Advertisement

ತುಳುನಾಡಿನ ಸಂಸ್ಕೃತಿಯ ಪ್ರತೀಕ ಕೆಸರು ಗದ್ದೆ ಕ್ರೀಡಾಕೂಟ

11:20 PM Oct 15, 2019 | mahesh |

ಕಲ್ಲುಗುಡ್ಡೆ: ತುಳುನಾಡು ತನ್ನ ಆಚಾರ- ವಿಚಾರಗಳಲ್ಲಿ ವಿಶೇಷತೆಯನ್ನು ಹೊಂದಿದೆ. ಮಳೆಗಾಲದ ಅವಧಿಯಲ್ಲಿ ಹಲವು ಕಡೆಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆಗೊಳ್ಳುತ್ತಿದ್ದು, ತುಳುನಾಡಿನ ಕೃಷಿ, ಸಂಸ್ಕೃತಿ, ಆಚಾರ-ವಿಚಾರಗಳಿಗೆ ವೇದಿಕೆಯನ್ನು ಕಲ್ಪಿಸಿದಂತಾಗಿದೆ.

Advertisement

ಎಲ್ಲ ವಯೋಮಾನದ ಜನರು ಕೆಸರುಗದ್ದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಬೇಸಾಯ ಮಾಡದ ಖಾಲಿ ಗದ್ದೆಯಲ್ಲಿ ಅಥವಾ ಕೊಯ್ಲಿನ ಬಳಿಕ ಈ ಕ್ರೀಡೆಗಳು ನಡೆಯುತ್ತಿದ್ದು, ಕ್ರೀಡಾಕೂಟ ನಡೆದ ಬಳಿಕ ಇದರಲ್ಲಿ ಕೃಷಿ ಕಾರ್ಯ ಮುಂದುವರಿಸಲಾಗುತ್ತಿದೆ.

ಕೆಸರು ಗದ್ದೆಯಲ್ಲಿ
“ಕೆಸರು ಗದ್ದೆ ಕ್ರೀಡಾಕೂಟ’ ಮಳೆಗಾಲದಲ್ಲಿ ಕೆಸರು ತುಂಬಿರುವ ಗದ್ದೆಗಳಲ್ಲಿ ಆಯೋಜನೆಗೊಳ್ಳುತ್ತಿದ್ದು, ಗ್ರಾಮಸ್ಥರು ಮಣ್ಣಿನ ಮಕ್ಕಳಾಗಿ ತಮ್ಮ ದೈನಂದಿನ ಜಂಜಾಟಗಳನ್ನು ಮರೆಯುತ್ತಾರೆ. ಈ ಕ್ರೀಡಾಕೂಟ ಆಟಗಾರರ ಜತೆ ವೀಕ್ಷಕರಿಗೂ ಮನೋರಂಜನೆಯನ್ನು ನೀಡುತ್ತದೆ. ಕೆಸರುಗದ್ದೆ ಕ್ರೀಡಾಕೂಟ ಮೇ ತಿಂಗಳಿನಿಂದ ಡಿಸಂಬರ್‌ ತಿಂಗಳೊಳಗೆ ನಡೆಯುತ್ತಿದ್ದು, ದಕ್ಷಿಣ ಕನ್ನಡದಲ್ಲಿಯೇ ವಾರ್ಷಿಕ 300ಕ್ಕೂ ಅಧಿಕ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿವೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಕ್ರೀಡಾಪಟುಗಳು.

ಆಯೋಜನೆ
ಕೆಸರುಗದ್ದೆ ಕ್ರೀಡಾಕೂಟದಲ್ಲಿ ಆಟಗಳು ಮಾತ್ರವಲ್ಲದೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು, ವಸ್ತು ಪ್ರದರ್ಶನಗಳು, ಕೃಷಿ ಸಂಸ್ಕೃತಿ ಪರಂಪರೆಯನ್ನು ತಿಳಿ ಹೇಳುವ ಕಾರ್ಯಕ್ರಮಗಳು ಇರುತ್ತವೆ. ಸಭಾ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ, ಆರಾಧನೆಗಳ ಸೊಬಗನ್ನು ಬಣ್ಣಿಸಲು ಉಪನ್ಯಾಸವನ್ನೂ ಏರ್ಪಡಿಸಲಾಗುತ್ತದೆ. ಸ್ಥಳೀಯ ಸಾಧಕರನ್ನು ಗುರುತಿಸಿ, ಗೌರವಿಸಲಾಗುತ್ತದೆ.

ವಿವಿಧ ಕ್ರೀಡೆಗಳು
ತುಳುನಾಡಿನ ಕ್ರೀಡೆಗಳು ವಿಶಿಷ್ಟವಾಗಿವೆ. ಅಳಿವಿನಂಚಿನಲ್ಲಿರುವ ಹಲವು ಕ್ರೀಡೆಗಳಿಗೂ ಉತ್ತೇಜನ ದೊರೆಯುತ್ತಿದೆ. ಕೆಸರುಗದ್ದೆ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ಕಬಡ್ಡಿ, ಜಾರು ಕಂಬ ಏರುವುದು, ಕೆಸರುಗದ್ದೆ ಓಟ, ಹಿಮ್ಮುಖ ಓಟ, ಒಂಟಿ ಕಾಲು ಓಟ, ಜನ ಕಂಬಳ, ಮೂರು ಕಾಲಿನ ಓಟ (ಇಬ್ಬರು ಜತೆಯಾಗಿ), ಕೆಸರು ಈಜು, ಪಾಸಿಂಗ್‌ ಬಾಲ್‌, ನಿಧಿ ಶೋಧನೆ, ರಿಲೇ, ಮಡಿಕೆ ಒಡೆಯುವುದು, ಹಾಳೆ ಎಳೆಯುವುದು, ಗೋಣಿ ಚೀಲ ಓಟ, ಉಪ್ಪು ಮೂಟೆ ಸಹಿತ ವಿವಿಧ ಬಗೆಯ ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳು ಇರುತ್ತವೆ.

Advertisement

ಕೃಷಿಗೆ ಪೂರಕ
ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭತ್ತನಾಟಿಯಂತಹ ತರಬೇತಿ ಕಾರ್ಯಗಳು ಕೆಲವೆಡೆ ನಡೆಯುತ್ತಿದ್ದು, ಜತೆಗೆ ಪಾಡªನ ಹೇಳುವ ಪದ್ಧತಿಯೂ ಇದೆ. ಗದ್ದೆಯಲ್ಲಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬಹುದು, ಮುಂತಾದ ಕೃಷಿ ಪೂರಕ ವಾತವರಣಕ್ಕೆ ಇಲ್ಲಿ ವೇದಿಕೆಯಾಗುತ್ತದೆ.

ಮನೋರಂಜನೀಯ
ನಾನು 4 ವರ್ಷಗಳಿಂದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದೇನೆ. ಈ ಕ್ರೀಡೆಯಿಂದ ಮಾನಸಿಕ ನೆಮ್ಮದಿಯ ಜತೆಗೆ ಮನೋರಂಜನೆ ಸಿಗುತ್ತಿದೆ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳ ಉಳಿವಿಗೆ ಇಂತಹ ಕ್ರೀಡಾಕೂಟಗಳು ಸಹಕಾರಿ.
– ತಿರುಮಲೇಶ್ವರ ಸಾಕೋಟೆ ಕೆಸರುಗದ್ದೆ ಕ್ರೀಡಾಪಟು

ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next