Advertisement

“ಭಾಷೆಯ ಬೆಳವಣಿಗೆಗೆ ಸಾಹಿತ್ಯದ ಸೃಷ್ಟಿ, ಪುಸ್ತಕ ಪ್ರಕಟನೆ ಅಗತ್ಯ’

08:27 PM Apr 27, 2019 | Sriram |

ಮಹಾನಗರ: ತುಳು ಭಾಷೆಯ ಬೆಳವಣಿಗೆಗೆ ಸಾಹಿತ್ಯದ ಸೃಷ್ಠಿ ಹಾಗೂ ಪುಸ್ತಕ ಪ್ರಕಟನೆಯೂ ಅಗತ್ಯ. ಈ ದಿಶೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪುಸ್ತಕ ಪ್ರಕಟನೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.

Advertisement

ಅವರು ಶನಿವಾರ ನಗರದ ಉರ್ವ ಸ್ಟೋರ್‌ನಲ್ಲಿರುವ ತುಳು ಭವನದಲ್ಲಿ ತುಳು ಅಕಾಡೆಮಿ ಪ್ರಕಟಿಸಿದ ಅನುವಾದಿತ ಕೃತಿ “ಶಿಕಾರಿ’ (ಅನು: ಡಾ| ಪ್ರಮಿಳಾ ಮಾಧವ್‌, ಮೂಲ ಲೇ: ಲಲಿತಾ ರೈ) ಹಾಗೂ ಮುದ್ದು ಮೂಡುಬೆಳ್ಳೆ ಅವರ “ತುಳು ನಾಟಕ ಪರಂಪರೆ’ ಎಂಬ ಎರಡು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು.

ತುಳು ಅಕಾಡೆಮಿ ಸ್ಥಾಪನೆಯಾದ ಬಳಿಕ 25 ವರ್ಷಗಳಲ್ಲಿ ಅಕಾಡೆಮಿ ವತಿಯಿಂದ ಇದುವರೆಗೆ 197 ಪುಸ್ತಕಗಳನ್ನು ಪ್ರಕಟಿಸಿದೆ. 1 ವರ್ಷದಲ್ಲಿ 20 ಪುಸ್ತಕಗಳನ್ನು ಹೊರ ತಂದಿದೆ. 9 ಕೃತಿಗಳಿಗೆ ಧನ ಸಹಾಯ ಒದಗಿಸಲಾಗಿದೆ ಎಂದವರು ವಿವರಿಸಿದರು.

ವಸ್ತು ಸಂಗ್ರಹಾಲಯ ಸ್ಥಾಪನೆ ಗುರಿ
ಮುಂದಿನ ತಲೆಮಾರಿಗೆ ತುಳು ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ 36 ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ತುಳು ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದ್ದು, ಈ ದಿಶೆಯಲ್ಲಿ ತಾನು ಇತ್ತೀಚೆಗೆ ಧರ್ಮಸ್ಥಳಕ್ಕೆ ತೆರಳಿ ಅಲ್ಲಿನ “ಮಂಜೂಷ’ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಯೋಗ್ಯ ಸಲಹೆಗಳನ್ನು ಪಡೆದುಕೊಂಡು ಬಂದಿದ್ದೇನೆ ಎಂದರು.

“ತುಳು ನಾಟಕ ಪರಂಪರೆ’ ಕೃತಿಯನ್ನು ಉಡುಪಿಯ ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡ್ಕ ಅವರು ಮತ್ತು “ಶಿಕಾರಿ’ ಕೃತಿಯನ್ನು ಎರ್ಮಾಳು ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಡಾ| ಜ್ಯೋತಿ ಚೇಳಾçರು ಬಿಡುಗಡೆ ಮಾಡಿ ಕೃತಿಗಳನ್ನು ಪರಿಚಯಿಸಿದರು.

Advertisement

ಮುದ್ದು ಮೂಡುಬೆಳ್ಳೆ ಮತ್ತು ಡಾ| ಪ್ರಮಿಳಾ ಮಾಧವ್‌ ಅವರು ತಮ್ಮ ಕೃತಿ ಪ್ರಕಟನೆಗೆ ಮುಂದೆ ಬಂದ ತುಳು ಅಕಾಡೆಮಿಗೆ ಕೃತಜ್ಞತೆ ಸಲ್ಲಿಸಿದರು.

ಸಂಸ್ಕೃತಿ ಮೂಲ ರೂಪ ಉಳಿಯಲಿ
“ಶಿಕಾರಿ’ ಕೃತಿಯ ಮೂಲ ಲೇಖಕಿ ಲಲಿತಾ ರೈ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಮೂಲ ರೂಪದಲ್ಲಿ ಉಳಿದುಕೊಂಡು ಬರಬೇಕು. ಅವುಗಳು ಪುಸ್ತಕ ರೂಪದಲ್ಲಿ ಬಂದರೆ ಮಾತ್ರ ಎಲ್ಲರಿಗೂ ತಿಳಿಯುವಂತಾಗುತ್ತದೆ. ಹಾಗಾಗಿ ತಾನು ಬರೆಯುತ್ತಿದ್ದೇನೆ ಎಂದರು.

ಅಕಾಡೆಮಿಯ ಸದಸ್ಯ ಸಂಚಾಲಕ ಪ್ರಭಾಕರ ನೀರುಮಾರ್ಗ ಸ್ವಾಗತಿಸಿ ಬೆನೆಟ್‌ ಜಿ. ಅಮ್ಮನ್ನ ವಂದಿಸಿದರು. ರಿಜಿಸ್ಟ್ರಾರ್‌ ಚಂದ್ರಹಾಸ ರೈ ಬಿ. ಮೊದಲಾದವರು ಉಪಸ್ಥಿತರಿದ್ದರು. ಸುಧಾ ನಾಗೇಶ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next