Advertisement

ಕಾಲಕ್ಕೆ ತಕ್ಕಂತೆ ಬದಲಾದ ಭಾರತದ ಕ್ರಿಕೆಟ್‌ ಜೆರ್ಸಿ

11:40 PM Jun 19, 2019 | sudhir |

ಕ್ರಿಕೆಟ್‌ನಲ್ಲಿ ಮೊದಲ ಸಲ ಬಣ್ಣದ ಜೆರ್ಸಿ ಆರಂಭವಾಗಿದ್ದು 1985ರ ನಂತರ. ಆಗ ಭಾರತ ತಂಡದ ಜೆರ್ಸಿ ಮೇಲೆ ಪ್ರಾಯೋಜಕರ ಹೆಸರು ಕೂಡ ಇರಲಿಲ್ಲ. ಇದಕ್ಕೂ ಮೊದಲು ಎಲ್ಲ ತಂಡದ ಆಟಗಾರರಿಗೆ ಇದ್ದದ್ದು ಬಿಳಿ ಬಣ್ಣದ ಶರ್ಟ್‌, ಪ್ಯಾಂಟ್‌. ಬಣ್ಣದ ಬಟ್ಟೆ. ಕ್ರೀಡಾಂಗಣದಲ್ಲಿ ಯಾವ ದೇಶದ ಆಟಗಾರ ಎನ್ನುವುದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವ ಕಾರಣಕ್ಕೆ ಬಣ್ಣದ ಬಟ್ಟೆ ಪರಿಚಯಿಸಲಾಯಿತು.

Advertisement

1992ರಲ್ಲಿ ಕಡು ನೀಲಿ ಜೆರ್ಸಿ
1992ರಲ್ಲಿ ಭಾರತ ಮೊದಲ ಸಲ ಬಣ್ಣದ ಜೆರ್ಸಿಯನ್ನು ವಿಶ್ವಕಪ್‌ನಲ್ಲಿ ಹಾಕಿ ಕಣಕ್ಕೆ ಇಳಿಯಿತು. ಮೊಹಮ್ಮದ್‌ ಅಜರುದ್ದಿನ್‌ ಕಡು ನೀಲಿ ಬಣ್ಣದ ಜೆರ್ಸಿ ತೊಟ್ಟ ಭಾರತ ತಂಡದ ನಾಯಕರಾಗಿದ್ದರು. ಹಸಿರು, ಕೆಂಪು ಹಾಗೂ ಬಿಳಿ ಬಣ್ಣದ ಸ್ಟಿಚ್‌ ಅನ್ನು ಭುಜದ ಸಮೀಪ ಕಾಣಬಹುದಾಗಿತ್ತು. ಜೆರ್ಸಿ ಮುಂಭಾಗದಲ್ಲಿ ದೇಶದ ಹೆಸರು. ಹಿಂಬದಿಯಲ್ಲಿ ಆಟಗಾರನ ಹೆಸರು ಇತ್ತು.

1993 ನೀಲಿ ಶರ್ಟ್‌ಗೆ ಕೊಕ್‌
ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಕಡು ನೀಲಿ ಬಣ್ಣದ ಜೆರ್ಸಿ ತೊಟ್ಟಿದ್ದ ಭಾರತ 1993ರಷ್ಟರಲ್ಲಿ ಹಠಾತ್‌ ಆಗಿ ಹಳದಿ ಬಣ್ಣದ ಶರ್ಟ್‌ ಧರಿಸಲು ಆರಂಭಿಸಿತು. ನೀಲಿ ಬಣ್ಣದ ಪ್ಯಾಂಟ್‌ನಲ್ಲೂ ಸ್ವಲ್ಪ ಬದಲಾವಣೆ ಮಾಡಿಕೊಂಡಿತ್ತು.

