ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಅಹಿತಕರ ಘಟನೆ ಜರುಗದಂತೆ ಕಟ್ಟುನಿಟ್ಟಿನ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಹಾಗೇ ಹೊಸ ವರ್ಷಾಚರಣೆಗೆ ಎಂ.ಜಿ.ರಸ್ತೆ, ಪ್ರಿಗೇಡ್‌ರಸ್ತೆಗೇ ಏಕೆ ಹೋಗಬೇಕು ಎಂದು ಪ್ರಶ್ನಿಸಿದೆ.
ಡಿ.31, ಜ.1ರಂದು ನಗರಾದ್ಯಂತ ಮದ್ಯ ಮಾರಾಟ ನಿರ್ಬಂಧಿಸಲು ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ಇತ್ಯರ್ಥಪಡಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾ ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ರಾಜ್ಯಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಈ ನಿರ್ದೇಶನ ನೀಡಿತು.
ನಗರದಲ್ಲಿ ಹೊಸವರ್ಷಾಚರಣೆ ವೇಳೆ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‌ಕುಮಾರ್ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದ ನ್ಯಾಯಪೀಠ, ಕಳೆದ ಬಾರಿ ನಗರದಲ್ಲಿ ನಡೆದ ಕೆಲ ಘಟನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಬಾರಿ ಅಂತಹ ಘಟನೆಗಳಿಗೆ ಅವಕಾಶ ಕೊಡಬೇಡಿ. ನಗರ ಪೊಲೀಸ್ ಆಯುಕ್ತರು ಸೇರಿದಂತೆ ಇಲಾಖೆ ಸಿಬ್ಬಂದಿ ಇದನ್ನು ಸವಾಲೆಂದು ಸ್ವೀಕರಿಸಬೇಕು ಎಂದು ತಾಕೀತು ಮಾಡಿತು.
ಇದಕ್ಕೂ ಮೊದಲು ನಡೆದ ವಿಚಾರಣೆ ವೇಳೆ, ಬ್ರಿಗೇಡ್ ಹಾಗೂ ಎಂ.ಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆ ವೇಳೆ ಮದ್ಯ ಸೇವಿಸುವ ದುಷ್ಕರ್ಮಿಗಳು ದುಷ್ಕೃತ್ಯ ಎಸಗುತ್ತಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ಇದೊಂದು ಗಂಭೀರ ವಿಚಾರ. ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುತ್ತೀರಿ. ಆದರೆ ಪ್ರತಿ ವರ್ಷ ಅಹಿತಕರ ಘಟನೆಗಳು ಪುನಾರವರ್ತನೆಯಾಗುತ್ತಿವೆ.
ಈ ಎರಡೂ ರಸ್ತೆಗಳಲ್ಲಿ ಎಷ್ಟು ಜನ ಸೇರಲಿದ್ದಾರೆ? ನಿರೀಕ್ಷೆಗೂ ಮೀರಿ ಜನ ಬಂದರೆ ಏನು ಮಾಡುತ್ತೀರಿ? ನಿಮಗೆ ನಿಯಂತ್ರಿಸಲು ಆಗದು ಎಂದಾದರೆ ಎರಡೂ ರಸ್ತೆಗಳಲ್ಲಿ ಹೊಸವರ್ಷಾಚರಣೆಗೆ ನಿರ್ಬಂಧ ಹೇರಬಹುದಲ್ಲವೇ ಎಂದು ಸರ್ಕಾರದ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.
ಗಾಂಧೀಜಯಂತಿ ಹಾಗೂ ಕೆಲ ಸಂದರ್ಭಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗುತ್ತದೆ. ಅದೇ ರೀತಿ, ಈ ಎರಡೂ ದಿನ ಮದ್ಯಮಾರಾಟ ನಿಷೇಧ ಸಂಬಂಧ ಸರ್ಕಾರ ಚಿಂತನೆ ನಡೆಸಬಹುದಲ್ಲವೇ ಎಂದೂ ನ್ಯಾಯಪೀಠ ಪ್ರಶ್ನಿಸಿತು. ಜೊತೆಗೆ ಈಗಾಗಲೇ ಹೊಸ ವರ್ಷಾಚರಣೆಗೆ ಯಾವ ರೀತಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಪೊಲೀಸ್ ಆಯುಕ್ತರು ಅಫಿಡವಿಟ್ ಸಲ್ಲಿಸುವಂತೆ ತಾಕೀತು ಮಾಡಿತ್ತು.