ಕೊಪ್ಪಳ: ಕೇಂದ್ರ-ರಾಜ್ಯ ಸರ್ಕಾರದ ಸಹಯೋಗದಲ್ಲಿ ಮನೆ-ಮನೆಗೆ ಗಂಗೆ ಎನ್ನುವ ಯೋಜನೆ ಜಾರಿಗೊಳಿಸಿ ಜಿಲ್ಲಾದ್ಯಂತ ಜೆಜೆಎಂ (ಜಲಜೀವನ ಮಿಷನ್) ಕಾಮಗಾರಿ ಆರಂಭಿಸಲಾಗಿದೆ. ಇದ್ದ ಉತ್ತಮ ರಸ್ತೆಗಳನ್ನು ಕಿತ್ತು ಹಾಕಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಕಿತ್ತ ರಸ್ತೆ ಇನ್ನೂ ದುರಸ್ತಿ ಮಾಡದೇ ಹಾಗೆಯೇ ಬಿಡಲಾಗಿದ್ದು, ಜನ ಸಂಚಾರ ಕಷ್ಟವಾಗುತ್ತಿದ್ದು, ಗುತ್ತಿಗೆದಾರರ ಕಾರ್ಯ ವೈಖರಿಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಜಿಲ್ಲೆಯಲ್ಲಿ 722 ಜನ ವಸತಿ ಪ್ರದೇಶಗಳಿವೆ. ಇದರಲ್ಲಿ ಕಂದಾಯ ಗ್ರಾಮಗಳು ಸೇರಿ ತಾಂಡಾಗಳೂ ಇವೆ. ಈ ಎಲ್ಲ ಗ್ರಾಮಗಳಿಗೆ ಕುಡಿವ ನೀರು ಮನೆಗೆ ಪೂರೈಸಬೇಕೆಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸಿದೆ. ಈಗಾಗಲೇ ಮನೆಗಳಿಗೆ ನೀರು ಪೂರೈಕೆಯಾಗುತ್ತಿದ್ದರೂ ಸರ್ಕಾರದ ನಿರ್ಧಾರದಿಂದ ಮತ್ತೂಮ್ಮೆ ಅದೇ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಸರ್ಕಾರದ ಯೋಜನೆ ಉದ್ದೇಶ ಜನರ ಅನುಕೂಲಕ್ಕಾಗಿಯೇ ಇದ್ದರೂ ಗುತ್ತಿಗೆದಾರರು ಮಾಡುವ ವಿಳಂಬ ಧೋರಣೆಯಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ.
ಕಿತ್ತ ರಸ್ತೆ ದುರಸ್ತಿಯಿಲ್ಲ: ಜಿಲ್ಲೆಯಲ್ಲಿ ಆರಂಭಿಸಿರುವ ಜೆಜೆಎಂ ಕಾಮಗಾರಿಯಲ್ಲಿ ಗುತ್ತಿಗೆದಾರರು ಹಳ್ಳಿಗಳಲ್ಲಿ ಮುಖ್ಯ ರಸ್ತೆ ಸೇರಿ ಓಣಿ, ಸಂದಿ, ಗಲ್ಲಿಗಳು, ಇಕ್ಕಟ್ಟಾದ ಪ್ರದೇಶದಲ್ಲಿಯೂ ಸಿ.ಸಿ ರಸ್ತೆ, ಡಾಂಬಾರು ರಸ್ತೆ ಕಿತ್ತು ಹಾಕಿ ಮನೆ-ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ ತಿಂಗಳುಗಳು ಕಳೆದರೂ ಕಿತ್ತು ಹಾಕಿದ್ದ ರಸ್ತೆಗಳನ್ನು ಈ ವರೆಗೂ ದುರಸ್ತಿ ಮಾಡಿಲ್ಲ.
ತಾಲೂಕಿನ ಬೆಟಗೇರಿ, ಮೋರನಾಳ, ಕುಣಕೇರಿ ಸೇರಿದಂತೆ ಹಲವೆಡೆ ಇದೇ ಪರಿಸ್ಥಿತಿಯಿದೆ. ರಸ್ತೆ ದುರಸ್ತಿ ಮಾಡದ್ದರಿಂದ ಇಕ್ಕಟ್ಟಾದ ರಸ್ತೆಯಲ್ಲಿ ಜನರು ಸಂಚರಿಸುವುದು ಕಷ್ಟವಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಗರ್ಭಿಣಿಯರ ಸ್ಥಿತಿ ಹೇಳತೀರದಾಗಿದೆ. ಇಡೀ ಗ್ರಾಮದ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ದುರಸ್ತಿ ಮಾತು ಕೇಳಿ ಬಂದಿವೆಯಾದರೂ ಪೂರ್ಣ ಕಾಮಗಾರಿ ಮುಗಿಯುವುದು ಯಾವಾಗ?, ನಾವು ಮತ್ತೆ ಉತ್ತಮ ರಸ್ತೆಯಲ್ಲಿ ಸುತ್ತಾಡುವುದು ಯಾವಾಗ? ಎನ್ನುವ ಪ್ರಶ್ನೆ ಎದುರಾಗಿದೆ.
