Advertisement

ನಗರದಲ್ಲಿ ವೈದ್ಯಕೀಯ ಸೀಟು ಕೊಡಿಸುವ ವಂಚಕ ಟೀಂ ಸಕ್ರಿಯ

12:33 PM Aug 29, 2018 | |

ಬೆಂಗಳೂರು: ಪ್ರತಿಷ್ಠಿತ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸುವ ತಂಡ ರಾಜಧಾನಿಯಲ್ಲಿ ಪುನಃ ಸಕ್ರಿಯಗೊಂಡಿದೆ. ಪಶ್ಚಿಮ ಬಂಗಾಳದ ಇಬ್ಬರು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ 49ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೇಂದ್ರ ವಿಭಾಗದಲ್ಲಿ ಕಳೆದ 20 ದಿನಗಳ ಅಂತರದಲ್ಲಿ ನಡೆದ ಮೂರನೇ ವಂಚನೆ ಪ್ರಕರಣ ಇದಾಗಿದೆ.

Advertisement

ವಂಚಕರಿಗೆ 49. 97ಲಕ್ಷ ರೂ. ನೀಡಿ ಮೋಸಹೋಗಿರುವ ರಾಯ್‌ಗಂಜ್‌ನ ಉದ್ಯಮಿ ರಿಯಾಝುರ್‌ ರೆಹಮಾನ್‌, ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳಾದ ಸಾಜೀದ್‌ ಖಾನ್‌, ಸಂದೀಪ್‌ ಅಗರ್‌ವಾಲ್‌ ಬಂಧನಕ್ಕೆ ಬಲೆ ಬೀಸಿದ್ದಾರೆ.

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಬಿಎಸ್‌ ವಿದ್ಯಾಭ್ಯಾಸ ಮಾಡುವ ಕನಸು ಹೊಂದಿದ ನೆರೆರಾಜ್ಯದ ವಿದ್ಯಾರ್ಥಿಗಳನ್ನೇ ಟಾರ್ಗೆಟ್‌ ಮಾಡಿಕೊಂಡಿರುವ ವಂಚಕರ ತಂಡ, ಮೊದಲು ಮೊಬೈಲ್‌ಗೆ ಸಂದೇಶ ಕಳುಹಿಸಿ ಕಡಿಮೆ ಮೊತ್ತಕ್ಕೆ ಸೀಟು ಕೊಡಿಸುವ ನೆಪವೊಡ್ಡಿ ಬಲೆಗೆ ಕೆಡುವುತ್ತಿದ್ದಾರೆ. ಬಳಿಕ ಬೆಂಗಳೂರಿಗೆ ಕರೆಸಿಕೊಂಡು ಸ್ಟಾರ್‌ ಹೋಟೆಲ್‌ಗ‌ಳಲ್ಲಿಯೇ ಹಣ ಪಡೆದು ವಂಚಿಸಿ ಪರಾರಿಯಾಗುತ್ತಿದ್ದಾರೆ.

ಕೊಲ್ಕತ್ತಾದಲ್ಲಿ ಕಚೇರಿ: ದೂರುದಾರ ರಿಯಾಝುರ್‌ ರೆಹಮಾನ್‌ ಮೊಬೈಲ್‌ಗೆ ಜುಲೈ 6ರಂದು ಮಿನರ್ವ ನಾಲೆಡ್ಜ್ ಅಂಡ್‌ ಸರ್ವೀಸ್‌ ಹೆಸರಿನಲ್ಲಿ ಮೆಸೇಜ್‌ ಬಂದಿದ್ದು, 48 ಲಕ್ಷ ರೂ.ಗಳಿಗೆ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವ ವಿವರಣೆಯಿತ್ತು. ಹೀಗಾಗಿ, ರೆಹಮಾನ್‌, ಮೆಸೇಜ್‌ ಕಳುಹಿಸಿದ್ದ ಸಾಜೀದ್‌ ಖಾನ್‌ಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಸೀಟು ಕೊಡಿಸುವ ಬಗ್ಗೆ ಅಗ್ರಿಮೆಂಟ್‌ ಮಾಡಿಕೊಳ್ಳುವ ಸಲುವಾಗಿ ಕಲ್ಕತ್ತಾ ನ್ಯೂಟೌನ್‌ನಲ್ಲಿರುವ ಕಚೇರಿಗೆ ಬರುವಂತೆ ತಿಳಿಸಿದ್ದಾನೆ.

