ನವದೆಹಲಿ : ಕೋವಿಡ್ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆದದಿರುವ ಭಾರತದ ಕೆಲ ವಿದ್ಯಾರ್ಥಿಗಳು ಇದೀಗ ಆತಂಕ ಹಾಗೂ ಗೊಂದಲದಲ್ಲಿ ಮುಳುಗಿದ್ದಾರೆ. ಅದಕ್ಕೆ ಕಾರಣ ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೊವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ದೊರೆಯದಿರುವುದು.
ಹೌದು, ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಹಾರಲು ಕನಸು ಕಂಡಿರುವ ಸಾಕಷ್ಟು ವಿದ್ಯಾರ್ಥಿಗಳು ಈಗ ಗೊಂದಲದಲ್ಲಿ ಸಿಲುಕಿದ್ದಾರೆ. ಸಿಬಿಎಸ್ಇ 12ನೇ ತರಗತಿ ಮುಗಿದ ಮೇಲೆ ಹಾಗೂ ಇನ್ನಿತರ ಕೋರ್ಸ್ ಗಳ ಅಧ್ಯಯನಕ್ಕಾಗಿ ಅಮೆರಿಕ ಹಾಗೂ ಲಂಡನ್ ದೇಶಗಳಿಗೆ ಪ್ರಯಾಣಿಸಲು ಸಾಕಷ್ಟು ವಿದ್ಯಾರ್ಥಿಗಳು ಯೋಜನೆ ಹಾಕಿಕೊಂಡಿದ್ದಾರೆ. ಕೋವಿಡ್ ಕಾರಣವಾಗಿ ವಿದೇಶಗಳು ಕೂಡ ತಮ್ಮ ದೇಶಕ್ಕೆ ಬರುವವರ ಮೇಲೆ ನಿಗಾ ವಹಿಸಿವೆ.
ಭಾರತದಲ್ಲಿ ನೀಡಲಾಗುತ್ತಿರುವ ಲಸಿಕೆಗಳೆರಡು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿಲ್ಲ. ಈ ಲಸಿಕೆ ಪಡೆದ ತಮಗೆ ಹೊರ ದೇಶಗಳಲ್ಲಿ ಪ್ರವೇಶ ಸಿಗುತ್ತದೆಯೋ ಇಲ್ಲವೊ ಎನ್ನುವ ಆತಂಕ ಕೆಲ ವಿದ್ಯಾರ್ಥಿಗಳಲ್ಲಿ ಕಾಡುತ್ತಿದೆ. ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದ ಸಾಕಷ್ಟು ವಿದ್ಯಾರ್ಥಿಗಳಿಗೆ ಈ ಭಯ ಕಾಡುತ್ತಿದೆ. ಹೀಗಾಗಿ ಇನ್ನೂ ಕೆಲ ವಿದ್ಯಾರ್ಥಿಗಳು ಭಾರತೀಯ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಇಂಗ್ಲಿಷ್ ಮಾಧ್ಯಮವೊಂದು ವರದಿ ಮಾಡಿದೆ.
ಈ ಬಗ್ಗೆ ತಮಗಿರುವ ಆತಂಕ ಹೊರಹಾಕಿರುವ ಖುಷಿ ಜೈನ್ ಹೆಸರಿನ ವಿದ್ಯಾರ್ಥಿನಿಯೋರ್ವಳು, ನನ್ನ ಆರೋಗ್ಯದ ದೃಷ್ಠಿಯಿಂದ ನನ್ನ ಪೋಷಕರು ನನಗೆ ಲಸಿಕೆ ಕೊಡಿಸಿದ್ದಾರೆ. ಈ ಲಸಿಕೆಗೆ ಡಬ್ಲೂಹೆಚ್ಒ ಮಾನ್ಯತೆ ಸಿಕ್ಕಿಲ್ಲ ಹಾಗೂ ಅಮೆರಿಕದಲ್ಲಿ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ ಎಂಬುವುದು ನನಗೆ ನಂತರ ಮನವರಿಕೆಯಾಯಿತು. ಮುಂದೆ ಏನಾಗುತ್ತದೆಯೊ ಎಂಬುದು ಸದ್ಯ ನನಗೆ ಗೊತ್ತಿಲ್ಲ. ನಾನು ಎರಡನೇ ಡೋಸ್ ಲಸಿಕೆ ( ಕೊವ್ಯಾಕ್ಸಿನ್ & ಕೋವಿಶಿಲ್ಡ್) ಪಡೆಯುವುದಿಲ್ಲ. ಫೈಜರ್ ( ವಿದೇಶಿ) ಲಸಿಕೆಗಾಗಿ ಕಾಯುತ್ತೇನೆ ಎಂದಿದ್ದಾಳೆ.
ಇನ್ನು ಇದು ಕೇವಲ ಖುಷಿ ಜೈನ್ ಓರ್ವಳ ಆತಂಕವಾಗಿಲ್ಲ. ಇವಳಂತೆ ಇನ್ನೂ ವಿದೇಶ ಪ್ರವಾಸದ ಕನಸು ಕಂಡಿರುವ ವಿದ್ಯಾರ್ಥಿಗಳ ಆತಂಕವಾಗಿದೆ.