Advertisement

ಕುಸಿತ ಭೀತಿಯ ಶಾಲೆಗೆ ಬೇಕಿದೆ ಮೂಲ ಸೌಕರ್ಯದ ಆಧಾರ

08:54 PM Jun 14, 2019 | mahesh |

ಬೆಳ್ತಂಗಡಿ: ಸರಕಾರಿ ಶಾಲೆ ಬಗ್ಗೆ ನಿರ್ಲಕ್ಷ್ಯಕ್ಕೆ ಸರಕಾರಿ ವ್ಯವಸ್ಥೆಯೇ ಕಾರಣ ಎಂಬುದಕ್ಕೆ ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯ ಮುಂಡ್ರುಪ್ಪಾಡಿ ದ.ಕ. ಜಿ.ಪಂ. ಕಿ.ಪ್ರಾ. ಶಾಲೆ ಸ್ಪಷ್ಟ ಉದಾಹರಣೆಯಾಗಿ ಕಣ್ಮುಂದೆ ಕಾಣಸಿಗುತ್ತದೆ. ಧರ್ಮಸ್ಥಳದಿಂದ 3 ಕಿ.ಮೀ ದೂರದ ಮಲೆಕುಡಿಯ ಜನಾಂಗದ ಮಕ್ಕಳೇ ಹೆಚ್ಚು ಅವಲಂಬಿಸಿರುವ ಇಲ್ಲಿನ ಶಾಲೆಯಲ್ಲಿ ಮೂಲ ಸೌಕರ್ಯದ್ದೇ ಕೊರತೆ. 1961ರಲ್ಲಿ ಮಣ್ಣಿನಿಂದ ನಿರ್ಮಿತ ಕಟ್ಟಡದಲ್ಲಿರುವ ಶಾಲೆ 2011ರಲ್ಲಿ ಸುವರ್ಣ ಮಹೋತ್ಸವ ಕಂಡಿತ್ತು. ಈವರೆಗೂ ಶಿಕ್ಷಣ ಇಲಾಖೆಯಿಂದ ಹೆಚ್ಚುವರಿ ಕೊಠಡಿ ನಿರ್ಮಿಸಲು ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸವೇ ಸರಿ.

Advertisement

ಗೆದ್ದಲು ಹಿಡಿದ ಅಡ್ಡಹಲಗೆ
1ರಿಂದ 5ನೇ ತರಗತಿವರೆಗೆ 21 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿರುವ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರಿದ್ದಾರೆ. ಹಿಂದೆ 51 ಮಕ್ಕಳ ಸಂಖ್ಯೆ ಇದ್ದು, ಸೂಕ್ತ ವ್ಯವಸ್ಥೆ ಇಲ್ಲದೆ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಗೆದ್ದಲು ಹಿಡಿದ ಮೇಲ್ಛಾವಣಿ ಅಡ್ಡಹಾಸು ದುರಸ್ತಿಪಡಿ ಸುವಂತೆ ಕಳೆದ ಹಲವು ವರ್ಷಗಳಿಂದ ಶಿಕ್ಷಣ ಇಲಾಖೆ, ಜಿ.ಪಂ. ಅಧಿಕಾರಿ ಗಳ ಗಮನ ಸೆಳೆದರೂ ಯಾರೊಬ್ಬರೂ ಗಮನ ಹರಿ ಸಿಲ್ಲ. ಮಳೆಗಾಲ ಆರಂಭ ಗೊಂಡಿದ್ದು, ಗಾಳಿ – ಮಳೆಗೆ ಅನಾಹುತ ಸಂಭವಿಸುವ ಭೀತಿಯಿದೆ.

