“ಮೊದಲ ಚಿತ್ರದ ಬಳಿಕ ನಿರ್ಮಾಪಕರೊಬ್ಬರು ಅಡ್ವಾನ್ಸ್ ಕೊಡೋಕೆ ಬಂದರೂ, ಅದನ್ನು ಪಕ್ಕಕ್ಕಿಟ್ಟು, ನನ್ನನ್ನು ತುಂಬಾ ಕಾಡಿದ ಈ ಕಥೆಯ ಹಿಂದೆ ಹೊರಟೆ. ಈಗ ಆ ಚಿತ್ರ ಮುಗಿಸಿ, ಇಷ್ಟರಲ್ಲೇ ನಿಮ್ಮ ಮುಂದೆ ಬರಲು ಅಣಿಯಾಗುತ್ತಿದ್ದೇನೆ…’
– “ನಾನಿ’ ಚಿತ್ರವನ್ನು ನಿರ್ದೇಶಿಸಿದ್ದ ರಾಘವೇಂದ್ರ ಈಗ ಸುಮಂತ್ ಕ್ರಾಂತಿ ಹೆಸರಲ್ಲಿ ಇನ್ನೊಂದು ಸಿನಿಮಾ ಮಾಡಿದ್ದಾರೆ. ಅದರ ಹೆಸರು “ಕಾಲಚಕ್ರ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸುಮಂತ್, ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು ಸುಮಂತ್ ಕ್ರಾಂತಿ.
ಮೊದಲ ಪೋಸ್ಟರ್ ತೋರಿಸುತ್ತಲೇ ಮಾತಿಗಿಳಿದ ನಿರ್ದೇಶಕರು, “ಇದೊಂದು ನೈಜ ಕಥೆ. ಸಮಾಜದಲ್ಲಿ ಎಲ್ಲರಿಗೂ ಗೊತ್ತಿರುವಂತಹ ವ್ಯಕ್ತಿಯೊಬ್ಬರ ಬದುಕಿನಲ್ಲಾದ ಘಟನೆ ಇಟ್ಟುಕೊಂಡು ಚಿತ್ರ ಮಾಡಿದ್ದೇನೆ. ಇಲ್ಲಿ ವ್ಯಕ್ತಿಯೊಬ್ಬ ವಯಸ್ಸಾದ ನಂತರ ಹೇಗೆ ತನ್ನ ಕೆಲವು ಕೆಲಸಗಳನ್ನು ಪೂರೈಸಿಕೊಳ್ಳುತ್ತಾನೆ ಎಂಬುದು ಹೈಲೈಟ್. ಸೈಕಾಲಜಿ ಮತ್ತು ಎಮೋಷನ್ ಸುತ್ತ ಸಾಗುವ ಚಿತ್ರವಿದು. ಇಲ್ಲಿ ವಾಲ್ಯುಂ-1 ಎಂಬುದಾಗಿದೆ. ಅಂದರೆ, ಮುಂದುವರೆದ ಭಾಗವೂ ಬರಲಿದೆ ಎಂದರ್ಥ. ಈಗಾಗಲೇ ಅದಕ್ಕೆ ಸ್ಕ್ರಿಪ್ಟ್ ಕೂಡ ತಯಾರಾಗಿದೆ. ಆಡಿಯೋ ಬಿಡುಗಡೆ ಬಳಿಕ ಮುಂದುವರೆದ ಭಾಗ ಕುರಿತು ಹೇಳ್ತೀನಿ. ಇಲ್ಲಿ ವ್ಯಕ್ತಿಯ ಎರಡು ಮುಖ ಕಾಣಬಹುದು. ಒಂದು ಘಟನೆಯನ್ನು ಹೇಗೆ ಎದುರಿಸುತ್ತಾನೆ ಎಂಬುದೇ ಸಾರಾಂಶ’ ಎಂದರು ಸುಮಂತ್. ವಸಿಷ್ಠ ಸಿಂಹ ಅವರಿಗೆ ಇದೊಂದು ಒಳ್ಳೆಯ ಅವಕಾಶವಂತೆ. “ಭಾವನೆಗಳ ಮೇಳವೇ ಇಲ್ಲಿದೆ. ನನಗೆ ತುಂಬಾ ಕಾಡಿದ ಕಥೆ ಇದು. ಮೊದಲು ಕಥೆ ಕೇಳಿದಾಗ, ಬಿಡಬಾರದು ಅನಿಸಿತು. ನಿರ್ದೇಶಕರು ಕಥೆ ಹೇಗೆ ಹೇಳಿದ್ದರೋ, ಅದಕ್ಕಿಂತಲೂ ಚೆನ್ನಾಗಿ ದೃಶ್ಯರೂಪದಲ್ಲಿ ಅಳವಡಿಸಿದ್ದಾರೆ. ಇಲ್ಲಿ ಭಾವನೆಯಲ್ಲೇ ಆಟವಾಡಬೇಕು, ಕಣ್ಣಲ್ಲೇ ಎಲ್ಲವನ್ನೂ ಹೇಳುವಂತೆ ನಟಿಸಬೇಕು. ಅದೊಂದು ಚಾಲೆಂಜಿಂಗ್ ಪಾತ್ರ. ಇನ್ನು, ಕುಮಾರ್, ಶಿವು ಇಬ್ಬರು ಮೇಕಪ್ ಮಾಡಿದ್ದಾರೆ. ಅದೊಂದು ವಿಶೇಷತೆ ಇಲ್ಲಿದೆ. ಹೆಚ್ಚೇನೂ ಹೇಳುವುದಿಲ್ಲ. ಒಂದು ಪೋಸ್ಟರ್ ಇಡೀ ಚಿತ್ರದ ಕಥೆ ಹೇಳಬಲ್ಲದು. ಇಲ್ಲಿ ಪೋಸ್ಟರ್ ಒಂದು ಕುತೂಹಲ ಕೆರಳಿಸಿದೆ. ಅದನ್ನು ಸಿನಿಮಾದಲ್ಲೇ ನೋಡಿ ಅಂದರು ವಸಿಷ್ಠ ಸಿಂಹ.