ಗ್ರಾಮೀಣ ನೀರು ಸರಬರಾಜು ಇಲಾಖೆ ಪ್ರಕಾರ 722 ಜನವಸತಿ ಗ್ರಾಮಗಳ ಪೈಕಿ 422 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬೆರಳೆಣಿಕೆ ಗ್ರಾಮಗಳಲ್ಲಿ ಕಿತ್ತ ರಸ್ತೆ ಪುನಃ ದುರಸ್ತಿ ಮಾಡಲಾಗಿದೆ. ಆದರೆ ಹಲವು ಗ್ರಾಮಗಳಲ್ಲಿ ಗುತ್ತಿಗೆದಾರರು ಅರೆಬರೆ ಕಾಮಗಾರಿ ಮಾಡಿ ಕೈ ಬಿಟ್ಟಿದ್ದಾರೆ. ಅಲ್ಲದೇ ಇದೀಗ ಮಳೆಗಾಲ ಇರುವುದರಿಂದ ಇದೇ ಸಮಯದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದು ಜನರನ್ನು ತೊಂದರೆಗೆ ಸಿಲುಕಿಸಿದೆ. ರಸ್ತೆ ಕಿತ್ತು ಹಾಕಿದ್ದು ಮಳೆ-ಚರಂಡಿ ನೀರು ಜೆಜೆಎಂ ಪೈಪ್ ಹಾಕಿದ ಜಾಗದಲ್ಲಿಯೇ ಹರಿಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿದೆ.
ಬೇಗ ದುರಸ್ತಿ ಮಾಡಲಿ: ಹಲವು ಗ್ರಾಮಗಳಲ್ಲಿ ಜೆಜೆಎಂ ಹೆಸರಲ್ಲಿ ಕಿತ್ತು ಹಾಕಿದ ರಸ್ತೆಯನ್ನು ಪುನಃ ಬೇಗ ನಿರ್ಮಾಣ ಮಾಡಿ ಜನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲದೇ, ಅರ್ಧಕ್ಕೆ ಸ್ಥಗಿತಗೊಳಿಸಿದ ಕಾಮಗಾರಿ ಪುನಃ ಆರಂಭಿಸಿ ಬೇಗ ಪೂರ್ಣಗೊಳಿಸಬೇಕೆನ್ನುವ ಒತ್ತಾಯ ಹಲವು ಗ್ರಾಮಗಳ ಗ್ರಾಮಸ್ಥರಿಂದ ಕೇಳಿ ಬಂದಿದೆ. ಆದ್ದರಿಂದ ಇನ್ನಾದರೂ ಸಂಬಂಧಿಸಿದ ಗುತ್ತಿಗೆದಾರರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅಧಿಕಾರಿಗಳು ಕಾಳಜಿ ವಹಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ.
ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ಮಾಡಿದ ಗ್ರಾಮಗಳಲ್ಲಿ ಯಾವ ಗುತ್ತಿಗೆದಾರರು ರಸ್ತೆಗಳನ್ನು ಕಿತ್ತು ಹಾಕಿ ಕೆಲಸ ಮಾಡಿರುತ್ತಾರೋ ಅವರೇ ಆ ರಸ್ತೆ ದುರಸ್ತಿ ಮಾಡಿಕೊಡಬೇಕು. ಈಗಾಗಲೇ ರಸ್ತೆ ದುರಸ್ತಿ ಮಾಡದ 7 ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿದ್ದೇವೆ. ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ನಾವು ಪೇಮೆಂಟ್ ಮಾಡಲ್ಲ. ಗ್ರಾಮದಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ರಸ್ತೆ ದುರಸ್ತಿ ಮಾಡುವ ವಿಧಾನವಿದೆ. ಕೆಲವು ಕಾರಣಗಳಿಂದ ಗ್ರಾಮಗಳಲ್ಲಿ ರಸ್ತೆ ದುರಸ್ತಿ ವಿಳಂಬವಾಗಿರಬಹುದು. ಆದರೆ ನಾವು ಅಂತಹ ಗುತ್ತಿಗೆದಾರಿಗೆ ನಿರ್ದೇಶನ ನೀಡುತ್ತಿದ್ದೇವೆ.
-ಫೌಜಿಯಾ ತರನ್ನುಮ್, ಜಿಪಂ ಸಿಇಒ
ದತ್ತು ಕಮ್ಮಾರ