ವಿಧಾನಸಭೆ: ರಾಜ್ಯದಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಈ ವರ್ಷ 8.50 ಕೋಟಿ ಮಾನವ ದಿನ ಸೃಷ್ಟಿಸುವ ಉದ್ದೇಶ ಹೊಂದಿದ್ದು, ಅದನ್ನು 10 ಕೋಟಿ ಮಾನವ ದಿನಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದ್ದೇವೆ. ಈಗಾಗಲೇ 1.2 ಕೋಟಿ ಮಾನವ ದಿನ ಪೂರ್ಣಗೊಳಿಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರದಿಂದ 500 ಕೋಟಿ ರೂ. ಬಾಕಿ ಬರಬೇಕಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಪ್ರಧಾನಿಯವರಿಗೂ ಪತ್ರ ಬರೆದಿದ್ದೇವೆ. ನರೇಗಾದಡಿ 4400 ಕೋಟಿ ರೂ.ವ್ಯಯಿಸಿದ್ದೇವೆ. 935 ಕೋಟಿ ರೂ. ಕಳೆದ ವರ್ಷದ ಬಾಕಿ ಇದೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ ಕೇಂದ್ರದ ಹಣವನ್ನು ರಾಜ್ಯದಿಂದಲೇ ಭರಿಸಿ, ನಂತರ ಕೇಂದ್ರದಿಂದ ಪಡೆಯುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೂ ಮಾತುಕತೆ ನಡೆಸಲಿದ್ದೇವೆ ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮಾನವ ದಿನಗಳನ್ನು ಸೃಷ್ಟಿಸಿ ಕೆಲಸ ಮಾಡಿಸಿಕೊಂಡು ತಕ್ಷಣವೇ ಅನುದಾನ ನೀಡದೇ ಇದ್ದರೆ ಹಣವು ಅಧಿಕಾರಿಗಳ ಪಾಲಾಗುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಯಾವೆಲ್ಲ ಕಾಮಗಾರಿಗಳು ನಡೆಯುತ್ತದೆ ಎಂಬ ಮಾಹಿತಿ ನೀಡಿ ಎಂದರು.
ಇದಕ್ಕೆ ದನಿಗೂಡಿಸಿದ ಗೋವಿಂದ ಕಾರಜೋಳ, ಹೊಸ ತಾಲೂಕುಗಳಿಗೆ ಪ್ರತ್ಯೇಕವಾಗಿ ಅನುದಾನ ನೀಡಲು ಸಾಧ್ಯವಾಗದೆ ಇದ್ದರೆ ವಿಧಾನಸಭಾ ಕ್ಷೇತ್ರವಾರು ಅನುದಾನ ನೀಡಿ ಎಂದು ಮನವಿ ಮಾಡಿದರು. ಸಿ.ಟಿ.ರವಿ ಮಾತನಾಡಿ, ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಹಣ ಪಾವತಿಯಾಗುತ್ತದೋ ಅಥವಾ ಕಂದಾಯ ಇಲಾಖೆಯಿಂದ ಅನುದಾನ ನೀಡುತ್ತೀರೋ ಎಂಬ ಬಗ್ಗೆ ಸ್ಪಷ್ಟನೆ ನೀಡಿ ಎಂದರು.
ಶಾಸಕರಾದ ರೇಣುಕಾಚಾರ್ಯ, ಕುಮಾರ ಬಂಗಾರಪ್ಪ, ಚಂದ್ರಪ್ಪ, ಬೋಪಯ್ಯ ಮೊದಲಾದವರು ಎದ್ದು ನಿಂತಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಪೀಕರ್ ಮಧ್ಯಪ್ರವೇಶಿಸಿ ಎಲ್ಲರನ್ನು ಸಮಾಧಾನಪಡಿಸಿದರು.