ಅಜೆಕಾರು: ವರಂಗ ಗ್ರಾ.ಪಂ. ವ್ಯಾಪ್ತಿಯ ಅಂಡಾರು ಗ್ರಾಮದ ಆಯರೆಬೆಟ್ಟು ಪರಿಸರದ ಮಳುಗು ಸೇತುವೆ ಕಳೆದ ವರ್ಷ ಮಳೆಗಾಲದಲ್ಲಿ ಸುರಿದ ಭಾರೀ ಮಳೆಗೆ ಕುಸಿತಗೊಂಡಿದ್ದು ಇನ್ನೂ ದುರಸ್ತಿಕಂಡಿಲ್ಲ. ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನವೂ ಬಿಡುಗಡೆಗೊಂಡಿಲ್ಲ.
ಸುಮಾರು 2 ದಶಕಗಳ ಹಿಂದೆ ನಿರ್ಮಾಣವಾದ ಈ ಮುಳುಗು ಸೇತುವೆಯು ಸ್ಥಳೀಯರ ಸಂಪರ್ಕದ ಏಕೈಕ ರಸ್ತೆ. ಈ ಪ್ರದೇಶದಲ್ಲಿ ಮಲೆಕುಡಿಯ ಸಮುದಾಯ ಸೇರಿದಂತೆ ನೂರಾರು ಕುಟುಂಬಗಳು ವಾಸಿಸುತ್ತಿವೆ. ಆಯರೆಬೆಟ್ಟು, ಪೈತಾಳ ದರ್ಖಾಸು, ಪರಿಶಿಷ್ಟ ಪಂಗಡ ಕಾಲನಿ ಹಾಗೂ ಪಕ್ಕಿಬೈಲು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಈ ಸೇತುವೆ ಸೇತುವೆಯೇ ಅಧಾರ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುವ ಭಾರೀ ಮಳೆಗೆ ಪ್ರವಾಹ ಬಂದ ವೇಳೆ ಮುಳುಗು ಸೇತುವೆ ಕುಸಿತಗೊಂಡಿದ್ದರೂ ದುರಸ್ತಿ ಕಾಣದ ಕಾರಣ ಈ ಬಾರಿ ಮಳೆಗಾಲಕ್ಕೆ ಕುಸಿತಗೊಂಡ ಪ್ರದೇಶದ ಮಣ್ಣು ಮತ್ತೆ ಕೊಚ್ಚಿ ಹೋಗುವ ಸಂಭವ ಹೆಚ್ಚಾಗಿದೆ.
ಕುಸಿತಗೊಂಡ ತತ್‌ಕ್ಷಣ ಸ್ಥಳೀಯರು ಜನಪ್ರತಿನಿ ಧಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕರಣವಾಗಿದೆ.
Advertisement
ಈ ಮಳೆಗಾಲದಲ್ಲಿ ಸೇತುವೆ ಒಂದು ವೇಳೆ ಕೊಚ್ಚಿ ಹೋದಲ್ಲಿ ಪೈತಾಳ, ಆಯರೆಬೆಟ್ಟು, ಪಕ್ಕಿಬೈಲು ಸೇರಿದಂತೆ ಹಲವು ಪ್ರದೇಶಗಳ ನಾಗರಿಕರಿಗೆ ಸಂಚಾರ ಸಂಪರ್ಕ ಕಡಿತಗೊಳ್ಳಲಿದೆ.
Related Articles
Advertisement
ಮುಳುಗು ಸೇತುವೆಗೆ ಮುಕ್ತಿ ನೀಡಿ ವಿಶಾಲ ಸೇತುವೆ ನಿರ್ಮಿಸುವಂತೆ ಕಳೆದ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದಾರೆ. ಕೆಲ ವರ್ಷಗಳ ಹಿಂದೆ ಮೋರಿ ಅಳವಡಿಸಿ ಮುಳುಗು ಸೇತುವೆಯ ಎತ್ತರ ಏರಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಇದು ತಾತ್ಕಲಿಕ ವ್ಯವಸ್ಥೆಯಾಗಿರುವುದನ್ನು ಮನಗಂಡ ಸ್ಥಳೀಯರು ವಿಶಾಲ ಸೇತುವೆಗೆ ಬೇಡಿಕೆಯಿಟ್ಟಿದ್ದರು.
ಅಪಾಯಕಾರಿ
ಮೊದಲೇ ಇದು ಮುಳುಗು ಸೇತುವೆಯಾಗಿದ್ದು ಈಗ ಕುಸಿತಬೆರೆ ಕಂಡಿರುವುದು ತೀರ ಅಪಾಯಕಾರಿ ಎಂದೆನಿಸಿದೆ. ಸೇತುವೆ ಪಕ್ಕದಲ್ಲಿಯೇ ಕಿರಿಯ ಪ್ರಾಥಮಿಕ ಶಾಲೆಯಿದೆ. ಇಲ್ಲಿನ ವಿದ್ಯಾರ್ಥಿಗಳು ಈ ಅಪಾಯಕಾರಿ ಸೇತುವೆ ಮೇಲೆಯೇ ಮಳೆಗಾಲದಲ್ಲೂ ಸಂಚರಿಸಬೇಕಾದ ಅನಿವಾರ್ಯತೆ ಇದೆ.
ಈಗಾಗಲೇ ಬೈಕ್ ಸವಾರರು ಹಾಗೂ ಸ್ಥಳೀಯರು ಹಲವು ಬಾರಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರಾದರೂ ಇಲ್ಲಿನ ಸ್ಥಳೀಯರ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಸಮಸ್ಯೆಯನ್ನು ಮನಗಂಡು ತ್ವರಿತವಾಗಿ ಸೇತುವೆ ದುರಸ್ತಿ ನಡೆಸಿ ಮುಂದಿನ ದಿನಗಳಲ್ಲಿ ವಿಶಾಲ ಸೇತುವೆಗೆ ಅನುದಾನ ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಸ್ತಾವನೆ ಸಲ್ಲಿಕೆ
ಮುಳುಗು ಸೇತುವೆ ಕುಸಿತಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ವಿಶಾಲ ಸೇತುವೆ ನಿರ್ಮಾಣಕ್ಕೆ ಸುಮಾರು 50 ಲಕ್ಷ ರೂ. ಅಂದಾಜು ವೆಚ್ಚ ತಗಲಿದ್ದು ಈ ಬಗ್ಗೆ ಸರಕಾರಕ್ಕೆ ಇಲಾಖಾ ಅಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಜ್ಯೋತಿ ಹರೀಶ್, ಜಿಲ್ಲಾ ಪಂಚಾಯತ್ ಸದಸ್ಯರು
ಮನವಿಗೆ ಸ್ಪಂದಿಸಿಲ್ಲ
ಚುನಾವಣಾ ಸಂದರ್ಭ ಮತಯಾಚಿಸಲು ಬರುವ ಜನಪ್ರತಿನಿಧಿಗಳು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ವಿಶಾಲ ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಸೇತುವೆ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಮ್ಮ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಲಾಗುವುದು.
– ಪ್ರಕಾಶ್ ಗೌಡ, ಪೈತಾಳ ದರ್ಖಾಸು
– ಜಗದೀಶ್ ರಾವ್ ಅಂಡಾರು