Advertisement

ಬೆಳೆಗೆ ಸಂಜೀವಿನಿಯಾದ ಕೃಷಿ ಹೊಂಡದ ನೀರು

11:58 AM Aug 06, 2018 | |

ಔರಾದ: ತೇವಾಂಶ ಕೊರತೆಯಿಂದ ಒಣಗುತ್ತಿರುವ ಪಟ್ಟಣದ ರೈತರ ಹೊಲದಲ್ಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕೃಷಿ ಹೊಂಡದಲ್ಲಿ ಸಂಗ್ರಹವಾದ ನೀರು ಸಂಜೀವಿನಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸಕಾಲಕ್ಕೆ ಬಂದಿರುವ ಹಿನ್ನೆಲೆಯಲ್ಲಿ ರೈತರು ಉತ್ಸಾಹದಿಂದ ಬಿತ್ತನೆ ಮಾಡಿದ್ದರು. ಈ ವರ್ಷದ ಬೆಳೆಯಲ್ಲಿ ಉತ್ತಮ ಫಸಲು ತೆಗೆಯಬಹುದು ಎಂದು ನಿರೀಕ್ಷೆಯಲ್ಲಿದ್ದರು. ಆದರೆ 20 ದಿನಗಳಿಂದ ಮಳೆ ಬಾರದೆ ಇರುವ ಹಿನ್ನೆಲೆಯಲ್ಲಿ ಉದ್ದು, ಹೆಸರು ಹಾಗೂ ಸೋಯಾಬಿನ್‌ ಬೆಳೆಗಳು ನಾಶವಾಗುವ ಸ್ಥಿತಿಯಲ್ಲಿದ್ದವು. ಇಂಥ ಸಮಯದಲ್ಲಿ ಕೃಷಿ ಹೊಂಡಗಳು ರೈತರಿಗೆ ಆಶ್ರಯ ನೀಡಿ ಬೆಳೆಗೆ ಸಂಜೀವಿನಿಯಾಗಿ ಪರಿಣಮಿಸಿವೆ. ಔರಾದ ಪಟ್ಟಣದ ಲಕ್ಷ್ಮಣ ತುಗಾಂವೆ ಎನ್ನುವ ರೈತರ ಹೊಲದಲ್ಲಿನ ಸ್ಥಿತಿಗತಿ ಸದ್ಯ ಹೀಗಿದೆ. ಕೃಷಿ ಇಲಾಖೆಯಿಂದ 20-20 ಅಳತೆಯ ಹೊಂಡ ನಿರ್ಮಿಲಾಗಿದೆ. 10 ಅಡಿ ಆಳವಿರುವ ಈ ಹೊಂಡದಲ್ಲಿ ಆರು ಅಡಿ ನೀರು ಸಂಗ್ರಹವಾಗಿದೆ.

Advertisement

ಜನರಿಗೂ ಆಶ್ರಯ: ರೈತರ ಹೊಲದಲ್ಲಿ ನಿರ್ಮಿಸಿದ ಕೃಷಿ ಹೊಂಡದಿಂದ ಸೋಯಾಬಿನ್‌ ಬೆಳೆಗೆ ಯಂತ್ರಗಳ ಮೂಲಕ ನೀರು ಬಿಡಲಾಗುತ್ತಿದೆ. ಅದರಂತೆ ಅಕ್ಕಪಕ್ಕದ ಹೊಲದ ರೈತರು ಬೆಳೆಗಳಿಗೆ ಕ್ರಿಮಿನಾಶಕ ಸಿಂಪರಣೆ ಮಾಡಲು ಹಾಗೂ ಹೊಲದ ಅಂಚಿನಲ್ಲಿರುವ ಎರಡು ತಾಂಡಾ ನಿವಾಸಿಗಳು ನೀರು ಸರಬರಾಜು ಆಗದಿರುವ ದಿನ ಕುಡಿಯಲು ಹಾಗೂ ಮನೆ ಕೆಲಸಕ್ಕೆ ಬಳಸಲು ಸಹ ಈ ಕೃಷಿ ಹೊಂಡದಿಂದಲೇ ನೀರು ತೆಗೆದುಕೊಂಡು ಹೊಗುತ್ತಿದ್ದಾರೆ ಎಂದು ರೈತ ಲಕ್ಷ್ಮಣ ಹೇಳುತ್ತಾರೆ. 

ಉತ್ತಮ ಮಾರ್ಗದರ್ಶನ: ನಮ್ಮ ಹೊಲ ಕಲ್ಲು ಮುಳ್ಳಿನಿಂದ ಕೂಡಿದೆ. ನಾಲ್ಕು ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ ಎಂದು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ತಿಳಿಸಿದೆವು. ಆಗ, ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿ ಎಂದು ಮಾರ್ಗದರ್ಶನ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರಿಂದ ಇಂದು ನಮಗೆ ನೀರು ಸಿಕ್ಕಿದೆ. ಇದರಿಂದ ನಾವು ಮತ್ತು ನಮ್ಮ ಹೊಲದ ಸುತ್ತಮುತ್ತಲಿನ ರೈತರೂ
ಸಂತೋಷವಾಗಿದ್ದೇವೆ ಎಂದು ರೈತ ಹರ್ಷ ವ್ಯಕ್ತ ಪಡಿಸಿದ್ದಾರೆ.