ಸಂಗೀತ ನೀಡಿರುವ ಗುರುಕಿರಣ್ ಅವರು ಮೊದಲು ನಿರ್ದೇಶಕರು ಕಥೆ ಹೇಳಿದಾಗ, ಇದು ವಕೌìಟ್ ಆಗುವುದು ಕಷ್ಟ. ಬೇಡ ಬಿಟ್ಟಾಕಿ ಅಂದರಂತೆ. ಆಮೇಲೆ, ಸುಮಂತ್ ಚಿತ್ರಕಥೆ ಸಮೇತ ಬಂದು ವಿವರಿಸಿದಾಗ, ಕನ್ನಡಕ್ಕೆ ಇದೊಂದು ಹೊಸ ಫೀಲ್ ಕೊಡುವ ಚಿತ್ರವಾಗುತ್ತೆ ಅಂತಂದುಕೊಂಡು ಕೆಲಸ ಮಾಡಿದರಂತೆ. ಎಲ್ಲರ ಮನಸ್ಸಿಗೆ ಹತ್ತಿರವಾಗುವ ಕಥೆ ಇದು ಅಂದರು ಗುರುಕಿರಣ್.
ನಾಯಕಿ ರಕ್ಷಾ ಅವರಿಗೆ ಇದು ಮೊದಲ ಚಿತ್ರ. ತಮಿಳಿನಲ್ಲಿ ಎರಡು ಚಿತ್ರ ಮಾಡಿರುವ ಅವರಿಗೆ, ಒಳ್ಳೆಯ ಚಿತ್ರದಲ್ಲಿ ಕೆಲಸ ಮಾಡಿರುವ ತೃಪ್ತಿ. “ಕಾಲಚಕ್ರ’ ಅವರಿಗೆ ಗಟ್ಟಿನೆಲೆ ಕರುಣಿಸುವ ಚಿತ್ರವಾಗುತ್ತೆ ಎಂಬ ನಂಬಿಕೆ ಇದೆಯಂತೆ. ಚಿತ್ರದಲ್ಲಿ ರಾಜ್ ದೀಪಕ್ ಶೆಟ್ಟಿ ಅವರು ನೆಗೆಟಿವ್ ಪಾತ್ರ ಮಾಡಿದ್ದಾರಂತೆ. ನಿರ್ದೇಶಕರು ಅವರಿಗೆ ಕಥೆ ಹೇಳಿದಾಗ, ಚೆನ್ನಾಗಿದೆ ಅಂತ ಖುಷಿಗೊಂಡರಂತೆ. ಆಮೇಲೆ ನಿಮ್ಮದು ಬೆತ್ತಲೆಯಾಗಿರುವಂತಹ ಪಾತ್ರ ಅಂತ ಹೇಳಿ ಹೊರಟು ಹೋದರಂತೆ. ಸೆಟ್‌ಗೆ ಹೋದಾಗ, ನಿರ್ದೇಶಕರು ಒಂದು ಗಿಫ್ಟ್ ಕೊಟ್ಟರಂತೆ. ಅದರೊಳಗೆ “ಜಾಕಿ’ ಅಂಡರ್‌ವೆàರ್ ಇಟ್ಟುಕೊಟ್ಟಿದ್ದನ್ನು ಕಂಡು, ಇದನ್ನಾದರೂ ಕೊಟ್ಟರಲ್ಲ ಅಂತ ಅದನ್ನು ಹಾಕಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದಾಗಿ ಹೇಳಿಕೊಂಡರು ದೀಪಕ್ ಶೆಟ್ಟಿ.
ಛಾಯಗ್ರಾಹಕ ಗುಂಡ್ಲುಪೇಟೆ ಸುರೇಶ್ ಅವರು, ಈ ಚಿತ್ರಕ್ಕೆ ಜೂಮ್ ಬಳಸದೆ, ಬ್ಲಾಕ್ ಲೆನ್ಸ್ ಬಳಸಿದ್ದಾರಂತೆ. ಕವಿರಾಜ್, ಸಂತೋಷ್ ನಾಯ್ಕ ಗೀತೆ ರಚಿಸಿದ್ದಾರೆ. ಆವಿಕಾ ರಾಥೋಡ್ ಬಾಲನಟಿಯಾಗಿ ನಟಿಸಿದ್ದಾರೆ. ರಶ್ಮಿ ಕೆ. ನಿರ್ಮಾಣ ಮಾಡಿದ್ದಾರೆ.