Advertisement

Crime rate: ಅಪರಾಧ ಪ್ರಮಾಣ ಗಣನೀಯ ಹೆಚ್ಚಳ

11:32 AM Jan 04, 2024 | Team Udayavani |

ಬೆಂಗಳೂರು: ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2023ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ. ಈ ಪೈಕಿ ಕೊಲೆ, ದರೋಡೆ, ಸೈಬರ್‌ ಕ್ರೈಂ ಸೇರಿ ಪ್ರಮುಖ ಅಪರಾಧ ಪ್ರಕರಣಗಳು ಅಧಿಕವಾಗಿವೆ.

Advertisement

ಬೆಂಗಳೂರಿನಲ್ಲಿ 2022ರಲ್ಲಿ 46,187 ಪ್ರಕರಣಗಳು ದಾಖಲಾದರೆ, 2023ರಲ್ಲಿ ಬರೋಬರಿ 68,518 ಕೇಸುಗಳು ದಾಖಲಾಗಿದ್ದು, ಪತ್ತೆ ಕಾರ್ಯವು ಶೇಕಡ ಪ್ರಮಾಣದಲ್ಲಿ ಕ್ಷಿಣಿಸಿದೆ. ಈ ಕುರಿತು ನಗರ ಪೊಲೀಸ್‌ ಆಯುಕ್ತರ ಕಚೇರಿಯಿಂದ ಅಂಕಿ- ಅಂಶ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಕಳೆದ ಮೂರು ವರ್ಷದ ಅಪರಾಧ ಪ್ರಕರಣಗಳನ್ನು ಹೊಲಿಸಿದರೆ, 2023ರಲ್ಲಿ ಪ್ರಮುಖ ಅಪರಾಧ ಪ್ರಕರಣಗಳು ಅಧಿಕವಾಗಿವೆ. 2022ಕ್ಕೆ ಹೋಲಿಸಿದರೆ ಕೊಲೆ ಪ್ರಕರಣಗಳಲ್ಲಿ ಶೇ.31 ಹೆಚ್ಚಳವಾಗಿದೆ. ಅವು ಗಳಲ್ಲಿ ಪ್ರಮುಖವಾಗಿ ಸ್ಥಳದಲ್ಲಿ ತಕ್ಷಣ ಪ್ರಚೋದನೆ ಗೊಳಗಾಗಿ, ಅನೈತಿಕ ಸಂಬಂಧ, ಕೌಟುಂಬಿಕ ಕಲಹಗಳು, ಹಳೇ ದ್ವೇಷ, ಹಣಕಾಸು ವ್ಯವಹಾರ ಸಂಬಂಧಕ್ಕೆ ಹೆಚ್ಚಿನ ಕೊಲೆ ನಡೆದಿದೆ. 2023ರಲ್ಲಿ ಸ್ಥಳದಲ್ಲೇ ಪ್ರಚೋದನೆಗೊಂಡು 49 ಕೊಲೆಗಳು ನಡೆದಿವೆ.

ಸಮಾಧಾನಕರ ವಿಚಾರ ವೆಂದರೆ ಲಾಭಕ್ಕಾಗಿ ಕೊಲೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 2022ಕ್ಕೆ ಹೋಲಿಸಿದರೆ ರಾಬರಿ ಪ್ರಕರಣಗಳಲ್ಲಿ ಶೇ.41 ಹೆಚ್ಚಳವಾಗಿದೆ. 673 ದರೋಡೆ ಪ್ರಕರಣಗಳಲ್ಲಿ 385 (ಶೇ.57) ಮೊಬೈಲ್‌ ಕಸಿದು ಪರಾರಿಯಾದ ಪ್ರಕರಣಗಳಾಗಿವೆ. ಜತೆಗೆ ಸರ ಕಳವು ಕಡಿಮೆಯಾಗಿದೆ. ಮನೆ ಕಳವು ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದ್ದು, 2023ರಲ್ಲಿ 1622 ಪ್ರಕರಣಗಳು ದಾಖಲಾಗಿದ್ದು, 376 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಇನ್ನುಳಿದಂತೆ ವಾಹನ ಕಳವು 5909, ಇತರೆ ಕಳವು 2493 ಪ್ರಕರಣಗಳು ದಾಖಲಾಗಿದ್ದು, ಪತ್ತೆ ಕಾರ್ಯ ಶೇ.10ರಷ್ಟು ಮಾತ್ರ ಇದೆ. ಜತೆಗೆ ಗ್ಯಾಮ್ಲಿಂಗ್‌(ಕ್ರಿಕೆಟ್‌ ಬೆಟ್ಟಿಂಗ್‌, ಮಟ್ಕಾ, ರೇಸ್‌ ಹಾಗೂ ಇತರೆ)ಪ್ರಕರಣಗಳು 2023ರಲ್ಲಿ 639 ದಾಖಲಾಗಿದೆ. ಅಲ್ಲದೆ, ವ್ಯಕ್ತಿ ನಾಪತ್ತೆ ಪ್ರಕರಣಗಳು ಅಧಿಕ ವಾಗಿದೆ. 2022ರಲ್ಲಿ 4854 ದಾಖ ಲಾಗಿ, 4511 ಪತ್ತೆಯಾಗಿದೆ. 2023ರಲ್ಲಿ 6006 ಪ್ರಕರಣಗಳು ದಾಖಲಾಗಿ, 5026 ಪತ್ತೆಯಾಗಿವೆ. ಇನ್ನು ಅಪಹರಣ ಸಂಖ್ಯೆ ಹೆಚ್ಚಾಗಿದ್ದು, 2022ರಲ್ಲಿ 931 ದಾಖಲಾಗಿ, 908 ಪತ್ತೆಯಾಗಿವೆ. 2023ರಲ್ಲಿ 1189 ಪ್ರಕರಣ ದಾಖಲಾಗಿ, 981 ಇತ್ಯರ್ಥವಾಗಿವೆ.