ಮುಂಗಾರು ಮಳೆ ಈಚೆಗೆ ಕೈ ಕೊಟ್ಟಿದ್ದರೂ ಕೃಷಿ ಹೊಂಡ ರೈತರ ಕೈ ಹಿಡಿದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಸರ್ಕಾರ ಪ್ರತಿವರ್ಷ ರೈತರ ಕಲ್ಯಾಣಕ್ಕಾಗಿ ನೂರಾರು ಯೋಜನೆಗಳನ್ನು ರೂಪಿಸುತ್ತಿದೆ. ರೈತರಿಗೆ ಯೋಜನೆಯ ಬಗ್ಗೆ ಅಪೂರ್ಣ ಮಾಹಿತಿ ಹಾಗೂ ಅನಕ್ಷರತೆ ಇರುವ ಹಿನ್ನೆಲೆಯಲ್ಲಿ ಹಲವು ಯೊಜನೆಗಳು ಕೃಷಿ ಇಲಾಖೆ ಕಚೇರಿಯ ಗೋಡೆಗಳಿಗೆ ಸೀಮಿತವಾಗಿ ಉಳಿಯುತ್ತಿವೆ. ಕೃಷಿ ಹೊಂಡದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಇಲಾಖೆಯ ಇನ್ನುಳಿದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರೆ ರೈತರು ಅತಿವೃಷ್ಟಿಯಂತಹ ಸಮಸ್ಯೆಗಳಿಂದ ಶಾಶ್ವತವಾಗಿ ದೂರ ಉಳಿಯುತ್ತಾರೆ ಎನ್ನುವುದು ಇಲ್ಲಿನ ಪ್ರಗತಿಪರ ರೈತರ ಮಾತಾಗಿದೆ.

ಕೃಷಿ ಇಲಾಖೆಯಿಂದ ನಿರ್ಮಿಸಿದ ಕೃಷಿ ಹೊಂಡದಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ನಮ್ಮ ಹೊಲದಲ್ಲಿನ ಬೆಳೆಗೆ ನೀರು ಉಣಿಸುವುದರ ಜೊತೆಗೆ ಕೃಷಿ ಹೊಂದದಲ್ಲಿ ಮೀನು ಸಾಕಾಣಿಕೆಯನ್ನೂ ಕೂಡ ಮಾಡುತ್ತಿದೇನೆ. ಮಹಾರಾಷ್ಟ್ರದಿಂದ ಮರಿ ಮೀನುಗಳು ತಂದು ಬಿಡುತ್ತೇನೆ. ಕೃಷಿ ಇಲಾಖೆ ಅಧಿಕಾರಿಗಳ ಸೂಕ್ತ ಮಾರ್ಗದರ್ಶನದಿಂದ ನಮಗೆ ನೀರು ಸಿಕ್ಕಿದೆ.
 ಲಕ್ಷ್ಮಣ ತೆಲಂಗ, ರೈತ

Advertisement

ಸರ್ಕಾದ ಪ್ರತಿಯೊಂದು ಯೋಜನೆಗಳ ಬಗ್ಗೆ ಕಳೆದ ವರ್ಷದಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅದರಂತೆ ನಮ್ಮ ಇಲಾಖೆಯ ಅಧಿಕಾರಿಗಳಿಗೂ ರೈತ ಅನುವುಗಾರರಿಗೂ ರೈತರಿಗೆ ಮಾಹಿತಿ ನೀಡುವಂತೆ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದೇನೆ. ಇದರಿಂದ ನಮ್ಮ ತಾಲೂಕಿನಲ್ಲಿ ಉತ್ತಮ ಕೆಲಸಗಳು ನಡೆದಿವೆ. ನಿರಂತರವಾಗಿ ನಡೆಯುತ್ತವೆ.
 ಸಂಜೀವಕುಮಾರ ಮಾನಕರೆ, ತಾಲೂಕು ಕೃಷಿ ಅಧಿಕಾರಿ

ಗಡಿ ತಾಲೂಕಿನಲ್ಲಿ ನಮ್ಮ ರೈತರು ಮಳೆ ಮೇಲೆ ಅವಲಂಬಿತರಾದ್ದಾರೆ ಎಂದು ತಿಳಿದು ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಕೃಷಿ ಹೊಂಡದ ಬಗ್ಗೆ ಅರಿವು ಮೂಡಿಸಿದ್ದೇನೆ. ಕೆಲವು ರೈತರು ತಾವೇ ಮುಂದೆ ಬಂದು ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ರೈತರ ಬಳಿ ಹಣ ಇಲ್ಲವೆಂದು ತಿಳಿಸಿದ್ದರಿಂದ ಖಾಸಗಿ ಏಜೆನ್ಸಿಗಳಿಂದ ಕೃಷಿ ಹೊಂಡ ನಿರ್ಮಿಸುವ ವ್ಯವಸ್ಥೆ ಮಾಡಲಾಗಿದೆ.
 ಚಂದ್ರಕಾಂತ ಉದ್ದಬ್ಯಾಳೆ, ಔರಾದ ರೈತ ಸಂಪರ್ಕ ಕೆಂದ್ರದ ಅಧಿಕಾರಿ

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next