ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ವೇಳೆ ನಗರಾದ್ಯಂತ ಮದ್ಯಮಾರಾಟ ನಿಷೇಧ ಸಂಬಂಧ ಸರ್ಕಾರದ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಡಿ.31 ಹಾಗೂ ಜನವರಿ 1ರಂದು ನಗರದಲ್ಲಿ ಮದ್ಯ ಮಾರಾಟ ನಿರ್ಬಂಧ ಹೇರುವಂತೆ ಕೋರಿ ಎನ್. ನಾಗೇಶ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಬುಧವಾರ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಕಳೆದ ವರ್ಷ ಡಿ.31ರಂದು ರಾತ್ರಿ ನಡೆದ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣಗಳು ವರದಿಯಾಗಿವೆ. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಜೊತೆಗೆ ಎರಡೂ ದಿನಗಳ ಕಾಲ ನಡೆಯಲಿರುವ ಸಂಭ್ರಮಾಚರಣೆಯಲ್ಲಿ ಪಾನಮತ್ತರಾಗುವ ಮಂದಿ ವಾಹನಗಳನ್ನು ವೇಗವಾಗಿ ಚಲಾಯಿಸಿ ಸಂಚಾರ ನಿಯಮಗಳನ್ನು ಉಲ್ಲಂ ಸುತ್ತಾರೆ.
ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಡಿ.31 ಹಾಗೂ ಜನವರಿ 1ರಂದು ನಗರಾದ್ಯಂತ ಮದ್ಯ ಮಾರಾಟ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಳೆದ ವರ್ಷ ಅರ್ಜಿದಾರರು ಉಲ್ಲೇಖೀಸಿದ ರೀತಿ ಪ್ರಕರಣಗಳು ವರದಿಯಾಗಿಯಾಗಿದ್ದು ನಿಜವೇ? ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಈ ವೇಳೆ ಸರ್ಕಾರದ ಪರ ವಕೀಲರು, ಕೆಲವು ಪ್ರಕರಣಗಳು ವರದಿಯಾಗಿದ್ದವು ಎಂದು ತಿಳಿಸಿದರು.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಹಾಗಾದರೇ ರಾಜ್ಯಸರ್ಕಾರ ಈ ಬಾರಿ ಎರಡೂ ದಿನಗಳ ಕಾಲ ಹೊಸ ವರ್ಷ ಸಂಭ್ರಮಾಚಾರಣೆ ವೇಳೆಯಲ್ಲಿ ಕೈಗೊಳ್ಳಲಿರುವ ಕ್ರಮಗಳ ವರದಿ ಹಾಗೂ ಅರ್ಜಿದಾರರ ಮನವಿಯನ್ನು ಪರಿಗಣಿಸುವ ಕುರಿತು ಸರ್ಕಾರದ ನಿಲುವೇನು ಎಂಬುದನ್ನು ಮುಂದಿನ ವಿಚಾರಣೆ ವೇಳೆ ಸ್ಪಷ್ಟಪಡಿಸುವಂತೆ ಸೂಚಿಸಿ ಡಿ. 15ಕ್ಕೆ ವಿಚಾರಣೆ ಮುಂದೂಡಿತು.