ಹಾವೇರಿ: ತೀವ್ರಗತಿಯಲ್ಲಿ ಹರಡುತ್ತಿರುವ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಕರ್ಫ್ಯೂ ಮಾರ್ಗಸೂಚಿ ಹೊರಡಿಸಿತ್ತು. ಆದರೆ ಮತ್ತೆ ಮತ್ತಷ್ಟು ನಿಯಮ ಸರಳಗೊಳಿಸಿರುವುದರಿಂದ ಜನರ ಓಡಾಟ ನಗರ ಪ್ರದೇಶದಲ್ಲಿ ಹೆಚ್ಚುತ್ತಿದ್ದು, ಸಂತೆ ಬದಲಿಗೆ ಮನೆಗೇ ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಶುರುವಾಗಿದೆ.
ಕರ್ಫ್ಯೂ ಆರಂಭವಾಗಿ 6 ದಿನ ಕಳೆದಿದ್ದು, ಇಷ್ಟು ದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮುನ್ಸಿಪಲ್ ಹೈಸ್ಕೂಲ್ ಮೈದಾನದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಡೆಯುತ್ತಿತ್ತು. ರವಿವಾರ ತರಕಾರಿ ಮಾರುಕಟ್ಟೆ ಬಂದ್ ಮಾಡಿಸಲಾಗಿದ್ದು, ಸೋಮವಾರ ತಳ್ಳುಗಾಡಿ ಸೇವೆ ಆರಂಭವಾಗಿದೆ. ಆದ್ದರಿಂದ ಎಲ್ಲ ಓಣಿಗಳಲ್ಲಿ ಹಣ್ಣು, ತರಕಾರಿ ಹೊತ್ತ ಕೈಗಾಡಿಗಳು ಸಂಚರಿಸುತ್ತಿವೆ. ಜನರ ಓಡಾಟ ನಿಯಂತ್ರಿಸಲೆಂದು ಮತ್ತು ಸಾಮಾಜಿಕ ಅಂತರ ನಿಯಮ ಪಾಲನೆಗಾಗಿ ಸರ್ಕಾರ ನಿಯಮ ಸಡಿಲಗೊಳಿಸಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಜತೆಗೆ ಆತಂಕವೂ ಶುರುವಾಗಿದೆ.
ಮನೆ ಎದುರೇ ತರಕಾರಿ ಮತ್ತು ಹಣ್ಣು ಖರೀದಿಸುತ್ತಿದ್ದಾರೆ. ಆದರೆ, ದಿನಸಿ ಖರೀದಿ ಅವಧಿ ಹೆಚ್ಚಿಸಿರುವುದರಿಂದ ಜನರ ಓಡಾಟ 12 ಗಂಟೆವರೆಗೂ ನಿರಾತಂಕವಾಗಿ ನಡೆಯುತ್ತಿದೆ. ಅಗತ್ಯ ವಸ್ತು ಸೇವೆಗೆ 12 ಗಂಟೆವರೆಗೂ ಅವಕಾಶ ದೊರೆತಿರುವುದರಿಂದ ದಿನಸಿ, ಹಾಲು, ಬೇಕರಿ, ಕೃಷಿ ಸಾಮಗ್ರಿ ಮಾರಾಟದ ಅಂಗಡಿಗಳು ವ್ಯಾಪಾರ ನಡೆಸುತ್ತಿವೆ. ಗ್ರಾಮೀಣ ಭಾಗಗಳಿಂದ ನಗರಗಳಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಿದೆ. ಬಸ್ ಸೇರಿದಂತೆ ಖಾಸಗಿ ವಾಹನ ಸಂಚಾರ ಇಲ್ಲದ್ದರಿಂದ ಬಹುತೇಕರು ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದಾರೆ. ಆದ್ದರಿಂದ ನಗರದಲ್ಲಿ ಬೈಕ್ ಸವಾರರ ಸಂಖ್ಯೆ ಹೆಚ್ಚಿದೆ.
ದಂಡ ವಸೂಲಿಗೆ ಸೀಮಿತ: ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಅಗತ್ಯ ವಸ್ತು ಖರೀದಿಗೆ ಅವಕಾಶ ಇರುವುದರಿಂದ ಜನರ ಓಡಾಟವೂ ಹೆಚ್ಚಿದೆ. ಆ ಬಳಿಕವೂ ಆಸ್ಪತ್ರೆ, ಔಷಧ ಕಾರಣ ಹೇಳಿ ಜನರು ಸಂಚರಿಸುತ್ತಲೇ ಇದ್ದಾರೆ. ಪೊಲೀಸರು ದಂಡ ವಸೂಲಿ ಮಾಡಿ ಬಿಡುತ್ತಿರುವುದರಿಂದ ಜನರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಜನ ಹಾಗೂ ವಾಹನ ಓಡಾಟದ ಬಗ್ಗೆ ಪೊಲೀಸರು ತಲೆಕೆಡಿಸಿಕೊಳ್ಳುತ್ತಿಲ್ಲ. ನಂತರ ದಂಡ ವಿಧಿಸುವುದಕ್ಕೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಮಾಸ್ಕ್ ಧರಿಸದವರಿಗೂ 100 ರೂ. ಮಾಸ್ಕ್ ದಂಡ ವಿಧಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಜಿಲ್ಲಾದ್ಯಂತ ಸಾವಿರಾರು ಜನರಿಗೆ ಮಾಸ್ಕ್ ದಂಡ ವಿಧಿ ಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ 12 ಗಂಟೆಗೆ ಸರಿಯಾಗಿ ಅಂಗಡಿ-ಮುಂಗಟ್ಟು ಬಂದ್ ಮಾಡಲಾಗುತ್ತಿದೆ. ಆದರೆ, ಒಳ ಓಣಿಗಳಲ್ಲಿ ಸಣ್ಣಪುಟ್ಟ ಅಂಗಡಿಗಳು ರಾತ್ರಿವರೆಗೂ ವ್ಯಾಪಾರ ನಡೆಸುತ್ತಿರುವುದು ಕಂಡು ಬರುತ್ತಿದೆ.