Advertisement
ಹೌದು, ಇದು ನಗರದ ಶೆಟಲ್ಮೆಂಟ್ (ಹರಣಸಿಕಾರಿ) ಕಾಲೋನಿಯಲ್ಲಿ ಮಂಗಳವಾರ ನಡೆದ ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ಪರಶು ಪೂಜಾರಿ ಮತ್ತು ಹೊನ್ನಪ್ಪ ಪೂಜಾರಿ ಅವರು ಪ್ರತ್ಯೇಕ ದೇವಸ್ಥಾನಗಳ ಎದುರು ಭಕ್ತರು ತಂದಿದ್ದ ಟೆಂಗಿನ ಕಾಯಿಗಳನ್ನು ತಲೆಗೆ ಹೊಡೆದುಕೊಂಡು ಒಡೆಯುತ್ತಿದ್ದರು. ಒಂದೊಂದು ಟೆಂಗಿನ ಕಾಯಿಯನ್ನು ಪೂಜಾರಿಗಳು ತಲೆಗೆ ಹೊಡೆದು ಒಡೆಯುತ್ತಿದ್ದರೆ, ನೆರೆದ ಭಕ್ತರು ದೇವಿಗೆ ಜಯಕಾರ ಕೂಗುತ್ತಿದ್ದರು.
Related Articles
Advertisement
ಬೇಟೆಗಾರನೊಬ್ಬ ಪೂಜಾರಿಯಾದ: ಪಾರಿವಾಳಗಳು ನಾಗಸಮುದ್ರ ಬಳಿಯ ಒಂದು ಬಯಲು ಜಾಗೆಯಲ್ಲಿ ಮೇಯುತ್ತಿದ್ದವು. ಆಗ ಗೋವಿಂದಪ್ಪ ಪುನಃ ಆ ಪಾರಿವಾಳಗಳಿಗೆ ಬಲೆ ಹಾಕಿದ. ಆಗ ಬೆಳಗಿನ ಸಮಯವಾಗಿತ್ತು. ಬಲೆ ಹಾಕಿದ್ದ ವೇಳೆಯೇ ಅಲ್ಲಿಗೆ (ಅದು ನಿರ್ಜನ ಪ್ರದೇಶವಾಗಿದ್ದರೂ) ಪುಟ್ಟ ಬಾಲಕಿಯೊಬ್ಬಳು ಬಂದಳು. ಆ ಬಾಲಕಿಗೆ, ಪಾರಿವಾಳ ಹಿಡಿಯಲು ಬಲೆ ಹಾಕಿದ್ದೇನೆ, ಆ ಕಡೆ ಹೋಗು ಎಂದು ಬೆದರಿಸಿ ಕಳುಹಿಸಿದ. ಬಳಿಕ ಅದೇ ಮಾರ್ಗದಿಂದ ಮಹಿಳೆಯೊಬ್ಬರು ಬಂದಳು. ಅವರನ್ನೂ ಬೆದರಿಸಿ ಕಳುಹಿಸಿದ. ನಂತರ ವಯಸ್ಸಾದ ವೃದ್ಧೆಯೊಬ್ಬಳು ಬಂದಳು. ಇಂತಹ ನಿರ್ಜನ ಪ್ರದೇಶದಲ್ಲಿ ಬಾಲಕಿ, ಮಹಿಳೆ, ವೃದ್ಧೆ ಯಾಕೆ ಬರುತ್ತಿದ್ದಾರೆ ಎಂದು, ವೃದ್ಧೆಯನ್ನು ಪ್ರಶ್ನಿಸಿದ. ಆ ವೇಳೆ ಅವರೊಂದಿಗೆ ಕೆಲವು ಹೊತ್ತು ಸಂಭಾಷಣೆ ನಡೆಯಿತು.
ಕೊನೆಗೆ ಆ ವೃದ್ಧೆ, ನಾನು ದಂಡಿನ ದುರ್ಗಾದೇವಿ ಎಂದು ಹೇಳಿದಳಂತೆ. ನೀನು ನನ್ನ ದೇವಸ್ಥಾನದ ಪೂಜಾರಿಯಾಗಬೇಕು. ಹರನಸಿಕಾರಿ ಜನರ ಉದ್ಧಾರ ಮಾಡಬೇಕು ಎಂದು ಕೇಳಿಕೊಂಡಳಂತೆ. ಇದಕ್ಕೆ ಹರನಸಿಕಾರಿ ಜನ ನನ್ನನ್ನು ಹೇಗೆ ನಂಬುತ್ತಾರೆ, ಅವರು ಉದ್ಧಾರ ಹೇಗೆ ಆಗುತ್ತಾರೆ ಎಂದೆಲ್ಲ ಕೇಳಿದನಂತೆ. ಅದಕ್ಕೆ ನಿನ್ನನ್ನು ನಂಬ ಬೇಕಾದರೆ, ಕಲ್ಲುಗಳನ್ನು ತೆಗೆದುಕೊಂಡು ತಲೆಗೆ ಹೊಡೆದುಕೋ, ಕಲ್ಲು ಹೊಡೆದುಕೊಂಡರೂ ನಿನ್ನ ತಲೆಗೆ ಏನೂ ಆಗಲ್ಲ. ಕಲ್ಲುಗಳೇ ಪುಡಿ ಪುಡಿಯಾಗುತ್ತವೆ ಎಂದು ಹೇಳಿ, ಆಶೀರ್ವಾದ ಮಾಡುವ ಜತೆಗೆ ನಿನ್ನ ಬಳಿ ಯಾರೇ ರೋಗ-ರುಜಿನುಗಳಿಂದ ಬಂದರೆ ಅವರಿಗೆ ಆಯುರ್ವೆದ್ ಔಷಧ ಕೊಡು, ಅದರಿಂದ ಅವರೆಲ್ಲ ಗುಣಮುಖರಾಗುತ್ತಾರೆ. ಆಗ ನಿನ್ನನ್ನು ನಂಬುತ್ತಾರೆ ಎಂದು ದೇವಿಯ ರೂಪದಲ್ಲಿದ್ದ ವೃದ್ಧೆ ಹೇಳಿದರಂತೆ.
