“ಚಿತ್ರದ ಓಪನಿಂಗ್‌ಗೂ ಇದೇ ತರಹ ಜನ ನುಗ್ಗಿ ಬರಲಿ …’ ಎನ್ನುತ್ತಲೇ ವೇದಿಕೆಗೆ ಎಂಟ್ರಿಕೊಟ್ಟರು ನಿರೂಪಕ ಯತಿರಾಜ್. ತಲೆಯಲ್ಲಿ ಕಿರೀಟ ಕಟ್ಟಿಕೊಂಡ ಯತಿರಾಜ್ ಹೀಗೆ ಹೇಳಲು ಕಾರಣ ರೇಣುಕಾಂಬ ಪ್ರಿವ್ಯೂ ಥಿಯೇಟರ್‌ನಲ್ಲಿ ಸೇರಿದ್ದ ಜನ. “ಕಿರೀಟ’ ಚಿತ್ರದ ಆಡಿಯೋ ಬಿಡುಗಡೆಗೆ ಚಿತ್ರತಂಡದ ಸ್ನೇಹಿತರೆಲ್ಲಾ ಸೇರಿದ್ದರಿಂದ, ಹಾಲ್ ಚಿಕ್ಕದಾಗಿ ಜನ ಜಾಸ್ತಿಯಾಗಿದ್ದರು. ಅಂದಹಾಗೆ, “ಕಿರೀಟ’ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಕಿರಣ್‌ಚಂದ್ರ ಈ ಸಿನಿಮಾದ ನಿರ್ದೇಶಕರು. ಈ ಸಿನಿಮಾ ಮೂಲಕ ಸಮರ್ಥ್ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ.
ಅಷ್ಟಕ್ಕೂ “ಕಿರೀಟ’ದಲ್ಲಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆಂಬ ಪ್ರಶ್ನೆ ನಿಮಗೆ ಕಾಡಬಹುದು. ಈ ಪ್ರಶ್ನೆಗೆ ನಿರ್ದೇಶಕ ಕಿರಣ್ ಅಷ್ಟೇ ಗೊಂದಲಮಯವಾಗಿ ಉತ್ತರಿಸುತ್ತಾರೆ. “ಎಲ್ಲಾ ಇದೆ ಏನೂ ಇಲ್ಲ, ಏನೂ ಇಲ್ಲ ಎಲ್ಲಾ ಇದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಇನ್ನು ಕೆದಕಿದಾಗ, “ಇದು ನಮ್ಮ ಒಳಗಿನ ಆತ್ಮವಿಮರ್ಶೆ’ ಎಂದಷ್ಟೇ ಹೇಳುತ್ತಾರೆ. ಉಳಿದಿದ್ದನ್ನು ನೀವು ತೆರೆಮೇಲೆ ನೋಡಬೇಕು.
ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರ ನಟನೆ ಬಗ್ಗೆ ಸ್ವಲ್ಪ ಹೆಚ್ಚೇ ಹೊಗಳುತ್ತಾ ಹೋದರು ಕಿರಣ್. ಚಿತ್ರದಲ್ಲಿ ಡಾ.ರಾಜಕುಮಾರ್ ಕುರಿತಾಗಿ ಹಾಡು ಬರೆಯಲು ಅವಕಾಶ ಸಿಕ್ಕಿದ್ದರಿಂದ ಕಿರಣ್ ಖುಷಿಯಾಗಿದ್ದರು. ಚಿತ್ರಕ್ಕೆ ಸಮೀರ್ ಕುಲಕರ್ಣಿ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದ ಖುಷಿ ಅವರಿಗಿದೆ. ಚಿತ್ರದಲ್ಲಿ ನಾಯಕರಾಗಿ ನಟಿಸಿದ ಸಮರ್ಥ್ ಕೊಂಚ ಭಾವುಕರಾದರು.
ಅದಕ್ಕೆ ಕಾರಣ ಚಿತ್ರದಲ್ಲಿ ಬರುವ ಹಾಡು ಮತ್ತು ಅದರಲ್ಲಿ ತಾನು ಕಾಣಿಸಿಕೊಂಡಿದ್ದು. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಶ್ ಸೇರಿದಂತೆ ಕನ್ನಡದ ನಟರ ಕಟೌಟ್‌ನ ಬ್ಯಾಕ್‌ಡ್ರಾಪ್‌ನಲ್ಲಿ ಬರುವ ಹಾಡಿನಲ್ಲಿ ಸಮರ್ಥ್ ಕಾಣಿಸಿಕೊಂಡಿಧ್ದೋ ಅವರ ಅಪ್ಪ-ಅಮ್ಮ ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯದಿಂದಂತೆ. ಏಕೆಂದರೆ, ಅಂತಹ ನಟರ ಕಟೌಟ್ ಮುಂದೆ, ಅವರ ಗುಣಗಾನ ಮಾಡುವ ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ ಎಂಬುದು ಸಮರ್ಥ್ ಮಾತು.
ಚಿತ್ರದಲ್ಲಿ ದೀಪ್ತಿ ಕಾಪ್ಸೆ, ಲೇಖಾ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ. ದೀಪ್ತಿ ಇಲ್ಲಿ ಯಾರೂ ಇಲ್ಲದ ಅನಾಥ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಗೊತ್ತು ಗುರಿ ಇಲ್ಲದೇ ಸಿಟಿಗೆ ಬರುವ ಹುಡುಗಿ ಅನುಭವಿಸುವ ಯಾತನೆಗಳನ್ನು ಅವರ ಪಾತ್ರದ ಮೂಲಕ ತೋರಿಸಲಾಗಿದೆಯಂತೆ. ಲೇಖಾ ಚಂದ್ರ ಸಿನಿಮಾದಲ್ಲಿ ನಟಿಸಿದ ಖುಷಿಯಷ್ಟೇ ಹಂಚಿಕೊಂಡಿದ್ದಾರೆ. ವಿಲನ್ ಆಗಿ ನಟಿಸಿದ ಉಗ್ರಂ ಮಂಜು ಸಿನಿಮಾದುದ್ದಕ್ಕೂ ಕಾಣಿಸಿಕೊಂಡ ಖುಷಿ ಹಂಚಿಕೊಂಡರು. ಚಿತ್ರವನ್ನು ಚಂದ್ರಶೇಖರ್ ನಿರ್ಮಿಸಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ.