Advertisement

ಬೆಳೆಗಳಿಗೂ ವೈಜ್ಞಾನಿಕ ಬೆಲೆ ಬೇಕು

12:15 PM Jul 22, 2018 | Team Udayavani |

ಬೆಂಗಳೂರು: ಸಚಿವರಿಗೆ ಎರಡು ಲಕ್ಷ ರೂ., ಶಾಸಕರಿಗೆ ಒಂದು ಲಕ್ಷ ರೂ. ವೇತನ, ಭತ್ಯೆಯನ್ನು ವೈಜ್ಞಾನಿಕವಾಗಿ ನಿಗದಿಪಡಿಸಿಕೊಳ್ಳುವ ಜನಪ್ರತಿನಿಧಿಗಳು ರೈತರ ಬೆಳೆಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಲಿ. ನಂತರ ಸಾಲ ಮರುಪಾವತಿಸುವಂತೆ ಹೇಳಲಿ ಎಂದು ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಮಂಜೇಗೌಡ ಹೇಳಿದರು.

Advertisement

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 38ನೇ ವರ್ಷದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿವಂಗತ ಗುಂಡೂರಾವ್‌ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ ರೈತರ ಸ್ಮರಣಾರ್ಥ “ರೈತ ಹುತಾತ್ಮ ದಿನಾಚರಣೆ’ ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಸೇರಿದಂತೆ ಸಾಕಷ್ಟು ಸಚಿವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಯಾರೊಬ್ಬರೂ ಬಂದಿಲ್ಲ. ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ದೇಶದ ಜನರಿಗೆ ಊಟ ಹಾಕುವುದೇ ರೈತರು. ದೇಶದ ಜನರ ಹೊಟ್ಟೆ ತುಂಬಿಸಲು ಹಾಗೂ ಅದಕ್ಕಾಗಿ ಶ್ರಮಿಸುವ ರೈತರ ಊಟಕ್ಕಾಗಿ ಸಾಲ ನೀಡಲಾಗಿದೆ. ಸಾಲ ಮನ್ನಾ ಮಾಡುವಂತೆ ರೈತರು ಎಂದೂ ಕೇಳಿಲ್ಲ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲಿ. ಆಮೇಲೆ ಸಾಲ ಮರುಪಾವತಿಸುವಂತೆ ಹೇಳಲಿ. ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಹಾಗೆಂದು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಸದನದಲ್ಲಿ ಹೋರಾಡಲು: ವಿಧಾನಸಭೆ ಪ್ರತಿಪಕ್ಷ ನಾಯಕರಾದ ಬಿ.ಎಸ್‌. ಯಡಿಯೂರಪ್ಪ ಅವರು ಬೀದಿಗೆ ಬರುವುದನ್ನು ಬಿಟ್ಟು ಸದನದೊಳಗೆ ಕೊರಳಪಟ್ಟಿ ಹಿಡಿದು ರೈತರ ಪರ ಕೆಲಸ ಮಾಡಿಸಬೇಕು. ಅದಕ್ಕಾಗಿಯೇ ಅವರನ್ನು ವಿಧಾನಸಭೆ ಜನ ಆರಿಸಿ ಕಳಿಸಿರುವುದು. ನಾವು ಬೀದಿಯಲ್ಲಿ ಹೋರಾಡುತ್ತೇವೆ. ಅವರು ಸದನದೊಳಗೆ ಹೋರಾಡಲಿ ಎಂದು ಹೇಳಿದರು.

ರೈತ ಮುಖಂಡ ಶಿವಕುಮಾರ್‌ ಮಾತನಾಡಿ, ರೈತರು ಸರ್ಕಾರಿ ಕಚೇರಿಗಳಲ್ಲಿ ದಾಖಲೆ ಪಡೆಯುವುದು ಕಷ್ಟವಾಗಿದೆ.
ಭ್ರಷ್ಟಾಚಾರ ತೀವ್ರವಾಗಿದೆ. ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರೈತರ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ರೈತರನ್ನು ಸಾಲ ಮಾಡುವ ಸ್ಥಿತಿಗೆ ತಂದಿರುವುದೇ ಸರ್ಕಾರ. ಚುನಾವಣೆ ಸಂದರ್ಭದಲ್ಲಿ ಪ್ರತಿ ಹಳ್ಳಿಗೆ ಹೋಗುವ ಅಭ್ಯರ್ಥಿಗಳು ಗೆದ್ದ ಮೇಲೆ ತಾಲೂಕು ಮಟ್ಟದಲ್ಲೂ ರೈತರ ಭೇಟಿಗೆ ಸಿಗುವುದಿಲ್ಲ. ರೈತಪರ ಎನ್ನುವ ಜನಪ್ರತಿನಿಧಿಗಳು ತಿಂಗಳಲ್ಲಿ ಒಂದು ದಿನ ತಮ್ಮ ಊರು ಇಲ್ಲವೇ ಕ್ಷೇತ್ರದ ರೈತರ ಸಮಸ್ಯೆಗೆ ಸ್ಪಂದಿಸಲಿ ಎಂದು ಒತ್ತಾಯಿಸಿದರು.

Advertisement

ಸಂಘದ ಗೌರವಾಧ್ಯಕ್ಷ ವಿ.ಆರ್‌. ನಾರಾಯಣ ರೆಡ್ಡಿ ಮಾತನಾಡಿದರು. ಸಂಘದ ಅಧ್ಯಕ್ಷ ಜಿ.ಜಿ.ಹಳ್ಳಿ ಬಿ.ನಾರಾಯಣ ಸ್ವಾಮಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next