Advertisement

ಜಾಹೀರಾತು ಬೈಲಾಗೆ ಒಪ್ಪಿಗೆ ನೀಡಲು ಕೋರ್ಟ್‌ ತಾಕೀತು

06:41 AM Jan 04, 2019 | Team Udayavani |

ಬೆಂಗಳೂರು: ನಗರದ ವ್ಯಾಪ್ತಿಗೆ ಸಂಬಂಧಿಸಿದಂತೆ ಜಾರಿಗೆ ತರಲಾಗುತ್ತಿರುವ ಜಾಹೀರಾತು ನೀತಿಯ ಉಪ ನಿಯಮಗಳಿಗೆ ಒಪ್ಪಿಗೆ ನೀಡುವ ಬಗ್ಗೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಗುರುವಾರ ಸರ್ಕಾರಕ್ಕೆ ತಾಕೀತು ಮಾಡಿದೆ. 

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಹೋರ್ಡಿಂಗ್ಸ್‌, ಬ್ಯಾನರ್‌ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌.ಸುಜಾತ ಅವರಿದ್ದ ನ್ಯಾಯಪೀಠ, ಸರ್ಕಾರಕ್ಕೆ ಈ ತಾಕೀತು ಮಾಡಿ, ವಿಚಾರಣೆಯನ್ನು ಜ.7ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ನ್ಯಾಯಪೀಠ ಜಾಹೀರಾತು ನೀತಿಯ ಉಪ ನಿಯಮಗಳ ಬಗ್ಗೆ ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲರು, ಬೈಲಾಗೆ ಈಗಾಗಲೇ ಸಾರ್ವಜನಿಕರಿಂದ ಲಿಖೀತ ಮತ್ತು ಮೌಖೀಕ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಲಿಸಲಾಗಿದೆ ಮತ್ತು ಅದನ್ನು ಪರಿಶೀಲಿಸಿ ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.

ಆಗ ಇನ್ನೂ ಯಾಕೆ ಒಪ್ಪಿಗೆ ನೀಡಿಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಕರಡು ಅಂತಿಮಗೊಳಿಸಲು ಕನಿಷ್ಠ ಇನ್ನೂ ನಾಲ್ಕು ವಾರ ಸಮಯ ಬೇಕು ಎಂದು ವಕೀಲರು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಮುಖ್ಯ ನ್ಯಾಯಮೂರ್ತಿಗಳು, ಜಾಹೀರಾತು ನೀತಿಯ ಬೈಲಾಗೆ ಒಪ್ಪಿಗೆ ನೀಡುವ ಸಂಬಂಧ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಿ, ಇಲ್ಲ ಎಂದಾದರೆ ಸಂಬಂಧಪಟ್ಟ ಕಾರ್ಯದರ್ಶಿಯವರನ್ನೇ ಕೋರ್ಟ್‌ಗೆ ಕರೆಸಿ ವಿಚಾರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಚೌಕಾಶಿಯ ಪ್ರಶ್ನೆಯೇ ಇಲ್ಲ – ಸಿಜೆ: ನಗರದ ಹಲವಡೆ ಲೈಟ್‌ ಕಂಬ ಮತ್ತು ಮರಗಳ ಮೇಲೆ ಈಗಲೂ ಫ್ಲೆಕ್ಸ್‌ಗಳನ್ನು ನೇತು ಹಾಕಲಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರದ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿಗಳು, ನಿಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ, ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿಲ್ಲವೇ?

Advertisement

ನಿಮಗೆ (ಸರ್ಕಾರಕ್ಕೆ) ಎಲ್ಲವನ್ನೂ ನ್ಯಾಯಾಲಯವೇ ಹೇಳಬೇಕೇ? ಬೆಂಗಳೂರು ಒಂದು ಮೆಟ್ರೊ ಪಾಲಿಟಿನ್‌ ಸಿಟಿ ಅನ್ನೋದನ್ನು ಮರೆಯಬೇಡಿ. ನಗರದ ಯಾವ ಭಾಗದಲ್ಲೂ ಫ್ಲೆಕ್ಸ್‌ಗಳು ನೇತಾಡಬಾರದು, ಅವುಗಳ ಹಾವಳಿಯಿಂದ ನಗರ ಮುಕ್ತವಾಗಬೇಕು. ಈ ವಿಚಾರದಲ್ಲಿ ರಾಜಿ ಅಥವಾ ಚೌಕಾಶಿಯ ಪ್ರಶ್ನೆಯೇ ಇಲ್ಲ ಎಂದು ಕಟು ಮಾತುಗಳಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next