Advertisement

“ಖುಲಾ’ಸಿಂಧುತ್ವದ ವಿವರಣೆ ಕೇಳಿದ ಕೋರ್ಟ್‌

12:33 PM Jun 20, 2017 | |

ಬೆಂಗಳೂರು: ಆಕೆ, ಹತ್ತುವರ್ಷಗಳ  ಹಿಂದೆ ಕೈ ಬಿಟ್ಟು ದುಬೈಗೆ ತೆರಳಿ ವಾಪಾಸಾಗದ ಪ್ಯಾಲೇಸ್ತೇನ್‌ ಮೂಲದ ಪತಿಗೆ, ಇಸ್ಲಾಂ ಧರ್ಮದ ಸಂಪ್ರದಾಯದಂತೆ ” ಖುಲಾ’ ಪದ್ಧತಿಯ ಅನ್ವಯ ವಿಚ್ಛೇದನ ನೀಡಿ ಮಸೀದಿಯ ಇಸ್ಲಾಮಿಕ್‌ ಕೋರ್ಟ್‌ನ ಮಾನ್ಯತೆ ಪಡೆದುಕೊಂಡಿದ್ದರು. ಇದೀಗ ಹಿಂದು ಧರ್ಮೀಯ ವ್ಯಕ್ತಿಯ ಜೊತೆ ಎರಡನೇ ಮದುವೆಯಾಗಲು ಅವಕಾಶ ಕಲ್ಪಿಸುವಂತೆ ವಿವಾಹ ಉಪನೋಂದಣಾಧಿಕಾರಿಗೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Advertisement

ನಗರದ ರೇಷ್ಮಾ ಬೇಗಂ ( ಹೆಸರು ಬದಲಿಸಲಾಗಿದೆ) ಎಂಬುವವರು ಸಲ್ಲಿಸಿರುವ ಈ ರಿಟ್‌ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಅಶೋಕ್‌ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ  ಪೀಠ, ಇಸ್ಲಾಂ ಧರ್ಮದ ಖುಲಾ ಪದ್ಧತಿ ಹಾಗೂ ಇದಕ್ಕೆ ಒಪ್ಪಿಗೆ ಸೂಚಿಸಿರುವ ಇಸ್ಲಾಮಿಕ್‌ ಕೋರ್ಟ್‌ನ ಕಾನೂನು ಮಾನ್ಯತೆ ಬಗ್ಗೆ ಪರಿಶೀಲನೆ ನಡೆಸಿ ವಿವರಣೆ ನೀಡುವಂತೆ  ರಾಜ್ಯಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಜೊತೆಗೆ ಅರ್ಜಿ ಸಂಬಂಧ ಪ್ರತಿವಾದಿಗಳಾದ  ಇನ್ಸ್‌ಫೆಕ್ಟರ್‌ ಆಫ್ ಜನರಲ್‌ ರಿಜಿಸ್ಟ್ರೇಶನ್‌ ಆಯುಕ್ತರು, ಜಿಲ್ಲಾ ವಿವಾಹ ನೋಂದಣಾಧಿಕಾರಿ, ಬನಶಂಕರಿಯಲ್ಲಿರುವ ವಿವಾಹನೋಂದಣಾಧಿಕಾರಿಗೆ ನೋಟೀಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.  

ಏನಿದು ಪ್ರಕರಣ?: ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಆಗಮಿಸಿದ್ದ ಪ್ಯಾಲೇಸ್ತೇನ್‌ ದೇಶದ ಹುದಾ ಆತ್‌ ಮೊಹಮದ್‌ ಶಾತ್‌ ಹಾಗೂ ಬೆಂಗಳೂರಿನ ರೇಷ್ಮಾ ಬೇಗಂ ಪರಸ್ಪರ ಒಪ್ಪಿಗೆ ಮೇರೆಗೆ ಆಗಸ್ಟ್‌ 18, 2000ರಲ್ಲಿ ವಿವಾಹವಾಗಿದ್ದರು.  ಈ ವಿವಾಹಕ್ಕೆ ರೇಷ್ಮಾ ಬೇಗಂ ಪೋಷಕರೂ ಒಪ್ಪಿಕೊಂಡಿದ್ದರು. ಈ ಸಂಬಂಧ 2003ರಲ್ಲಿ ಮಂಡ್ಯ ವಿವಾಹ ನೋಂದಣಿ ಕಚೇರಿಯಲ್ಲಿ ವಿಶೇಷ ವಿವಾಹ ಕಾಯಿದೆ ಅನ್ವಯ ವಿವಾಹ ನೋಂದಣಿಮಾಡಿಸಿಕೊಂಡಿದ್ದರು.

ಬಳಿಕ ಮೈಸೂರಿನಲ್ಲಿಯೇ ಹಲವು ವರ್ಷಗಳ ದಾಂಪತ್ಯ ಜೀವನ ನಡೆಸಿದ ದಂಪತಿಗೆ  2008ರ ಜುಲೈನಲ್ಲಿ ಗಂಡು ಮಗು ಜನಿಸಿತ್ತು. ಆದೇ ವರ್ಷದಲ್ಲಿ ರೇಷ್ಮಾರನ್ನು ಬಿಟ್ಟು ದುಬೈಗೆ ತೆರಳಿದ ಪತಿ  ಮೊಹಮದ್‌ ಮರಳಿ ವಾಪಾಸಾಗದೇ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.  ಪತಿಯ ಬರುವಿಕೆಗೆ ಕಾದಿದ್ದ ರೇಷ್ಮಾ, 2016ರಲ್ಲಿ  ಹರಸಾಹಸಪಟ್ಟು ಆತನ ದೂರವಾಣಿ ಸಂಪರ್ಕ ಪಡೆದುಕೊಂಡು ಕರೆ ಮಾಡಿ ಮಾತನಾಡಿದ್ದಾರೆ.

Advertisement

ಆದರೆ ಮೊಹಮದ್‌ ತಾನೂ ಭಾರತಕ್ಕೆ ಮರಳುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದಾನೆ. ಇದರಿಂದ ರೇಷ್ಮಾ, ಇಸ್ಲಾಂ ಧರ್ಮದಲ್ಲಿ ಅವಕಾಶವಿರುವಂತೆ ಖುಲಾ ನೀಡಲು ನಿರ್ಧರಿಸಿದ್ದು ಆತನಿಗೆ ಪೋಸ್ಟ್‌ಲ್‌ ಅಡ್ರೆಸ್‌ಗೆ ಖುಲಾ ಕಳಿಸಿಕೊಟ್ಟಿದು, ಆತನೂ ಒಪ್ಪಿಗೆ ತೋರಿದ್ದಾನೆ. ಬಳಿಕ ಖುಲಾ ಅಧಿಕೃತೆಗಾಗಿ  ಮೈಸೂರಿನ ಮದನಿ ಮಸೀದ್‌ ಟ್ರಸ್ಟ್‌ ಮೊರೆ ಹೋದ ಆಕೆಗೆ, ಅಲ್ಲಿನ ಇಸ್ಲಾಂ ಕೋರ್ಟ್‌, 2016ರ ಮೇ 29ರಂದು ಪತಿಯಿಂದ ವಿಚ್ಛೇದನ ಪಡೆದುಕೊಂಡ ಖುಲಾಗೆ ಮಾನ್ಯತೆ ನೀಡಿ ಆದೇಶ ಪತ್ರ ನೀಡಿದ್ದಾರೆ. 

ಎರಡನೇ ಮದುವೆಯಾಗಲು ನಿರ್ಧಾರ!:  ಪತಿ ಬಿಟ್ಟುಹೋದ ಬಳಿಕ ಬೆಂಗಳೂರಿಗೆ ಬಂದು ಮಗನ ಜೊತೆ ವಾಸಿಸುತ್ತಿದ್ದ ರೇಷ್ಮಾ ಅವರನ್ನು ಪ್ರವೀಣ್‌ಕುಮಾರ್‌ ( ಹೆಸರು ಬದಲಿಸಲಾಗಿದೆ) ಮದುವೆಯಾಗಲು ನಿರ್ಧರಿಸಿದ್ದಾರೆ. ಹೀಗಾಗಿ ರೇಷ್ಮಾ ಹಾಗೂ ಪ್ರವೀಣ್‌ ವಿಶೇಷ ವಿವಾಹ ಕಾಯಿದೆ ಸೆಕ್ಷನ್‌ (15) ವಿವಾಹ ನೋಂದಣಿ ಮಾಡಿಸುವಂತೆ ಕೋರಿ ಬನಶಂಕರಿಯ ವಿವಾಹ ನೋಂದಣಿ ಕಚೇರಿಗೆ ಫೆ. 20ರಂದು ಅರ್ಜಿ ಸಲ್ಲಿಸಿದ್ದರು.

ಆದರೆ ಅಲ್ಲಿನ ಉಪನೋಂದಣಾಧಿಕಾರಿ, ಇಸ್ಲಾಂ ಪದ್ಧತಿಯ ಖುಲ್ಲಾ ಹಾಗೂ ಅದನ್ನು ಮಾನ್ಯತೆ ಮಾಡಿರುವ ಇಸ್ಲಾಂ ಕೋರ್ಟ್‌ನ ಸಿಂಧುತ್ವ ಪ್ರಶ್ನಿಸಿ ಮೇ 4ರಂದು ಅರ್ಜಿ ವಜಾಗೊಳಿಸಿದ್ದರು. ಮುಸ್ಲಿಂ ವೈಯಕ್ತಿಕ ಕಾನೂನು 1937ರ ಕಾಯಿದೆಯ ಸೆಕ್ಷನ್‌ 2ರ ಮಾಹಿತಿ ತಿಳಿಯದೇ ತಮ್ಮ ಮದುವೆ ನೋಂದಣಿ ಮಾಡಿಸಲು ಉಪನೋಂದಣಾಧಿಕಾರಿ ನಿರಾಕರಿಸಿದ್ದಾರೆ. ಹೀಗಾಗಿ ಸಂವಿಧಾನದ ಕಲಂ 226 ಹಾಗೂ 227 ರ ಅನ್ವಯ ತಮ್ಮ ವಿವಾಹಕ್ಕೆ ಅವಕಾಶ ಮಾಡಿಕೊಡುವಂತೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next