Advertisement

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

11:34 PM May 28, 2024 | Team Udayavani |

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಓರ್ವನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರ ನಡೆಯನ್ನು ಖಂಡಿಸಿ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ ಶಾಸಕ ಹರೀಶ್‌ ಪೂಂಜ ವಿರುದ್ಧ ದಾಖಲಾದ ಎರಡೂ ಪ್ರಕರಣಗಳ ತ್ವರಿತ ತನಿಖೆ ನಡೆಸಿದ ಪೊಲೀಸರು ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೇ 28ರಂದು ದೋಷಾರೋಪಣ ಪಟ್ಟಿ (ಚಾರ್ಜ್‌ ಶೀಟ್‌) ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

ಪ್ರಕರಣದ ತನಿಖೆಗಾಗಿ ಪೊಲೀಸ್‌ ಅಧೀಕ್ಷಕರು ನಿಯೋಜಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಪುತ್ತೂರು ಪೊಲೀಸ್‌ ಇನ್ಸ್‌ಪೆಕ್ಟರ್‌ ಸತೀಶ್‌ ಜಿ.ಜೆ. ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ಈ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಏನಿದು ಪ್ರಕರಣ?: ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಮೇ 18ರಂದು ಬಿಜೆಪಿ ಯುವ ಮೋರ್ಚಾ ನಾಯಕ ಶಶಿರಾಜ್‌ ಶೆಟ್ಟಿ ಹಾಗೂ ಪ್ರಮೋದ್‌ ಉಜಿರೆ ವಿರುದ್ಧ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಶಶಿರಾಜ್‌ ಅವರನ್ನು ವಿನಾಕಾರಣ ಪ್ರಕರಣದಲ್ಲಿ ಹೆಸರು ಸೇರಿಸಿ ಮಧ್ಯರಾತ್ರಿ ಮನೆಯಿಂದ ಬಂಧಿಸಿದ್ದಾರೆ ಎಂದು ಖಂಡಿಸಿ ಪೊಲೀಸ್‌ ಠಾಣೆಯಲ್ಲಿ ಶಾಸಕರು ಪ್ರತಿಭಟನೆಗೆ ಮುಂದಾದರು. ಶಾಸಕರು ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೂ ಮಾತ್ರವಲ್ಲದೆ ಪೊಲೀಸರ ವಿರುದ್ಧ ಅಸಾಂವಿಧಾನಿಕ ಪದ ಬಳಸಿ ನಿಂದಿಸಿದ್ದರು ಎಂದು ಒಂದು ಪ್ರಕರಣ ದಾಖಲಾಗಿತ್ತು.

ಈ ವಿಚಾರವನ್ನು ಖಂಡಿಸಿ ಬಿಜೆಪಿ ಮಂಡಲದ ವತಿಯಿಂದ ಬೆಳ್ತಂಗಡಿ ಆಡಳಿತ ಸೌಧದ ಬಳಿ ಮೇ 20ರಂದು ನಡೆದಿದ್ದ ಪ್ರತಿಭಟನೆಯ ವೇಳೆ ಮತ್ತೆ ಶಾಸಕರು ಪೊಲೀಸರ ವಿರುದ್ಧ ಹಾಗೂ ತಹಶೀಲ್ದಾರ್‌ ಹಾಗೂ ಸರಕಾರಿ ಸಿಬಂದಿ ವಿರುದ್ಧ ಆಡಿರುವ ಮಾತುಗಳಿಗಾಗಿ 2ನೇ ದೂರು ದಾಖಲಿಸಲಾಗಿತ್ತು. ಈ ವಿಚಾರವಾಗಿ ಶಾಸಕರಿಗೆ ನೋಟಿಸು ನೀಡಿ ಠಾಣೆಗೆ ವಿಚಾರಣೆಗೆ ಕರತರಲು ಮೇ 22ರಂದು ಪೊಲೀಸರು ಮನೆಗೆ ತೆರಳಿದ್ದ ವೇಳೆ ಅಲ್ಲೂ ಸಾವಿರಾರು ಜನ ಜಮಾಯಿಸಿದ್ದರಿಂದ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು.

ಈ ವಿಚಾರಕ್ಕೆ ಸಂಬಂಧಿಸಿ ಎಸ್‌ಪಿ ಅವರು ಮೇ 27ರಂದು ಧರ್ಮಸ್ಥಳ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಾಸಕರ ನಡೆಯ ಬಗ್ಗೆ ಹಾಗೂ ಪ್ರಕರಣದ ವಿಚಾರವಾಗಿ ಸ್ಪಷ್ಟೀಕರಣ ನೀಡಿದ್ದರು. ಹಾಗಾಗಿ ಈ ಎರಡೂ ಪ್ರಕರಣಗಳ ತ್ವರಿತ ತನಿಖೆಗೆ ಎಸ್‌ಪಿ ಅವರು ನಿಯೋಜಿಸಿದ ತಂಡ ಇದೀಗ ತನಿಖೆ ಪೂರ್ತಿಗೊಳಿಸಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next