ಪರಿಚಯಸ್ಥರಿಂದಲೇ ಮಹಿಳೆ ಮೇಲೆ ಅತ್ಯಾಚಾರ: ಕಳೆದ ವರ್ಷ ಮಹಿಳೆ/ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದೆ. 2022ರಲ್ಲಿ 152 ದಾಖಲಾಗಿದ್ದು, 151 ಪತ್ತೆಯಾಗಿದೆ. 2023ರಲ್ಲಿ 176 ಪ್ರಕರಣ ದಾಖಲಾಗಿದ್ದು, ಎಲ್ಲ ಪ್ರಕರಣದಲ್ಲೂ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದಂತೆ ಲೈಂಗಿಕ ಕಿರುಕುಳ, ವರದಕ್ಷಿಣಿ ಸೇರಿ ವಿವಿಧ ಮಾದರಿಯಲ್ಲಿ ಮಹಿಳೆಯರ ಮೇಲೆ 3260 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಪರಿಚಯಸ್ಥರು ಅಥವಾ ಸ್ಥಳೀಯರಿಂದಲೇ 44 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂಬುದು ಪತ್ತೆಯಾಗಿದೆ.

Advertisement

ಇನ್ನು ಮಕ್ಕಳ ಮೇಲಿನ ದೌರ್ಜನ್ಯ (ಪೋಕ್ಸೋ) ಪ್ರಕರಣದಲ್ಲಿ 2023ರಲ್ಲಿ 560 ಕೇಸ್‌ ದಾಖಲಾಗಿದ್ದು, 538 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ವಿದ್ಯುತ್‌ ಅವಘಢಕ್ಕೆ 5,848 ಮಂದಿ ಸಾವು ನಗರದಲ್ಲಿ ಅವೈಜ್ಞಾನಿಕ ವಿದ್ಯುತ್‌ ತಂತಿ ಅಳವಡಿಕೆ ಹಾಗೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದಿಲ್ಲೊಂದು ಅವಘಢಗಳು ಸಂಭವಿಸುತ್ತಲೇ ಇದೆ. 2022ರಲ್ಲಿ 43 ಪುರುಷರು, 11 ಮಂದಿ ಮಹಿಳೆಯರು ಮೃತಪಟ್ಟರೆ, 2023ರಲ್ಲಿ 28 ಪುರುಷರು, ಐವರು ಮಹಿಳೆಯರು ವಿದ್ಯುತ್‌ ಅವಘಢದಿಂದ ಮೃತಪಟ್ಟಿದ್ದಾರೆ.