ಮೊದಲು ಕಲ್ಲು-ಈಗ ಟೆಂಗು: ಆಗ ಗೋವಿಂದಪ್ಪ, ಪ್ರತಿ ಹುಣ್ಣಿಮೆ ಮತ್ತು ಅಮವಾಸೆಯಂದು, ಇಂದಿಗೂ ಗದಗ-ಬೆಟಗೇರಿ ಬಳಿ ಇರುವ ದೊಡ್ಡ ಮರದ ಪಕ್ಕ ದಂಡಿನ ದುರ್ಗಾದೇವಿ ದೇವಸ್ಥಾನ ಮಾಡಿಕೊಂಡು ಪೂಜೆ, ಜನರಿಗೆ ಔಷಧ ನೀಡುವ ಹಾಗೂ ತಲೆಗೆ ಕಲ್ಲು ಒಡೆದುಕೊಳ್ಳುವ ಸಂಪ್ರದಾಯ ಆರಂಭಿಸಿದ. ಇದು ಸುಮಾರು 60ರಿಂದ 65 ವರ್ಷಗಳ ಹಿಂದೆ ನಡೆದ ಸತ್ಯ ಘಟನೆ ಎಂದು ನಗರದ ಹರನಸಿಕಾರಿ ಕಾಲೋನಿಯ 90 ವರ್ಷದ ಹಿರಿಯ ಮುಖಂಡ ಶಿವಾಜಿ ಚವ್ಹಾಣ ಹೇಳುತ್ತಾರೆ. ಅಲ್ಲದೇ ಗೋವಿಂದಪ್ಪ ಅವರ ಪವಾಡವನ್ನು ಕಣ್ಣಾರೆ ಕಂಡಿದ್ದಾಗಿ ಅವರು ತಿಳಿಸುತ್ತಾರೆ.
ಬಾಗಲಕೋಟೆಗೆ ಬಂತು ಸಂಪ್ರದಾಯ: ಸುಮಾರು 65 ವರ್ಷಗಳ ಹಿಂದೆ ಬೇಟೆಗಾರನಾಗಿದ್ದ ಗೋವಿಂದಪ್ಪ, ದಂಡಿನ ದುರ್ಗಾದೇವಿಯ ಪೂಜಾರಿಯಾಗಿ, ತಲೆಗೆ ಕಲ್ಲು ಹೊಡೆದು, ಕ್ರಮೇನ ಟೆಂಗಿನ ಕಾಯಿ ಒಡೆದುಕೊಳ್ಳುವ ಸಂಪ್ರದಾಯ ಮುಂದುವರೆಯಿತು. ಇಂದಿಗೂ ದೇಶದ ವಿವಿಧ ರಾಜ್ಯಗಳ ಜನರು, ಗದಗ-ಬೆಟಗೇರಿ ಬಳಿ ಇರುವ ದಂಡಿನ ದುರ್ಗಾದೇವಿ ಜಾತ್ರೆಗೆ ಬರುತ್ತಾರೆ. ಸುಮಾರು 20 ವರ್ಷಗಳ ಹಿಂದೆ ಬಾಗಲಕೋಟೆಯ ಹರನಸಿಕಾರಿ ಕಾಲೋನಿ ಜನರೂ ಗದಗ-ಬೆಟಗೇರಿ ಬಳಿ ದೇವಸ್ಥಾನದ ಜಾತ್ರೆಗೆ ಹೋದಾಗ ಜಗಳವಾಗಿತ್ತಂತೆ. ಹೀಗಾಗಿ ಅಲ್ಲಿಗೆ ಹೋಗುವ ಬದಲು, ನಮ್ಮ ಕಾಲೋನಿಯಲ್ಲೇ ದಂಡಿನ ದುರ್ಗಾದೇವಿ ದೇವಸ್ಥಾನ ಕಟ್ಟಿ, ನಾವೇ ಪೂಜೆ-ಜಾತ್ರೆ ಮಾಡೋಣ ಎಂದು ನಿರ್ಧರಿಸಿ, ಬಾಗಲಕೋಟೆಯ ಹರನಸಿಕಾರಿ ಕಾಲೋನಿಯಲ್ಲಿ ಎರಡು ದೇವಸ್ಥಾನ ಕಟ್ಟಿದ್ದಾರೆ. ಆ ದೇವಸ್ಥಾನಗಳಲ್ಲಿ ಪ್ರತಿವರ್ಷವೂ ಈ ಜಾತ್ರೆ ಸಂಭ್ರಮದಿಂದ ಇಡೀ ಕಾಲೋನಿಯ ಜನರು ಮಾಡುತ್ತಾರೆ.
•ಶ್ರೀಶೈಲ ಕೆ. ಬಿರಾದಾರ