ಹೊಸದಿಲ್ಲಿ: “ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲಾಗದು. ಈ ವಿಚಾರದಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಕುರುಡಾಗಿ ಅನುಕರಿಸಲಾಗದು.’
ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್‌ಗೆ ಕೇಂದ್ರ ಸರಕಾರವು ಸಲ್ಲಿಸಿರುವ ಅಫಿದವಿತ್‌ನ ಸಾರಾಂಶವಿದು.
ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣ ಗೊಳಿಸಿದರೆ, ಅದು ವಿವಾಹದ ಪಾವಿತ್ರ್ಯವನ್ನೇ ಅಸ್ಥಿರಗೊಳಿಸಬಹುದು. ಅಲ್ಲದೆ, ಪುರುಷರಿಗೆ ಕಿರು ಕುಳ ನೀಡಲು ಇದನ್ನು ಮಹಿಳೆಯರು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರಕಾರವು ಮಂಗಳವಾರ ಸಲ್ಲಿಸಿದ ಅಫಿದವಿತ್‌ನಲ್ಲಿ ತಿಳಿಸಿದೆ.
“ಅನಕ್ಷರತೆ, ಬಡತನ, ಸಮಾಜದ ಸಂಕುಚಿತ ಮನೋಭಾವ, ಅತಿಯಾದ ವೈವಿಧ್ಯತೆ, ಆರ್ಥಿಕ ಅಸಮಾನತೆ ಮುಂತಾದ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತದಲ್ಲಿ ಈ ಕ್ರಮ ಸಾಧುವಲ್ಲ’ ಎಂದು ನ್ಯಾಯವಾದಿ ಮೋನಿಕಾ ಅರೋರಾ ಅಫಿದವಿತ್‌ನಲ್ಲಿ ತಿಳಿಸಿದ್ದಾರೆ. “ಈಗಾಗಲೇ ಐಪಿಸಿ ಸೆಕ್ಷನ್ 498ಎ (ವಿವಾಹಿತ ಮಹಿಳೆಗೆ ಆಕೆಯ ಪತಿ ಮತ್ತು ಅತ್ತೆ ಮನೆಯವರ ಕಿರುಕುಳ) ಅನ್ನು ಹಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ ಹಲವು ಹೈಕೋರ್ಟ್ ಗಳು ಕಳವಳ ವ್ಯಕ್ತಪಡಿಸಿವೆ. ಹೀಗಿರುವಾಗ, ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಘೋಷಿಸಿದರೆ ದುರ್ಬಳಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಒಂದೊಮ್ಮೆ ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವುದೇ ಆದರೆ ಯಾವುದು ವೈವಾಹಿಕ ಅತ್ಯಾಚಾರ ಮತ್ತು ಯಾವುದು ವೈವಾಹಿಕ ಅತ್ಯಾಚಾರವಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಾಗುತ್ತದೆ’ ಎಂದು ಕೇಂದ್ರ ಹೇಳಿದೆ. ಜತೆಗೆ, ಈ ಕುರಿತು ರಾಜ್ಯ ಸರಕಾರಗಳ ಅಭಿಪ್ರಾಯವನ್ನೂ ಕೇಳುವಂತೆ ಕೇಂದ್ರ ಸರಕಾರ ಮನವಿ ಮಾಡಿದೆ.
ಇದೇ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ನ್ಯಾಯವಾದಿ ಕೋಲಿನ್ ಗೊನ್ಸಾಲ್ವಿಸ್, “ಮದುವೆ ಎಂಬುದು ಒತ್ತಾಯಪೂರ್ವಕವಾಗಿ ಹೆಣ್ಣಿನ ಮೇಲೆ ಹಕ್ಕು ಸಾಧಿಸಲು ಗಂಡಿಗೆ ಕೊಡುವ ಅಧಿಕಾರವಲ್ಲ. ಬಲವಂತವಾಗಿ ಪತ್ನಿಯ ಮೇಲೆ ಅತ್ಯಾಚಾರ ಎಸಗಲು ನೀಡುವ ಪರವಾನಗಿಯೂ ಅಲ್ಲ. ಇಲ್ಲಿ ಅವಿವಾಹಿತ ಮಹಿಳೆಯಂತೆಯೇ, ವಿವಾಹಿತ ಮಹಿಳೆಗೂ ತನ್ನ ದೇಹದ ಮೇಲೆ ಸಂಪೂರ್ಣ ಅಧಿಕಾರವಿರುತ್ತದೆ’ ಎಂದರು.