ಮತ್ತೂಂದೆಡೆ ಆತ್ಮಹತ್ಯೆ ಅಥವಾ ಆಕಸ್ಮಿಕ ಸಾವು ಪ್ರಕರಣಗಳು ಹೆಚ್ಚಾಗಿದೆ. 2023ರಲ್ಲಿ 5,848 ಸಾವು ಪ್ರಕರಣಗಳು ದಾಖಲಾಗಿವೆ. ಸೈಬರ್‌ ವಂಚನೆ ಅಧಿಕ, ಪತ್ತೆ ಕ್ಷೀಣ ಸಿಲಿಕಾನ್‌ ಸಿಟಿಯಲ್ಲಿ ತಂತ್ರಜ್ಞಾನ, ತಾಂತ್ರಿಕತೆ ಬೆಳೆದಂತೆ ಸೈಬರ್‌ ವಂಚನೆ ಪ್ರಕರಣಗಳು ಅಧಿಕವಾಗುತ್ತಿವೆ. ಎಷ್ಟೇ ಜಾಗೃತಿ, ಅರಿವು ಮೂಡಿಸಿದರೂ, ವಿದ್ಯಾವಂತರೇ ವಂಚನೆಗೊಳಗಾಗುತ್ತಿದ್ದಾರೆ. 2022ರಲ್ಲಿ 9940 ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗಿದ್ದು, 2431 ಕೇಸ್‌ ಪತ್ತೆಯಾಗಿವೆ. 2023ರಲ್ಲಿ ಬರೋಬರಿ 17623 ಕೇಸ್‌ ದಾಖಲಾಗಿ, 1271 ಕೇಸ್‌ ಮಾತ್ರ ಪತ್ತೆಯಾಗಿವೆ. ಆಧಾರ್‌, ಪಾನ್‌ ಕಾರ್ಡ್‌, ಸಾಲ ಕೊಡುವುದಾಗಿ ವಂಚನೆ ಸೇರಿ ವಿವಿಧ ಮಾದರಿಯಲ್ಲಿ ವಂಚನೆಗಳು ಹೇರಳವಾಗಿವೆ.

ಪ್ರಮುಖವಾಗಿ ಸೈಬರ್‌ ಟಿಪ್‌ಲೈನ್‌, ಎನ್‌ಸಿಆರ್‌ಪಿ ಪೋರ್ಟಲ್‌, 112 ಮೂಲಕ ದಾಖಲಾದ ದೂರುಗಳನ್ನು ಎಫ್ಐಆರ್‌ಗಳನ್ನಾಗಿ ಮಾಡಿಕೊಳ್ಳಲಾಗಿದೆ. ಸೈಬರ್‌ ಅಥವಾ ಸೆನ್‌ ಠಾಣೆಗಳು ಮಾತ್ರವಲ್ಲ, ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳಲ್ಲೂ ಸೈಬರ್‌ ವಂಚನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮಾದಕ ಜಗತ್ತು ವಿಸ್ತಾರ ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದೆ. 2023ರಲ್ಲಿ 3,433 ಪ್ರಕರಣಗಳಲ್ಲಿ 103 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ. 4,399 ಮಂದಿ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಈ ಪೈಕಿ 99 ಮಂದಿ ವಿದೇಶಿಗರು ಇದ್ದಾರೆ. ಅಲ್ಲದೆ, 3,433 ಕೇಸ್‌ಗಳಲ್ಲಿ 2,721 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ.

ಇನ್ನು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಾಗೂ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ 92 ಪ್ರಕರಣಗಳು ವರದಿಯಾಗಿದ್ದವು. ಅದರಲ್ಲಿ 126 ಮಂದಿಯನ್ನು ಬಂಧಿಸಲಾಗಿತ್ತು. ಅಕ್ರಮವಾಗಿ ನೆಲೆಸಿದ್ದ 247 ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ.

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಜಾರಿ: ಠಾಣಾ ಮಟ್ಟದಲ್ಲಿ ಪೊಲೀಸ್‌ ಸೇವೆಯಲ್ಲಿನ ಲೋಪದೋಷವನ್ನು ಗುರುತಿಸಲು, ಭ್ರಷ್ಟಾಚಾರ ತಡೆಗಟ್ಟಲು ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಜಾರಿಗೆ ತರುವಲ್ಲಿ ಲೋಕಸ್ಪಂದನ ವ್ಯವಸ್ಥೆ ಯನ್ನು ಜಾರಿಗೆ ತರಲಾಗಿದೆ. ಇದುವರೆಗೆ ನಗರದಲ್ಲಿ 1,30,726 ಸಾರ್ವಜನಿಕರು ಈ ತಂತ್ರಾಂಶ ಬಳಸಿ, ಶೇ.87 ಉತ್ತಮ ಸೇವೆ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಾ ದ್ಯಂತ ಶೇ.86 ಉತ್ತಮ ಪ್ರತಿಕ್ರಿಯೆ ಬಂದಿದೆ. ಸೈಬರ್‌, ಮಾದಕ ವಸ್ತು ಕುರಿತು ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕಾಗಿ ವಿದ್ಯಾರ್ಥಿಗಳನ್ನು ಪೊಲೀಸ್‌ ಮಾರ್ಷಲ್‌ಗ‌ಳನ್ನಾಗಿ ನೇಮಿಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next