1996 ಬಣ್ಣ ಬದಲು, ಪಟ್ಟಿ ಒಂದೇ
1996ರ ವಿಶ್ವಕಪ್‌ ಸಮಯದಲ್ಲಿ ಎಲ್ಲ ತಂಡಗಳ ಜೆರ್ಸಿ ಬಣ್ಣ ವಿವಿಧತೆಯಿಂದ ಕೂಡಿತ್ತು. ಆದರೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಎಲ್ಲರಿಗೂ ಒಂದೇ ರೀತಿಯ ಪಟ್ಟಿಯನ್ನು ವಿನ್ಯಾಸಗೊಳಿಸಲಾಗಿತ್ತು. ನೋಡಲು ಅತ್ಯಾಕರ್ಷಕವಾಗಿತ್ತು. ಭಾರತ ಈ ಕೂಟದಲ್ಲಿ ತಿಳಿ ನೀಲಿ ಮತ್ತು ಹಳದಿ ಬಣ್ಣದ ಮಿಶ್ರಣ ಹೊಂದಿತ್ತು.

1999ರಲ್ಲಿ ವಿನೂತನ ಪ್ರಯೋಗ
ತಿಳಿ ನೀಲಿ ಮತ್ತು ಹಳದಿ ಜೆರ್ಸಿಯಲ್ಲಿ ಭಾರತೀಯ ಆಟಗಾರರು ವಿಶ್ವಕಪ್‌ ಕೂಟದಲ್ಲಿ ಕಂಗೊಳಿಸಿದರು. ಜೆರ್ಸಿಯ ಮುಂಭಾಗದಲ್ಲಿ ಓರೆಯಾಗಿ “ಆರ್‌’ ಆಕೃತಿಯಲ್ಲಿ ಹಳದಿ ಬಣ್ಣ ಕಾಣಬಹುದಾಗಿದೆ. ಇದು ಅಷ್ಟೂ ಜೆರ್ಸಿಗಳ ಪೈಕಿ ವಿನೂತನ ಪ್ರಯೋಗ ಎಂದರೆ ತಪ್ಪಾಗಲಾರದು.

Advertisement

ಪೇಯಿಂಟ್‌ ಜೆರ್ಸಿ!
ಆಗ ನಾಟ್‌ ವೆಸ್ಟ್‌ ಸರಣಿ ಸಮಯ 2002, ಭಾರತ ತಂಡ ಇಂಗ್ಲೆಂಡ್‌ ಸೋಲಿಸಿ ಇತಿಹಾಸ ನಿರ್ಮಿಸಿತ್ತು. ಆ ಸಮಯದಲ್ಲಿ ಭಾರತ ಜೆರ್ಸಿಯ ಮುಂಭಾಗದಲ್ಲಿ ಬ್ರಶ್‌ನಲ್ಲಿ ಬಣ್ಣದ ರಾಷ್ಟ್ರಧ್ವಜವನ್ನು ಚಿತ್ರಿಸಿದ ರೀತಿಯಲ್ಲಿ ಕಲರ್‌ಫ‌ುಲ್‌ ಆಗಿ ನೀಡಲಾಗಿತ್ತು. ಇದು ಹೊಸ ಟ್ರೆಂಡ್‌ ಸೃಷ್ಟಿಸಿತ್ತು.

2003ರ ವಿಶ್ವಕಪ್‌ಗೆ ಕಡು ನೀಲಿ ಟಚ್‌
2003ರ ವಿಶ್ವಕಪ್‌ ವೇಳೆ ಜೆರ್ಸಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿತ್ತು. ತಿಳಿ ನೀಲಿ ಬದಲಾಗಿ ಸ್ವಲ್ಪ ನೀಲಿ ಬಣ್ಣ ಹೆಚ್ಚಿಸಲಾಗಿತ್ತು. ಜತೆಗೆ ಜೆರ್ಸಿ ಅಂದವಾಗಿ ಕಾಣಿಸಲು ಕಪ್ಪು ಬಣ್ಣದ ಪ್ಯಾಚ್‌ ಅಪ್‌ ಮಾಡಲಾಗಿತ್ತು. ಅದರ ಜತೆಗೆ ಮುಂಭಾಗದಲ್ಲಿ ಭಾರತದ ರಾಷ್ಟ್ರಧ್ವಜದ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣವನ್ನು ಚೆಂದವಾಗಿ ವಿನ್ಯಾಸ ಮಾಡಲಾಗಿತ್ತು. ಮುಂಭಾಗದಲ್ಲಿ ಭಾರತ ಎಂದು ಬರೆಯಲಾಗಿತ್ತು.