ಬಾಗಿಲುಗಳಿಲ್ಲದ ಶೌಚಾಲಯ
ಶೌಚಾಲಯ ದುರ್ನಾತ ಬೀರುತ್ತಿದ್ದು, ಬಾಗಿಲು ಮುರಿದು ಬಿದ್ದಿದೆ. ಸಣ್ಣಪುಟ್ಟ ಮಕ್ಕಳು ಸಂಕಷ್ಟಕ್ಕೊಳಗಾಗಿದ್ದಾರೆ. ಸ್ಥಳೀಯ ದಾನಿಗಳು ಹಾಗೂ ಊರವರು ಎಸ್‌.ಡಿ. ಎಂ.ಸಿ ಒಟ್ಟಾಗಿ ಶಾಲೆಯ ದುರಸ್ತಿಗೆ ಸಹಕರಿಸಿದಲ್ಲಿ ಅನುಕೂಲವಾಗಲಿದೆ ಎಂಬುವುದು ಹೆತ್ತವರ ಕೂಗು.

ಮಣ್ಣಿನ ಗೋಡೆ
51 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಮಣ್ಣಿನ ಗೋಡೆ ಈಗಲೋ ಆಗಲೋ ಎಂಬಂತಿದೆ. ಸೂಕ್ತ ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಮಣ್ಣು ಎದ್ದು ಹೋಗಿದೆ. 2016-17ರಲ್ಲಿ ತಾ.ಪಂ.ನ 75 ಸಾವಿರ ರೂ. ಅನುದಾನದಲ್ಲಿ ಕೊಠಡಿ ದುರಸ್ತಿಪಡಿಸಲಾಗಿರುವುದು ಹೊರತುಪಡಿಸಿ ಇನ್ನಾವುದೇ ಅನುದಾನ ನಿರೀಕ್ಷಿಸುವಂತಿಲ್ಲ ಎಂಬಂತಾಗಿದೆ. ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಸಾಧ್ಯವಿಲ್ಲ ಎಂಬ ಸಬೂಬು ನೀಡುತ್ತಿದ್ದಾರೆ. ಇದರ ಹೊರತಾಗಿ ಇರುವ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳದಿರು ವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ.

 ಮನವಿ ಸಲ್ಲಿಸಿದೆ
ಶಾಲೆಗೆ ಬೇಕಿರುವ ಅಗತ್ಯಗಳ ಕುರಿತು ಪಟ್ಟಿ ಸಿದ್ಧಪಡಿಸಿ ಸಮಾಜಕಲ್ಯಾಣ ಇಲಾಖೆ ಸಹಿತ ಬಿಇಒ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಶಾಶ್ವತ ಕುಡಿಯುವ ನೀರಿಗಾಗಿ ಗ್ರಾ.ಪಂ. ನಿಂದ ಕ್ರಿಯಾಯೋಜನೆ ರಚಿಸಿ 2 ಲಕ್ಷ ರೂ. ಮೀಸಲಿರಿಸಲಾಗಿದೆ.
– ಚಂದನ್‌ ಕಾಮತ್‌, ಅಧ್ಯಕ್ಷ ರು, ಧರ್ಮಸ್ಥಳ ಗ್ರಾ.ಪಂ.

Advertisement

 ಜಿ.ಪಂ. ಗಮನಕ್ಕೆ ತರಲಾಗಿದೆ
ಶಾಲೆಗೆ ಮೂಲ ಸೌಕರ್ಯ ಒದಗಿಸುವಂತೆ ಜಿಲ್ಲಾ ಪಂಚಾಯತ್‌ ಗಮನಕ್ಕೆ ತರಲಾಗಿದೆ. ತಾಲೂಕು ಪಂಚಾಯತ್‌ ಅನುದಾನದಲ್ಲಿ ಈ ಹಿಂದೆ ನಲಿಕಲಿ ಕೊಠಡಿ ದುರಸ್ತಿ ಪಡಿಸಲಾಗಿತ್ತು. ಸವಲತ್ತು ನೀಡಲು ಮಕ್ಕಳ ಸಂಖ್ಯೆ  ಕೊರತೆ ನೆಪ ಒಡ್ಡುತ್ತಾರೆ. ಇರುವ ಮಕ್ಕಳ ರಕ್ಷಣೆ ಸವಾಲಾಗಿದೆ.
– ಎಂ.ಬಿ. ಕರಿಯ
ಅಧ್ಯಕ್ಷರು, ಎಸ್‌ಡಿಎಂಸಿ

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next