ಪ.