2007 ವಿಶ್ವಕಪ್‌ನಲ್ಲಿ ಹೊಸತನ
2007ರ ವಿಶ್ವಕಪ್‌ ಕೂಟದಲ್ಲೂ ಭಾರತ ತಂಡದ ಜೆರ್ಸಿ ಬದಲಾಗಿತ್ತು. ನೀಲಿ ಬಣ್ಣದಲ್ಲಿ ಜೆರ್ಸಿ ಇದ್ದರೂ ಹೊಸದಾಗಿ ಮುಂಭಾಗದಲ್ಲಿ ಪ್ರಾಯೋಜಕರ ಹೆಸರು ಹಾಕಲಾಗಿತ್ತು. ಬದಿಯಲ್ಲೇ ಟೀಮ್‌ ಇಂಡಿಯಾದ ಹೆಸರನ್ನು ವಿನ್ಯಾಸಗೊಳಿಸಲಾಗಿತ್ತು.

ಪ್ರಾಯೋಜಕರಿಗೆ ಕೊಕ್‌
2011ರ ವಿಶ್ವಕಪ್‌ನಲ್ಲಿ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್‌ ಆಗಿತ್ತು. ಈ ವೇಳೆಯೂ ನಮ್ಮ ಆಟಗಾರರು ಬದಲಾದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಜೆರ್ಸಿ ಮುಂಭಾಗದಲ್ಲಿ ಆಕ್ರಮಿಸಿಕೊಂಡಿದ್ದ ಟೀಮ್‌ ಇಂಡಿಯಾ ಪ್ರಾಯೋಜಕರಾಗಿದ್ದ ಸಹರಾ ಹೆಸರನ್ನು ತೆಗೆಯಲಾಗಿತ್ತು, ತೆಳುವಾದ ಪಟ್ಟಿ ಮೂಲಕ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣವನ್ನು ಚಿತ್ರಿಸಲಾಗಿತ್ತು.

ವಿಶ್ವಕಪ್‌ ಬಳಿಕ ಮತ್ತೂಮ್ಮೆ ಬದಲು
2011ರಲ್ಲಿ ವಿಶ್ವಕಪ್‌ ಯಶಸ್ವಿಯಾಗಿ ಗೆದ್ದಿದ್ದ ಭಾರತ ಒಂದೇ ವರ್ಷದಲ್ಲಿ ಜೆರ್ಸಿ ಬದಲಾಯಿಸಿಕೊಂಡಿತು, ಹೊಸತನಕ್ಕೆ ಒಗ್ಗಿಕೊಂಡಿತು. ಸಹಾರಾ ಮತ್ತೂಮ್ಮೆ ಫ್ರಾಂಚೈಸಿಯಾಗಿ ಭಾರತ ಕ್ರಿಕೆಟ್‌ ತಂಡದ ಜೆರ್ಸಿಯ ಮುಂಭಾಗದಲ್ಲಿ ರಾರಾಜಿಸಿತು.

2015ರ ವಿಶ್ವಕಪ್‌ ಕ್ರಿಕೆಟ್‌ ಕೂಟವನ್ನು ಗಮನದಲ್ಲಿರಿ ಸಿಕೊಂಡು ಹೊಸ ಪ್ರಯೋಗ ನಡೆಸಲಾಯಿತು. ಸಂಪೂರ್ಣ ಜೆರ್ಸಿಯ ವಿನ್ಯಾಸ ಬದಲಾಯಿಸಲಾಯಿತು. ಪ್ರಾಯೋಜಕರ ಹೆಸರು, ಭಾರತದ ಹೆಸರು, ಬಿಸಿಸಿಐ ಚಿಹ್ನೆ ಜೆರ್ಸಿ ಮುಂಭಾಗದಲ್ಲಿ ಕಾಣಿಸಿಕೊಂಡಿತು.
ಈ ಬಾರಿ ಭಾರತ ಐಸಿಸಿ ಸೂಚನೆ ಮೇರೆಗೆ 2 ನಮೂನೆಯ ಜೆರ್ಸಿಯನ್ನು ಧರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next