ಮಾಲೆ: ದುಬಾೖ ಮೂಲದ ಖಾಲೀದ್ (36) ಮತ್ತು ಪೆರಿ (35) ಪರಸ್ಪರ ಭೇಟಿಯಾಗಿ ಎಂಟು ವರ್ಷಗಳ ಬಳಿಕ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಮಾ. 6ರಂದು ತಮ್ಮ ಬಂಧು-ಬಳಗದ ಸಮ್ಮುಖ ವಿವಾಹವಾಗಿದ್ದರು. ಕೆಲ ದಿನಗಳ ಬಳಿಕ ಅವರು ಮಧುಚಂದ್ರಕ್ಕೆಂದು ಮೆಕ್ಸಿಕೋದ ಕಾನ್‌ಕನ್‌ಗೆ ಹೊರಟರು. ಕೋವಿಡ್ ಆಗ ವಿಶ್ವಾದ್ಯಂತ ಹಬ್ಬಿರಲಿಲ್ಲ, ಚಾಚಿರಲಿಲ್ಲ.
ಮಾ. 19ರಂದು ಅವರು ಟರ್ಕಿ ಮೂಲಕ ಯುನೈಟೆಡ್ ಅರಬ್ ಎಮಿ ರೇಟ್ಸ್ (ಯುಎಇ)ನ ತಮ್ಮ ತವರೂರಿಗೆ ಮರಳುತ್ತಿದ್ದಾಗ ಕೋವಿಡ್ ವಿಶ್ವದೆಲ್ಲೆಡೆ
ಹರಡಲಾರಂಭಿಸಿತ್ತು. ಅವರು ಇಸ್ತಾಂಬುಲ್‌ನಲ್ಲಿ ಸಂಪರ್ಕ ವಿಮಾನವನ್ನು ಏರುವುದಲ್ಲಿದ್ದಾಗ ಅವರಿಗೆ ಅನುಮತಿ ನಿರಾ ಕರಿಸಲಾಯಿತು. ನಿಜಕ್ಕಾದರೆ ಅವರು ಮೆಕ್ಸಿಕೊದಿಂದ ಹೊರಡುತ್ತಿದ್ದಂತೆಯೇ ಟರ್ಕಿಯಲ್ಲಿ ಕೋವಿಡ್‌ಸಂಬಂಧಿ ನಿಯಮಗಳು ಜಾರಿಗೆ ಬಂದಿದ್ದವು.
ನವದಂಪತಿ ಎರಡು ದಿನಗಳ ಕಾಲ ವಿಮಾನ ನಿಲ್ದಾಣದಲ್ಲಿ ಅತಂತ್ರ ಸ್ಥಿತಿಯಲ್ಲಿ ಕಾಲ ಕಳೆಯಬೇಕಾಯಿತು. ಅನಂತರ ಅವರು ಸ್ವದೇಶಕ್ಕೆ ಮರಳುವ ದಾರಿ ಕಾಣದೆ ಮಧುಚಂದ್ರದ ಹೊಸ ತಾಣವಾಗಿ ಮಾಲ್ದಿವ್ಸ್‌ಗೆ ತೆರಳಲು ನಿರ್ಧರಿಸಿದರು.ಅಲ್ಲಿಗೆ ತಲಪಿದಾಗ ಅವರಿಗೆ ಅಲ್ಲಿ ಕೆಲವೇ ಪ್ರವಾಸಿಗರು ಉಳಿದಿರುವುದು ಗಮನಕ್ಕೆ ಬಂದಿತು ಮತ್ತು ಹೆಚ್ಚಿನವರು ಸ್ವದೇಶಕ್ಕೆ ಮರಳುವುದಕ್ಕಾಗಿ ವಿಮಾನಗಳಿಗೆ ಕಾಯುತ್ತಿದ್ದರು. ಅವರ ಹೊಟೇಲ್‌ನಲ್ಲಿದ್ದ ಉಳಿದವರು ನಿರ್ಗಮಿಸಿದ ಬಳಿಕ ಅವರನ್ನು ಇನ್ನೊಂದು ದ್ವೀಪಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಕೂಡ ಇದೇ ಸ್ಥಿತಿ ಮರುಕಳಿಸಿತು. ಮಾಲ್ದೀವ್ಸ್ ಸರಕಾರ ವಿಹಾರಧಾಮವೊಂದರಲ್ಲಿ ಸ್ಥಾಪಿಸಿದ್ದ ವಿಶೇಷ ಕ್ವಾರಂಟೈನ್‌ನಲ್ಲಿ ಅವರು ಒಂದು ತಿಂಗಳ ಕಾಲ ಕಳೆದರು. ವಿಹಾರಧಾಮದಲ್ಲಿ ಅವರಂತೆ 70 ಮಂದಿ ಇದ್ದರು. ಈ ಪೈಕಿ ಅನೇಕರು ಹನಿಮೂನ್‌ಗೆ ಬಂದವರಾಗಿದ್ದರು.
ಸಿಕ್ಕಿಹಾಕಿಕೊಂಡ ಪ್ರವಾಸಿಗರು
ಮಾಲ್ದಿವ್ಸ್‌ನಲ್ಲಿ ಈಗ 300 ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ. ಹೊಸ ಪ್ರವಾಸಿಗರ ಆಗಮನದ ಮೇಲೆ ನಿಷೇಧ ಹೇರಲಾಗಿದೆ. ಖಾಲೀದ್ ಮತ್ತು ಪೆರಿ ದಂಪತಿ ದುಬಾೖಗೆ ಮರಳುವುದಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಆದರೂ ತಾವು ಒಂದು ಉತ್ತಮ ಜಾಗದಲ್ಲಿ ಸಿಕ್ಕಿಬಿದ್ದಿದ್ದೇವೆಂದು ಅವರು ಹೇಳುತ್ತಾರೆ. ಹೆಚ್ಚಾಗಿ ಅವರು ಸಮಯವನ್ನು ಕೊಠಡಿಯಲ್ಲೇ ಕಳೆಯುತ್ತಿದ್ದು ತಮ್ಮ ಲ್ಯಾಪ್‌ಟಾಪ್ ಮೂಲಕ ಕಚೇರಿ ಕೆಲಸ ಮಾಡಲಾರಂಭಿಸಿದ್ದಾರೆ. ಮಾಲ್ದಿವ್ಸ್‌ನಲ್ಲಿ ಮಳೆಯಾಗುತ್ತಿರುವುದರಿಂದ ಮತ್ತು ಈಗ ರಮ್ಜಾನ್ ಉಪವಾಸದ ಮಾಸವಾಗಿರುವುದರಿಂದ ಅವರಿಗೆ ಒಂದೆರಡು ಬಾರಿಗಿಂತ ಹೆಚ್ಚು ಸಲ ಸಮುದ್ರತೀರಕ್ಕೆ ಹೋಗಲು ಸಾಧ್ಯವಾಗಿಲ್ಲ.
ಈಗ ಅವರು ಸ್ವದೇಶಕ್ಕೆ ಮರಳುವುದಕ್ಕಾಗಿ ಯುಎಇ ಅಧಿಕಾರಿಗಳ ನೆರವು ಕೋರುತ್ತಿದ್ದಾರೆ. ಮೆಕ್ಸಿಕೊಕ್ಕೆ ಮಧುಚಂದ್ರಕ್ಕೆಂದು ತೆರಳಿದ್ದ ವೇಳೆ ತಮ್ಮ ಮಧುಚಂದ್ರ ಹೀಗೆ ದೀರ್ಘಕಾಲ ಮುಂದುವರಿಯಬಹುದೆಂದು ಅವರು ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ.