ಅಸ್ಸಾಂ ರಾಜ್ಯದ ರಾಷ್ಟ್ರೀಯ ಪೌರತ್ವ ನೋಂದಣಿಯ ಹೊಸ ಪಟ್ಟಿ ಸಮಸ್ಯೆಯನ್ನು ಬಗೆಹರಿಸುವ ಬದಲು ಇನ್ನಷ್ಟು ಹೊಸ ಸಮಸ್ಯೆಗಳನ್ನು ಸೃಷ್ಟಿಸಿದೆ. ವಿಶೇಷವೆಂದರೆ ರಾಷ್ಟ್ರೀಯ ಪೌರತ್ವ ನೋಂದಣಿಗಾಗಿ (ಎನ್‌ಆರ್‌ಸಿ) ಬಲವಾದ ಬೇಡಿಕೆ ಮಂಡಿಸಿದ್ದ ಬಿಜೆಪಿಗೂ ಈ ಪಟ್ಟಿ ಸಮಾಧಾನ ಕೊಟ್ಟಿಲ್ಲ. ಪಟ್ಟಿಗೆ ವ್ಯಾಪಕವಾದ ಆಕ್ರೋಶ ಮತ್ತು ಆತಂಕ ವ್ಯಕ್ತವಾಗಿದೆ. ಹಲವು ಪ್ರಮುಖ ಬಿಜೆಪಿ ನಾಯಕರೇ ಇದು ಪರಿಪೂರ್ಣ ಪಟ್ಟಿ ಅಲ್ಲ ಹಾಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದಿರುವುದರಿಂದ ಈ ಪ್ರಕ್ರಿಯೆ ಇನ್ನೂ ಕೆಲವು ವರ್ಷ ಮುಂದುವರಿಯುವ ಸಾಧ್ಯತೆಯಿದೆ.
ಅಸ್ಸಾಂನಲ್ಲಿರುವ ಅಕ್ರಮ ಪ್ರಜೆಗಳನ್ನು ಗುರುತಿಸುವ ಸಲುವಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಅಕ್ರಮ ಪ್ರಜೆಗಳು ಎಂದರೆ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದು ದೇಶದಲ್ಲಿ ಆಶ್ರಯ ಪಡೆದವರು. ಇದಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಕಳೆದ ವರ್ಷ ಬಿಡುಗಡೆಗೊಳಿಸಿದ ಕರಡು ಪಟ್ಟಿಯಲ್ಲಿ 40.70 ಲಕ್ಷ ಜನರು ಪಟ್ಟಿಯಿಂದ ಹೊರಗಿದ್ದರು. ಅನಂತರವೂ ಜನರಿಗೆ ಪೌರತ್ವ ನೋಂದಣಿಗೆ ಇನ್ನೊಂದು ಅವಕಾಶ ನೀಡಲಾಗಿತ್ತು. ಇದೀಗ ಬಿಡುಗಡೆಗೊಂಡ ಪಟ್ಟಿಯಲ್ಲಿ 19 ಲಕ್ಷ ಜನರು ಪಟ್ಟಿಯಿಂದ ಹೊರಗಿದ್ದಾರೆ. ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎಂದರೆ ಅವರು ಅಧಿಕೃತವಾಗಿ ಭಾರತದ ಪ್ರಜೆಗಳು ಅಲ್ಲ ಎಂದೇ ಅರ್ಥ. ಪೌರತ್ವ ನಿರಾಕರಿಸಲ್ಪಟ್ಟರೆ ರಾಜಕೀಯ, ನಾಗರಿಕ ಮತ್ತು ಆರ್ಥಿಕ ಹಕ್ಕುಗಳು ನಿರಾಕರಿಸಲ್ಪಡುತ್ತವೆ. ಅವರು ದೇಶ ರಹಿತ ಪ್ರಜೆಗಳಾಗುತ್ತಾರೆ. ಅಗಾಧ ಸಂಖ್ಯೆಯಲ್ಲಿರುವ ಈ ಪ್ರಜೆಗಳನ್ನು ಏನು ಮಾಡುವುದು ಎಂಬ ಪ್ರಶ್ನೆಗೆ ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಹೀಗಾಗಿ ಪೌರತ್ವ ನೋಂದಣಿ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿದೆ.
ಅಕ್ರಮ ಬಾಂಗ್ಲಾದೇಶೀಯರನ್ನೆಲ್ಲ ಅವರ ದೇಶಕ್ಕೆ ಗಡೀಪಾರು ಮಾಡಲಾಗುವುದು ಎಂದು ಹೇಳಲಾಗುತ್ತಿದ್ದರೂ ಇದು ಸುಲಭದ ಕೆಲಸವಲ್ಲ. ಬಾಂಗ್ಲಾದೇಶ ಅವರನ್ನು ತನ್ನ ಪ್ರಜೆಗಳೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಇದಕ್ಕೆ ಅಗತ್ಯವಿರುವ ದಾಖಲೆಗಳು ಅವರ ಬಳಿ ಇರಬೇಕು. ಇದಕ್ಕೂ ಮಿಗಿಲಾಗಿ ಅಕ್ರಮ ವಾಸಿಗಳನ್ನು ಗಡಿಪಾರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ಸ್ಪಷ್ಟ ನಿಲುವು ಹೊಂದಿಲ್ಲ. ಇತ್ತ ಆಡಳಿತ ಪಕ್ಷದ ಕೆಲವು ನಾಯಕರು ಅಕ್ರಮ ನಿವಾಸಿಗಳನ್ನು ಗಡಿಪಾರು ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದರೂ, ಇತ್ತೀಚೆಗಷ್ಟೇ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಎನ್‌ಆರ್‌ಸಿ ನಮ್ಮ ಆಂತರಿಕ ವಿಚಾರವಾಗಿದ್ದು, ನಾವೇ ಅದನ್ನು ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಬಾಂಗ್ಲಾದೇಶ ಕೂಡಾ ಇಷ್ಟರ ತನಕ ಭಾರತದಲ್ಲಿರುವ ಅಕ್ರಮ ವಾಸಿಗಳು ತನ್ನ ಪ್ರಜೆಗಳೆಂದು ಒಪ್ಪಿಕೊಂಡಿಲ್ಲ. ಭಾರೀ ಸಂಖ್ಯೆಯ ಜನರನ್ನು ದೇಶ ರಹಿತರೆಂದು ಘೋಷಿಸಿದರೆ ಎದುರಾಗಬಹುದಾದ ಅಂತರಾಷ್ಟ್ರೀಯ ಒತ್ತಡವನ್ನು ನಿಭಾಯಿಸಿಕೊಳ್ಳಲು ಯಾವ ಕಾರ್ಯತಂತ್ರವನ್ನು ಹಾಕಿಕೊಳ್ಳಲಾಗಿದೆ ಎನ್ನುವುದನ್ನು ಕೂಡ ಕೇಂದ್ರ ಇನ್ನೂ ಸ್ಪಷ್ಟಗೊಳಿಸಿಲ್ಲ. ಹೊಸ ಪಟ್ಟಿಯಲ್ಲಿ ‘ಬರೀ’ 19 ಲಕ್ಷ ಜನರು ಮಾತ್ರ ಹೊರಗುಳಿದಿರುವುದು ಬಿಜೆಪಿಯ ಕೆಲವು ನಾಯಕರ ಅತೃಪ್ತಿಗೆ ಕಾರಣ. ಅದರಲ್ಲೂ ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಹೊರಗುಳಿದವರ ಸಂಖ್ಯೆ ಬಹಳ ಕಡಿಮೆಯಿರುವುದು ಕಳೆದ ಸುಮಾರು ಎರಡು ದಶಕಗಳಿಂದ ಅಕ್ರಮ ವಾಸಿಗಳ ವಿರುದ್ಧ ಧ್ವನಿ ಎತ್ತುತ್ತಿರುವ ಬಿಜೆಪಿಯನ್ನು ತೀವ್ರ ಅಸಮಾಧಾನಕ್ಕೀಡು ಮಾಡಿದೆ. ಹೊಸ ಪಟ್ಟಿಯೂ ಲೋಪದೋಷಗಳಿಂದ ಹೊರತಾಗಿಲ್ಲ. ಒಂದೇ ಕುಟುಂಬದ ಕೆಲವು ಮಕ್ಕಳು ಪಟ್ಟಿಗೆ ಸೇರ್ಪಡೆಯಾಗಿದ್ದರೆ ಕೆಲವರನ್ನು ಹೊರಗಿಟ್ಟಿರುವುದು, ಮಾಜಿ ಶಾಸಕರ ಹೆಸರೇ ಪಟ್ಟಿಯಿಂದ ಕಾಣೆಯಾಗಿರುವಂಥ ಅನೇಕ ದೂರುಗಳು ಬರುತ್ತಿವೆ. 130 ಕೋಟಿ ಜನರಿರುವ ದೇಶದಲ್ಲಿ ತಲೆಎಣಿಕೆ ಮಾಡುವುದು ಸುಲಭದ ಕೆಲಸವಲ್ಲವೇನೋ.