ಕೊರಟಗೆರೆ: ರೈತ ಮಹಿಳೆ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಅತ್ಯಾಚಾರವೆಸಗಿ ಮೈ ಮೇಲಿನ ಚಿನ್ನಾಭರಣ ಕಸಿದುಕೊಂಡನಂತರ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗೆ 4ನೇಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.
ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಕರಕಲಘಟ್ಟ ಗ್ರಾಮದ ಈರ ಮಲ್ಲಮ್ಮ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿದ್ದ ಹನುಮ ಪಾನಮತ್ತನಾಗಿ ಆಕೆಯನ್ನು ವಿವಸ್ತ್ರ ಗೊಳಿಸಿ ಕತ್ತು ಹಿಸುಕಿ ಕೊಲೆ ಮಾಡಿ ಮೈ ಮೇಲಿದ್ದ ಒಡವೆಗಳನ್ನು ಕಸಿದುಕೊಂಡು ಪರಾರಿಯಾಗಿದ್ದನು.
ಇದನ್ನೂ ಓದಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆ 150 ಸ್ಥಾನ ಖಚಿತ : ಅರುಣ್ ಸಿಂಗ್
ಕರಕಲಘಟ್ಟ ಗ್ರಾಮದಲ್ಲಿ1994 ರಂದು ಈ ಘಟನೆ ನಡೆದು ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 26 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಸಿದ್ದಹನುಮನನ್ನು ಪತ್ತೆ ಮಾಡಿದ ಸಿಪಿಐ ನದಾಪ್ ಮತ್ತು ಪಿಎಸ್ಐ ಮಂಜುನಾಥ್ ನೇತ್ರತ್ವದ ತಂಡ ಬಂಧಿಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿತ್ತು.
ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ 4ನೇಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ್ ಆರೋಪಿಗೆ ಕಲಂ 302 ಐಪಿಸಿ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 50ಸಾವಿರ ದಂಡ, ಕಲಂ 201 ಐಪಿಸಿ ಅಡಿಯಲ್ಲಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ ಮೃತಳ ಸಹೋದರಿ ತಿಮ್ಮಕ್ಕರವರಿಗೆ ಪರಿಹಾರವಾಗಿ 50 ಸಾವಿರ ಹಣ ನೀಡುವಂತೆ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಬಿ.ಎಮ್ ನಿರಂಜನ ಮೂರ್ತಿ ವಾದ ಮಂಡಿಸಿರುತ್ತಾರೆ.