Advertisement
ಕಿಷ್ಕಿಂದೆಯ ಪರ್ವತವು ಭಾರತೀಯರಿಗೆ ಅತ್ಯಂತ ಪವಿತ್ರ, ಶ್ರದ್ಧಾ ಭಕ್ತಿಯ ತಾಣವಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ಬೆಟ್ಟ ಹತ್ತಿ ಮಾರುತನ ದರ್ಶನ ಪಡೆದು ಪುನೀತರಾಗುತ್ತಾರೆ. ಅದರಲ್ಲೂ ಉತ್ತರ ಭಾರತದಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಇನ್ನು ವಿಶ್ವದ ನಾನಾ ದೇಶಗಳ ಇತಿಹಾಸ ತಜ್ಞರು, ಸಂಶೋಧಕರು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಸೇರಿದಂತೆ ಹಲವಾರು ಜನ ಅಂಜನಾದ್ರಿಗೆ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಅಂಜನಾದ್ರಿ ದೇಶ, ವಿದೇಶಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಇದು ಕೆಲವರಿಗೆ ಕಣ್ಣು ಕುಕ್ಕಿಸಿದೆ. ಹೀಗಾಗಿ ಅಂಜನಾದ್ರಿಯ ಬಗ್ಗೆ ಇಲ್ಲದ ಸಲ್ಲದ ವಾದ ಮಾಡಿ ಗೊಂದಲ ಸೃಷ್ಟಿಸಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ಇತಿಹಾಸ ತಜ್ಞರು.
Related Articles
Advertisement
ಅಂಜನಾದ್ರಿ ಅಭಿವೃದ್ಧಿಗೂ ಮಾಸ್ಟರ್ ಪ್ಲಾನ್: ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರವು ಕಿಷ್ಕಿಂದೆಗೆ ವಿಶೇಷ ಮಾಸ್ಟರ್ ಪ್ಲಾನ್ ಮಾಡುವ ಸಿದ್ಧತೆಯಲ್ಲಿದೆ. ಬೆಟ್ಟದ ಸುತ್ತಲೂ ಹನುಮ ಪಥ ನಿರ್ಮಾಣ, ರಾಮಾಯಣ ಪಾರ್ಕ್, ಇತಿಹಾಸದ ನಾಮಫಲಕಗಳ ಅಳವಡಿಕೆ ಮಾಡುವುದು ಸೇರಿದಂತೆ ರೋಪ್‌ವೇ, ರಸ್ತೆಗಳ ಅಗಲೀಕರಣ, ಪ್ರವಾಸಿ ಮಂದಿರ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿಗೆ ಜಿಲ್ಲಾಡಳಿತ ಮಾಸ್ಟರ್ ಪ್ಲ್ರಾನ್ ತಯಾರಿಸಿದ್ದು, ಸರ್ಕಾರದ ಮಟ್ಟದಲ್ಲಿ ಸಮ್ಮತಿ ದೊರೆಯಬೇಕಿದೆ.
ಆಂಜನೇಯನ ಹೆಸರಲ್ಲಿ ಟಿಟಿಡಿ ಹಾಗೂ ಮಹಾರಾಷ್ಟ್ರ ಬಿಜಿನೆಸ್ ಮಾಡಲು ಹೊರಟಿವೆ. ಕಿಷ್ಕಿಂದೆಯೇ ಹನುಮನು ಜನಿಸಿದ ಸ್ಥಳವಾಗಿದೆ. ನಮ್ಮ ಇತಿಹಾಸ ತಜ್ಞರ ಬಳಿ ಹಲವು ದಾಖಲೆಗಳಿವೆ. ನಾವೆಲ್ಲ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅ ಧಿಕೃತ ಘೋಷಣೆಗೆ ಒತ್ತಾಯಿಸುತ್ತೇವೆ. ನಮ್ಮಲ್ಲಿನ ದಾಖಲೆಗಳನ್ನು ಸರ್ಕಾರಕ್ಕೆ ಕೊಡುತ್ತೇವೆ. ಕೇಂದ್ರ ಸರ್ಕಾರವು ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯೂ ಇದೆ. ಟಿಟಿಡಿ ಹಾಗೂ ಮಹಾರಾಷ್ಟ್ರ ಹನುಮಂತನ ಹೆಸರಲ್ಲಿ ವ್ಯವಹಾರ ಮಾಡಿ, ಇಲ್ಲಿನ ಪ್ರವಾಸೋದ್ಯಮ ಹಾಗೂ ವ್ಯಾಪಾರೋದ್ಯಮಕ್ಕೆ ಪೆಟ್ಟು ನೀಡಲು ಇಂತಹ ವಿವಾದ ಸೃಷ್ಟಿ ಮಾಡುತ್ತಿವೆ. ಇದನ್ನು ನಾವು ಖಂಡಿಸುತ್ತೇವೆ. -ಸಂಗಣ್ಣ ಕರಡಿ, ಸಂಸದ
ಈಚೆಗೆ ಅಂಜನಾದ್ರಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತರ ಭಾರತದಲ್ಲಿ ಅಯೋಧ್ಯೆ ದರ್ಶನದ ನಂತರ ದಕ್ಷಿಣ ಭಾರತದಲ್ಲಿ ಅಂಜನಾದ್ರಿ ದರ್ಶನ ಮಾಡಬೇಕು ಎನ್ನುವ ನಂಬಿಕೆಯಿದೆ. ಹಾಗಾಗಿ ಮುಂದಿನ ದಿನದಲ್ಲಿ ಅಂಜನಾದ್ರಿ ಅಭಿವೃದ್ಧಿಯಾಗಲಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರನ್ನು ತಮ್ಮತ್ತ ಸೆಳೆಯಬೇಕು ಎನ್ನುವ ತಂತ್ರದಿಂದ ಮಹಾರಾಷ್ಟ್ರ ಹಾಗೂ ಟಿಟಿಡಿ ಇಂತಹ ಗೊಂದಲ ಸೃಷ್ಟಿ ಮಾಡುತ್ತಿವೆ. ಅವರಲ್ಲಿ ಚಾರಿತ್ರಿಕ ಪುರಾವೆಗಳಿಲ್ಲ. ಯಾವ ಹಿನ್ನೆಲೆಯೂ ಇಲ್ಲ. ಕಿಷ್ಕಿಂದೆಯ ಕುರುಹುಗಳೂ ಇಲ್ಲ. ಕೇವಲ ಐತಿಹ್ಯ ಆಧಾರದಲ್ಲಿ ಮಾತನಾಡುತ್ತಿದ್ದಾರೆ. ನಿಜವಾದ ಅಂಜನಾದ್ರಿ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿದೆ. ಪ್ರವಾಸಿಗರನ್ನು ತಮ್ಮತ್ತ ಸೆಳೆಯುವ ಹುನ್ನಾರ ನಡೆದಿದೆ. ಸರ್ಕಾರ ಬೇಗನೇ ಇಲ್ಲಿನ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ ಎನ್ನುವುದನ್ನು ಘೋಷಣೆ ಮಾಡಿದರೆ ಇಂತಹ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. –ಡಾ| ಶರಣಬಸಪ್ಪ ಕೋಲ್ಕಾರ, ಇತಿಹಾಸ ಸಂಶೋಧಕ
-ದತ್ತು ಕಮ್ಮಾರ