 ತಮ್ಮ ಮಗನಿಗೆ ಸೀಟು ಸಿಗುವ ಭರವಸೆಯಿಂದ ರೆಹಮಾನ್‌, ಮಗನ ವೈದ್ಯಕೀಯ ಸೀಟಿಗೆ ಪರದಾಡುತ್ತಿದ್ದ ಸ್ನೇಹಿತ ಅಖೆ¤àರ್‌ ತಾಲೂಕ್‌ಧರ್‌ಗೂ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರೂ ಆರೋಪಿ ಹೇಳಿದ್ದ ವಿಳಾಸಕ್ಕೆ ಜುಲೈ 17ರಂದು ತೆರಳಿದ್ದು ಎರಡು ಸೀಟುಗಳಿಗೆ ಆರಂಭಿಕವಾಗಿ 4.32ಲಕ್ಷ ರೂ.ಗಳ ಚೆಕ್‌ ನೀಡಿದ್ದಾರೆ. ಈ ವೇಳೆ ಆರೋಪಿ ರಾಜೀವ್‌ಗಾಂಧಿ ಆರೋಗ್ಯ ವಿ.ವಿಯಲ್ಲಿ ಸೀಟು ಕೊಡಿಸುವ ಭರವಸೆ ನೀಡಿದ್ದಾರೆ.

Advertisement

ಹಣ ಪಡೆದು ಪರಾರಿ!: ಇದಾದ ಕೆಲವೇ ದಿನಗಳಲ್ಲಿ ರೆಹಮಾನ್‌ಗೆ ಕರೆ ಮಾಡಿದ ಸಾಜೀದ್‌ಖಾನ್‌ ಆ. 12ರಂದು ಬಿಜಿಎಸ್‌ ಕಾಲೇಜಿನಲ್ಲಿ ಕೌನ್ಸಿಲಿಂಗ್‌ ನಡೆಯುತ್ತಿದ್ದು, ಹಣ ತೆಗೆದುಕೊಂಡು ಬೆಂಗಳೂರಿಗೆ ಬನ್ನಿ ಎಂದಿದ್ದಾನೆ. ಹೀಗಾಗಿ ರೆಹಮಾನ್‌ ಸ್ನೇಹಿತನನ್ನು ಕರೆದುಕೊಂಡು ಸ್ಯಾಂಕಿ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್‌ನ ರೂಂ. 153ಗೆ ತೆರಳಿದ್ದಾರೆ. ಅಲ್ಲಿದ್ದ ಆರೋಪಿಗಳು ವಿದ್ಯಾರ್ಥಿಗಳಿಬ್ಬರ ದಾಖಲೆಗಳನ್ನು ಪಡೆದುಕೊಂಡು 44.97ಲಕ್ಷ ರೂ ಹಣ ಪಡೆದು ಕಾಲೇಜು ಬಳಿ ಹೋಗಿ ಬರುತ್ತೇವೆ ಎಂದು ಹೇಳಿ ಪರಾರಿಯಾಗಿದ್ದಾರೆ.

ಅನುಮಾನಗೊಂಡು ಕರೆ ಮಾಡಿದಾಗ ಕರೆ ಮಾಡಿದಾಗ ಆರೋಪಿಗಳು ನೀಡಿದ್ದ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್ ಬಂದಿದೆ. ಹೀಗಾಗಿ, ಹೋಟೆಲ್‌ ತೊರೆಯಲು ಹೋದಾಗ ಅವರ ಹೆಸರಿನಲ್ಲಿಯೇ ರೂಂ ಬುಕ್‌ ಮಾಡಿರುವುದು ಗೊತ್ತಾಗಿದೆ. ರೂಂ ಬಾಡಿಗೆ ಸಹ ಪಾವತಿಸಿ ಬಿಜಿಎಸ್‌ ಕಾಲೇಜು ಬಳಿ ತೆರಳಿದಾಗ ಯಾವುದೇ ಸೀಟು ಇಲ್ಲ ಎಂದಿದ್ದಾರೆ. ಒಬ್ಬರು ಪಶ್ಚಿಮ ಬಂಗಾಳಕ್ಕೆ ತೆರಳಿ ಆರೋಪಿಗಳ ಕಚೇರಿ ಪರಿಶೀಲಿಸಿದಾಗ ಬೀಗ ಹಾಕಿತ್ತು. ಹೀಗಾಗಿ ವಾಪಾಸ್‌ ಬಂದು ದೂರು ನೀಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದರು.

ಆಗಸ್ಟ್‌ 13ರಂದು ಇಬ್ಬರು ವಂಚಕರು ಹರ್ಯಾಣ ಮೂಲದ ವ್ಯಕ್ತಿಯೊಬ್ಬರಿಂದ ಕಿಮ್ಸ್‌ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ 21.50 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಅದೇ ರೀತಿ ಆಗಸ್ಟ್‌ 18ರಂದು ತಮಿಳುನಾಡು ಮೂಲದ ವಿದ್ಯಾರ್ಥಿ ಕಡಲೇಶ್ವರ್‌ ಎಂಬ ವಿದ್ಯಾರ್ಥಿ ಕೂಡ ಅಪರಿಚಿತ ವಂಚಕರ ಮಾತು ನಂಬಿ 9.4 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಎರಡೂ ಪ್ರತ್ಯೇಕ ಪ್ರಕರಣಗಳನ್ನು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಗರದಲ್ಲಿ ಒಂದೇ ತಂಡ ಮೆಡಿಕಲ್‌ ಸೀಟು ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸುತ್ತಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ.
-ಡಿ.ದೇವರಾಜು, ಕೇಂದ್ರ ವಿಭಾಗ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next