Advertisement
ಅಮೆರಿಕಾದ ಫೀನಿಕ್ಸ್ ಅಂತಾರಾಷ್ಟೀಯ ವಿಮಾನ ನಿಲ್ಡಾಣದಲ್ಲಿ ನಮ್ಮ ಸುರಕ್ಷತಾ ತಪಾಸಣೆ ಮುಗಿಯುತ್ತಿದ್ದಂತೆ ಅಲ್ಲಿನ ಸಿಬಂದಿ “ಹ್ಯಾವ್ ಅ ಗ್ರೇಟ್ ಟೈಮ್’ ಅನ್ನುತ್ತಾ ನಮ್ಮ ಅಮೆರಿಕಾ ಪ್ರವಾಸಕ್ಕೆ ಶುಭ ಹಾರೈಸಿದರು.
ಇಲ್ಲಿ ನನ್ನ ಪ್ರವಾಸದುದ್ದಕ್ಕೂ ನನಗೆ ಖುಷಿ ಕೊಟ್ಟದ್ದು ಇಲ್ಲಿನ ಜನರ ಸಭ್ಯತೆ ಮತ್ತು ಶಿಷ್ಟಾಚಾರ. ನಾವು ಹೊರಗಡೆ ಎಲ್ಲೇ ಸುತ್ತಾಡುತ್ತಿರಲಿ ನೀವು ಯಾರನ್ನೇ ಕಂಡರೂ ಅವರು ಸ್ವದೇಶೀಯರು, ವಿದೇಶಿಯರು, ಗಂಡು, ಹೆಣ್ಣು, ಎಳೆಯರು, ಕಿರಿಯರು ಎಂಬ ತಾರತಮ್ಯವಿಲ್ಲದೆ ನಿಮ್ಮನ್ನು ವಂದಿಸುವ ಪರಿಯಂತೂ ಒಮ್ಮಿಂದೊಮ್ಮೆಗೆ ಈ ದೇಶದ ಬಗ್ಗೆ ಗೌರವ ಮೂಡಿಸುತ್ತದೆ. ಒಮ್ಮಿಂದೊಮ್ಮೆಲೆ ಅವರ ಮುಖದಲ್ಲಿ ಮುಗುಳ್ನಗೆಯ ಪ್ರಭೆ ಬೆಳಗುತ್ತದೆ. “ಹಾಯ್’ ಅಂತ ಬೇಷರತ್ ಆದ ವಂದನೆಯ ನುಡಿಗಳು ನಿಮ್ಮ ಹೃದಯವನ್ನು ಗೆಲ್ಲುತ್ತವೆ.
Related Articles
Advertisement
ಬಸ್ ಏರಲು ಕಾಯುತ್ತಿದ್ದೀರಿ ಎಂದಾದರೆ ಅಲ್ಲಿ ಎಷ್ಟೇ ಜನರಿರಲಿ “ಯು ಪ್ಲೀಸ್’ ಎನ್ನುತ್ತ ನಮ್ಮ ಅವಕಾಶವನ್ನು ನಮಗೆ ಬಿಟ್ಟು ಕೊಡುವ ಅನುಭವ ಸಾಕಷ್ಟೋ ಬಾರಿ ಆಯಿತು.
ಅಮೆರಿಕಾ ಹೇಳಿ ಕೇಳಿ ಕಾರುಗಳಿರುವ ಜನರ ದೇಶ. ಇಲ್ಲಿನ ರಸ್ತೆಗಳಲ್ಲಿ ಕಾರುಗಳೇ ಹೊಳೆಯಾಗಿ ಹರಿಯುತ್ತಿದೆಯೇನೋ ಎಂದು ಒಮ್ಮೊಮ್ಮೆ ಅನಿಸುವುದುಂಟು. ಆದರೂ ನೀವೆಲ್ಲಾದರೂ ನಿಮ್ಮ ವಾಹನದಿಂದಿಳಿದು ರಸ್ತೆ ದಾಟಬೇಕೆಂದಾದರೆ ಅದಕ್ಕೆಂದೇ ನಿಗದಿಪಡಿಸಲಾದ ಸ್ಥಳದಲ್ಲಿ ನಿಶ್ಚಿಂತೆಯಿಂದ ರಸ್ತೆ ದಾಟಬಹುದಾಗಿದೆ. ಯಾಕೆಂದರೆ ರಸ್ತೆ ಮೇಲೆ ಓಡುವ ವಾಹನಗಳು ನಿಮಗಾಗಿ ನಿಂತೇ ಬಿಡುತ್ತವೆ. ಪಾದಚಾರಿ ರಸ್ತೆ ದಾಟಿದ ಬಳಿಕವಷ್ಟೇ ಹೊರಡುತ್ತವೆ.
