Advertisement

ಪ್ರಜಾಪ್ರಭುತ್ವದ ಅಡಿಪಾಯಕ್ಕೇ ಅಪಾಯ

11:29 AM Aug 30, 2017 | |

ಬೆಂಗಳೂರು: ದೇಶದ ಪ್ರಜಾತಂತ್ರ ವ್ಯವಸ್ಥೆಯ ಪ್ರಮುಖ ಅಡಿಪಾಯಗಳಾಗಿರುವ ಪ್ರಜಾಪ್ರಭುತ್ವ, ಅಭಿವೃದ್ಧಿ ಹಾಗೂ ವೈವಿಧ್ಯತೆಗೆ ಅಪಾಯ ತಂದು ಭಾರತವನ್ನು “ಹಿಂದೂ ಪಾಕಿಸ್ತಾನ’ ಮಾಡಲು ಹೊರಟಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಪ್ರಬಲ ಪ್ರತಿರೋಧ ಒಡ್ಡುವ ಹೊಣೆಗಾರಿಕೆ ವಹಿಸಿಕೊಂಡಿರುವ ಸ್ವರಾಜ್‌ ಇಂಡಿಯಾ ಚಳವಳಿಯ ನಾಯಕತ್ವವನ್ನು ಕರ್ನಾಟಕ ವಹಿಸಿಕೊಳ್ಳಬೇಕು ಎಂದು ಸ್ವರಾಜ್‌ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌ ಕರೆ ನೀಡಿದ್ದಾರೆ.

Advertisement

ಸ್ವರಾಜ್‌ ಇಂಡಿಯಾ ಕರ್ನಾಟಕ ಘಟಕದ ವತಿಯಿಂದ ಮಂಗಳವಾರ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವರಾಜ್‌ ಇಂಡಿಯಾ ಚಳವಳಿಗೆ ಕರ್ನಾಟಕ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಪ್ರೇರಣಾ ಕೇಂದ್ರವಾಗಬೇಕು. ಏಕೆಂದರೆ, ಹೋರಾಟ ಹಾಗೂ ಜನಚಳವಳಿಗಳಿಗೆ ಇಲ್ಲಿ ಗಟ್ಟಿ ನೆಲೆ ಇದೆ.

ಇಲ್ಲಿನ ದಲಿತ ಮತ್ತು ರೈತ ಚಳವಳಿಯೇ ಇದಕ್ಕೆ ಉದಾಹರಣೆ. ಇಂದು ಪ್ರಜಾಪ್ರಭುತ್ವಾದಿಗಳು ಮತ್ತು ಪ್ರಗತಿಪರರು ಪ್ರತಿಪಾದಿಸುತ್ತಿರುವ ರಾಷ್ಟ್ರೀಯವಾದ ಸಾಂಸ್ಕೃತಿಕವಾಗಿ ಬಡವಾಗಿದೆ. ಆದರೆ, ಸಾಂಸ್ಕೃತಿಕ ಶ್ರೀಮಂತ ರಾಷ್ಟ್ರವಾದದ ಬೇರುಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಈ ಹಿನ್ನೆಲೆಯಲ್ಲಿ ಸ್ವರಾಜ್‌ ಇಂಡಿಯಾ ಚಳವಳಿಗೆ ಕರ್ನಾಟಕ ನಾಯಕತ್ವ ವಹಿಸಿಕೊಳ್ಳಬೇಕು ಎಂದರು.

ಅಘೋಷಿತ ತುರ್ತು ಪರಿಸ್ಥಿತಿ: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಹಿಂಬಾಗಿಲ ಮೂಲಕ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರಲಾಗುತ್ತಿದೆ. ಮೂಲಭೂತ ಹಕ್ಕುಗಳ ದಮನ ಆಗುತ್ತಿದೆ. ಅಲ್ಪಸಂಖ್ಯಾತರನ್ನು 2ನೇ ದರ್ಜೆ ಪ್ರಜೆಗಳಿಗಿಂತ ಕೆಳಗಿನ ಮಟ್ಟಕ್ಕೆ ತರಲಾಗಿದೆ. ಪತ್ರಿಕಾ ಸ್ವಾತಂತ್ರ್ಯ ಅಪಾಯದಲ್ಲಿದೆ. ದೇಶವನ್ನು ಈ ಪರಿಸ್ಥಿತಿಯಿಂದ ಹೊರ ತರಲು ದೇಶವನ್ನು ಗೌರವಿಸುವ ಹಾಗೂ ಭಾರತೀಯನಾಗಿ ಹೆಮ್ಮೆ ಪಡುವ ಪ್ರತಿಯೊಬ್ಬರೂ ಹೋರಾಡಬೇಕಿದೆ.

ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷ ಇಲ್ಲದಿರಬಹುದು. ಆದರೆ, ರೈತ, ದಲಿತ ಹಾಗೂ ಯುವ ಚಳವಳಿ ಮತ್ತು ಹೋರಾಟದ ರೂಪದಲ್ಲಿ ಪ್ರತಿರೋಧವಿದೆ. ಇದೇ ಸ್ವರಾಜ್‌ ಇಂಡಿಯಾದ ಭರವಸೆ. ಈ ಮೂರು ಶಕ್ತಿಗಳ ಸಂಗಮವಾದರೆ, ಪರ್ಯಾಯ ರಾಜಕಾರಣಕ್ಕೊಂದು ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸ್ವಾರ್ಥವೇ ಅಧರ್ಮ: ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಮಾತನಾಡಿ, ದೇಶದಲ್ಲಿ ಧರ್ಮದ ಹೆಸರಲ್ಲಿ ರಾಜಕಾರಣ ನಡೆಯುತ್ತಿದೆ. ನಾನೊಬ್ಬನೇ ಬದುಕಬೇಕು ಎಂಬ ಸ್ವಾರ್ಥವೇ ಅಧರ್ಮ. ಎಲ್ಲರೂ ಬದುಕಬೇಕು ಅನ್ನುವುದೇ ಧರ್ಮ. ರಾಜಕೀಯ ಕೆಟ್ಟಿದೆ ಎಂದು ಎಲ್ಲರೂ ಹೇಳುತ್ತಾರೆ. ಬದ್ಧಿ ಜೀವಿಗಳು ಸುರಕ್ಷಿತ ವಲಯದಲ್ಲಿರಲು ಬಯಸುತ್ತಾರೆ.

ದಲಿತ ಮತ್ತು ರೈತ ಚಳವಳಿ ಕೇವಲ ಮನವಿ ಪತ್ರ ಸಲ್ಲಿಸಲ್ಲಿಕೆ ಸೀಮಿತ ಎಂಬಂತಾಗಿದೆ. ಬರಗಾಲ ಮತ್ತು ರೈತರ ಆತ್ಮಹತ್ಯೆ ಕೇವಲ ಕೃಷಿಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇಡೀ ಸಮಾಜಕ್ಕೆ ಸಂಬಂಧಿಸಿದ್ದು. ಶಾಸನ ಸಭೆಗಳಲ್ಲಿ ರೈತರ ಬಗ್ಗೆ ಚರ್ಚೆ ನಡೆಯುವುದಿಲ್ಲ, ನೀತಿ ರೂಪಿಸುವುದಿಲ್ಲ. ಹೀಗಿರುವಾಗ, ನಾವು ಹೋರಾಟ ಮಾಡಬೇಕು, ಪರ್ಯಾಯ ರಾಜಕಾರಣವನ್ನು ಕಟ್ಟಬೇಕು ಎಂದು ಕರೆ ನೀಡಿದರು. 

ಸಾಹಿತಿ ದೇವನೂರು ಮಹದೇವ ಅಧ್ಯಕ್ಷತೆ ವಹಿಸಿದ್ದರು. ಸ್ವರಾಜ್‌ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಜಿತ್‌ ಝಾ, ದಲಿತ ಮುಖಂಡ ಕೆರಗೊಡು ಗುರುಪ್ರಸಾದ್‌, ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್‌ ಮತ್ತಿತರರು ಇದ್ದರು. 

ಅತಿದೊಡ್ಡ ಪ್ರತಿಪಕ್ಷ ಕಾಂಗ್ರೆಸ್‌ ಇಂದು ಪರ್ಯಾಯ ಪ್ರತಿರೋಧಕ್ಕೆ ಬಹುದೊಡ್ಡ ಅಡ್ಡಿಯಾಗಿದೆ. ಕಾಂಗ್ರೆಸ್‌ ತನ್ನ ಜವಾಬ್ದಾರಿ ಮತ್ತು ತಾನು ಸಾಗಿ ಬಂದ ಹಾದಿಯನ್ನು ಮರೆತಿದೆ. ಅದಕ್ಕೆ ಸ್ಪಷ್ಟ ದೃಷ್ಟಿಕೋನ, ಶಕ್ತಿ ಇಲ್ಲ. ಮುಖ್ಯವಾಗಿ ವಿಶ್ವಾಸಾರ್ಹ ನಾಯಕತ್ವವಿಲ್ಲ. ಅದೇ ರೀತಿ ಪ್ರತಿಪಕ್ಷಗಳ ಮಹಾಮೈತ್ರಿ “ಭಾನಮತಿ’ ಆಟದಂತಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ವರಾಜ್‌ ಇಂಡಿಯಾ ಹೋರಾಡುತ್ತದೆ ಮತ್ತು ಗೆಲ್ಲುತ್ತದೆ. ಈ ಹೋರಾಟದಲ್ಲಿ ಸೋಲಿಗೆ ಅವಕಾಶವಿಲ್ಲ.
-ಯೋಗೇಂದ್ರ ಯಾದವ್‌, ಸ್ವರಾಜ್‌ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next