Advertisement
ಕಾಲೇಜಿನ ಪಾಠ ಪ್ರವಚನದ ನಡುವೆ 25 ದಿನಗಳ ಕಾಲ ರಂಗಾಭ್ಯಾಸ ಮಾಡಿ ನಾಟಕ ಪ್ರದರ್ಶನ ನೀಡುವ ಪರಿಪಾಠ ಬೆಳೆಸಿಕೊಂಡವರು ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜಿನ ಕುಸುಮಸಾರಂಗದ ವಿದ್ಯಾರ್ಥಿಗಳು. ಕುಸುಮಸಾರಂಗ 25 ವರ್ಷಗಳಿಂದ ನಿರಂತರವಾಗಿ ರಂಗ ಚಟುವಟಿಕೆ ನಡೆಸುತ್ತಿದೆ. ಐ.ಕೆ ಬೊಳುವಾರು, ಮೋಹನ್ ಸೋನಾ, ಕೃಷ್ಣ ಗುತ್ತಿಗಾರು, ವೆಂಕಟರಮಣ ಐತಾಳ, ಜೀವನ್‌ರಾಮ್ ಸುಳ್ಯ, ಕೃಷ್ಣಮೂರ್ತಿ ನಾರ್ಣಕಜೆ, ವೀರೇಶ್ ದಾವಣಗೆರೆ, ಮೌನೇಶ್ ಬಡಿಗೇರ್, ಪ್ರವೀಣ್ ತಳೂರು, ದಿ.ನವೀನ್ ಎಡಮಂಗಲ, ಸುರೇಶ್ ಆನಗಳ್ಳಿ, ಪ್ರದೀಪ್ ಬಿ.ಇ. ಮೈಸೂರು, ಮಂಜುನಾಥ್ ಎನ್. ಬಡಿಗೇರ್, ವಿದ್ದು ಉಚ್ಚಿಲ, ವೈ.ಡಿ.ಬಾದಾಮಿ, ಗಣೇಶ್ ಎಂ. ಮುಂತಾದ ನಿರ್ದೇಶಕರು ಇದುವರೆಗೆ ರಂಗ ತರಬೇತಿ ಶಿಬಿರ ನೀಡಿ ನಾಟಕ ನಿರ್ದೇಶನ ಮಾಡಿದ್ದಾರೆ.
ಕುಸುಮಸಾರಂಗ ಪ್ರದರ್ಶಿಸಿದ ಚೋರಪುರಾಣ ನಾಟಕವು ದೂರದರ್ಶನದಲ್ಲಿ ಪ್ರದರ್ಶನ ಕಂಡಿದೆ. ತಂಡವು ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ 5 ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿದೆ. ಸಿರಿಸಂಪಿಗೆ, ಮಹಾಮಾಯಿ ಮತ್ತು ಚಿತ್ರಪಟ ರಾಜ್ಯಪ್ರಶಸ್ತಿಯನ್ನು ಪಡೆದ ನಾಟಕಗಳಾಗಿವೆ. ಕುಸುಮಸಾರಂಗದ ನಾಟಕ ಎಚ್.ಎಸ್.ವೆಂಕಟೇಶ್ ಮೂರ್ತಿ ರಚಿಸಿದ, ಮಂಜುನಾಥ್ ಎನ್. ಬಡಿಗೇರ್ ನಿರ್ದೇಶನದ ಚಿತ್ರಪಟವು ರಾಜ್ಯ ಮಟ್ಟದ ನಾಟಕ ಸ್ಪರ್ಧೆವಿದ್ಯಾರ್ಥಿ ರಂಗ ತೋರಣದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಈ ಬಾರಿಯ ದಾರಾಷಿಕೋ ನಾಟಕ ಮೂರು ಪ್ರದರ್ಶನಗಳನ್ನು ನೀಡಿದೆ. ನಾಟಕವನ್ನು ರಾಜಪ್ಪ ದಳವಾಯಿ ರಚಿಸಿದ್ದಾರೆ. ಮೊಗಲ್ ರಾಜ ಷಹಜಾನ್ ತನ್ನ ಮಕ್ಕಳಿಗೆ ಸಾಮ್ರಾಜ್ಯವನ್ನು ಹಂಚುವ ಪ್ರಕ್ರಿಯೆಯಿಂದ ನಾಟಕ ಆರಂಭಗೊಳ್ಳುತ್ತದೆ. ಷಹಜಾನ್ ತನ್ನ ಹಿರಿಯ ಮಗನಾದ ದಾರಾಷಿಕೋನಿಗೆ ದಿಲ್ಲಿಯನ್ನು ಹಾಗೂ ಇತರ ಮಕ್ಕಳಾದ ಮುರಾದ್‌ಬಕ್ಷ, ಷಹಶೂಜ ಮತ್ತು ಔರಂಗಜೇಬರಿಗೆ ಇತರ ಭಾಗಗಳನ್ನು ಆಳುವ ಅಧಿಕಾರ ನೀಡುತ್ತಾನೆ. ದಿಲ್ಲಿಯ ಪಟ್ಟ ತನಗೆ ಸಿಗಬೇಕೆಂದು ಮುರಾದ್, ಷಹಶೂಜ ಹಾಗೂ ಔರಂಗಜೇಬ್ ಪಟ್ಟು ಹಿಡಿಯುತ್ತಾರೆ ಹಾಗೂ ದಾರಾಷಿಕೋ ಖಾಫಿರರ ಜತೆ ಸೇರಿದ್ದಾನೆಂದು ಆತ ಹಿಂದುಗಳನ್ನು ಬೆಂಬಲಿಸುತ್ತಾನೆಂದೂ ದೂರು ಹೇಳಿ ಆತನ ವಿರುದ್ಧ ಪಿತೂರಿ ನಡೆಸುತ್ತಾರೆ. ಈ ಪಿತೂರಿಯಲ್ಲಿ ಔರಂಗಜೇಬ್ , ಮುರಾದ್ ಹಾಗೂ ಷಹಶೂಜರನ್ನು ಕೊಲ್ಲಿಸಿ ದಾರಾಷಿಕೋನನ್ನು ದೇಶದಿಂದ ಹೊರಗಟ್ಟುತ್ತಾನೆ. ತಂದೆ ಷಹಜಾನನ್ನು ಸೆರೆಯಲ್ಲಿ ಇಡುತ್ತಾನೆ. ದೇಶಭ್ರಷ್ಟ ದಾರಾಷಿಕೋ ಅನಂತರ ಅಫಘಾನದಲ್ಲಿ ಸೆರೆಯಾಗಿ ಕೊಲ್ಲಲ್ಪಡುತ್ತಾನೆ.
Related Articles
Advertisement
ಬಾಲಕೃಷ್ಣ ಭೀಮಗುಳಿ