ಅಮೆರಿಕ ಬಹುತೇಕ ಯುರೋಪಿಯನ್ನರೇ ನೆಲೆ ನಿಂತ ರಾಷ್ಟ್ರ. ಹೀಗಾಗಿ ಅವರ ಉಡುಗೆ ತೊಡುಗೆಗಳು ಅಂತೆಯೇ ಇವೆ. ತಮಗಿಷ್ಟ ಬಂದ ಉಡುಪನ್ನು ಅದು ಹಿತವೆಂದನಿಸಿದರೆ ಅವರು ಯಾವ ಮುಲಾಜಿಲ್ಲದೆ ಧರಿಸುತ್ತಾರೆ. ಹಾಗೆಂದು ನೀವು ಹೀಗೆಯೇ ಉಡುಪು ಧರಿಸಬೇಕು ಎಂದು ಅವರು ಯಾರಿಗೂ ತಾಕೀತು ಮಾಡುವುದಿಲ್ಲ.
ನಾನೂ ನನ್ನ ಅಮೆರಿಕಾ ವಾಸ್ತವ್ಯದ ವೇಳೆ ಎಷ್ಟೋ ಬಾರಿ ನಮ್ಮ ಊರಿನ ಫಾರ್ಮಲ್ಸ್ ಅಥವಾ ಇನ್ ಫಾರ್ಮಲ್ಸ್ ದಿರಿ ಸಿನಲ್ಲೇ ಇರುತ್ತಿದ್ದೆ. ನನ್ನ ಪತ್ನಿ ಅಪ್ಪಟ ಭಾರತೀಯ ನಾರಿಯಂತೆ ಸೀರೆ ಧರಿಸಿ ನಗರದಲ್ಲಿ ಸಂಚರಿಸುತ್ತಿದ್ದಾಗ ಅಮೆರಿಕನ್ ಮಹಿಳೆಯೊಬ್ಬಳು , “ವಾಹ್ ನಿಮ್ಮ ಡ್ರೆಸ್ ತುಂಬಾ ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದಾಗ ನಮ್ಮ ದೇಶದ ಸಂಸ್ಕೃ ತಿಯ ಬಗ್ಗೆ ಹೆಮ್ಮೆ ಎನಿಸಿತು.ಇಲ್ಲಿನ ಬಹುತೇಕ ಮನೆಗಳಿಗೆ ಕಾಲಿಂಗ್ ಬೆಲ್‌ಗಳೇ ಇಲ್ಲ. ನಿಮಗೆ ತಿಳಿಸದೇ, ನಿಮ್ಮ ಒಪ್ಪಿಗೆ ಇಲ್ಲದೆ ಯಾರೊಬ್ಬರೂ ನಿಮ್ಮ ಮನೆಯ ಬಾಗಿಲನ್ನು ಬಡಿಯುವುದಿಲ್ಲ. ಅಮೆರಿಕ ಪ್ರವಾಸದ ವೇಳೆ ಗಮನ ಸೆಳೆದ ಈ ಎಲ್ಲ ವಿಚಾರ ಗಳು ಮನಸ್ಸಿಗೆ ಮುದ ನೀಡಿದ್ದು ಮಾತ್ರ ಸುಳ್ಳಲ್ಲ. -ಬಿ.ವಿ.ಸೂರ್ಯನಾರಾಯಣ,ಪುತ್ತೂರು